ADVERTISEMENT

ಅದಿರು ಅಕ್ರಮ ಸಾಗಣೆ: ಎಲ್ಲ ಆಯಾಮಗಳಿಂದ ತನಿಖೆ–ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 2:48 IST
Last Updated 20 ಜನವರಿ 2026, 2:48 IST
ಸುಮನ್‌ ಪೆನ್ನೇಕರ್‌ 
ಸುಮನ್‌ ಪೆನ್ನೇಕರ್‌    

ಬಳ್ಳಾರಿ: ಸಂಡೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿರುವ ಅದಿರು ಅಕ್ರಮ ಸಾಗಣೆ ಪ್ರಕರಣವನ್ನು ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಪೆನ್ನೇಕರ್‌ ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಯಾವುದೇ ಪರ್ಮಿಟ್‌ ಇಲ್ಲದೇ, ದಾಖಲೆಗಳಿಲ್ಲದೇ ಟ್ರಕ್‌ವೊಂದರಲ್ಲಿ ಕಬ್ಬಿಣದ ಅದಿರು ಸಾಗಣೆ ಮಾಡುತ್ತಿರುವ ಬಗ್ಗೆ ಸಂಡೂರು ಠಾಣೆಗೆ ಜ.16ರಂದು ಮಾಹಿತಿ ಬಂದಿತ್ತು. ಲಾರಿಯನ್ನು ವಶಕ್ಕೆ ಪಡೆದು ಪರಿಶೀಲಿಸಲಾಯಿತು. ಜ.17ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಕರೆಸಿಕೊಂಡು ಭೂವಿಜ್ಞಾನಿಯಿಂದ ದೂರು ಪಡೆದು ಪ್ರಕರಣ ದಾಖಲಿಸಿದ್ದೇವೆ’ ಎಂದು ಸುಮನ್‌ ಹೇಳಿದರು.  

‘ತಿಪ್ಪೆಸ್ವಾಮಿ ಎಂಬ ಚಾಲಕ ಯಾವುದೇ ಪರ್ಮಿಟ್‌ ಇಲ್ಲದೇ 20 ಟನ್‌ ಅದಿರನ್ನು ಲಾರಿಯಲ್ಲಿ ತುಂಬಿಕೊಂಡು ಹೋಗುತ್ತಿದ್ದದ್ದು ಪ್ರಾಥಮಿಕ ವಿಚಾರಣೆಯಿಂದ ಗೊತ್ತಾಗಿದೆ.  ಚಾಲಕನ ಸಂಪರ್ಕದಲ್ಲಿ ಯಾರಿರಬಹುದು ಎಂಬುದನ್ನು ತನಿಖೆ ಮಾಡುತ್ತಿದ್ದೇವೆ’ ಎಂದರು.  

ADVERTISEMENT

‘ಎನ್‌ಎಂಡಿಸಿ ಗಣಿಯಿಂದ ಆಂಧ್ರಕ್ಕೆ ಅದಿರು ಸಾಗಣೆಯಾಗುತ್ತಿತ್ತು ಎಂದು ಗೊತ್ತಾಗಿದೆ. ಇದರಲ್ಲಿ ಯಾರ್‍ಯಾರು ಇದ್ದಾರೆ, ಈ ಮೊದಲು ಇಂಥ ಘಟನೆಗಳು ನಡೆದಿದ್ದವೇ ಎಂಬುದೂ ಸೇರಿದಂತೆ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ಜಿಪಿಎಸ್‌ ಇರುವ ಲಾರಿಯಾಗಿದ್ದರಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಂದಲೂ ಒಂದಷ್ಟು ಮಾಹಿತಿ ಕೇಳಿದ್ದೇವೆ. ಲಾರಿ ಹೇಗೆ ಗಣಿಯಿಂದ ಹೊರಬಂದಿತು ಎಂಬುದರ ಮಾಹಿತಿ ಕೇಳುತ್ತಿದ್ದೇವೆ’ ಎಂದು ತಿಳಿಸಿದರು.  

‘ಸಾಯಿ ಬಾಲಜಿ ಎಂಬ ಆಂಧ್ರದ ಕಾರ್ಖಾನೆಗೆ ಅದಿರು ಸಾಗಣೆಯಾಗುತ್ತಿತ್ತು ಎಂದು ಚಾಲಕ ಹೇಳಿದ್ದಾನೆ. ಆ ಕಾರ್ಖಾನೆಯವರನ್ನೂ ಕರೆಸಿ ವಿಚಾರಣೆ ಮಾಡುತ್ತೇವೆ’ ಎಂದು ಸುಮನ್‌ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.