ತೋರಣಗಲ್ಲು: ‘ಸಂಸದ ತುಕಾರಾಂ ಅವರು ವಾಲ್ಮೀಕಿ ನಿಗಮದ ಹಣದಿಂದ ಲೋಕಸಭಾ ಚುನಾವಣೆಯಲ್ಲಿ ಕಾನೂನು ಬಾಹಿರವಾಗಿ ಆಯ್ಕೆಯಾಗಿದ್ದು, ಈ ಉಪ ಚುನಾವಣೆಯಲ್ಲಿ ಸರ್ಕಾರದ ಹಣ ಬಲ, ತೋಳ್ಬಲ ನಡೆಯುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಜನ ಗೆಲ್ಲಬೇಕಾದರೆ ಕಾಂಗ್ರೆಸ್ ಸೋಲಬೇಕು’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಹೋಬಳಿಯ ಮೆಟ್ರಿಕಿ ಗ್ರಾಮದಲ್ಲಿ ಸೋಮವಾರ ಸಂಡೂರು ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಜಯ ಗಳಿಸಿದರೆ ಮುಂದಿನ ದಿನಗಳಲ್ಲಿ ಮೆಟ್ರಿಕಿ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮೀಣ ಪ್ರದೇಶಗಳ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ನೂತನ ಪ್ರೌಢಶಾಲೆಯನ್ನು ಮೆಟ್ರಿಕಿ ಗ್ರಾಮದಲ್ಲಿ ಆರಂಭಿಸಲಾಗುವುದು. ತೋರಣಗಲ್ಲು ಹೋಬಳಿಯ ಎಲ್ಲ ಗ್ರಾಮಗಳಿಗೆ ರಸ್ತೆ, ಕುಡಿಯುವ ನೀರು, ವಸತಿ ಸೇರಿದಂತೆ ಇತರೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.
ಶಾಸಕ ಜನಾರ್ಧನ ರೆಡ್ಡಿ, ಅಭ್ಯರ್ಥಿ ಬಂಗಾರು ಹನುಮಂತ, ಬಿಜೆಪಿಯ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷ ಜಿ.ಟಿ.ಪಂಪಾಪತಿ, ಮುಖಂಡರಾದ ಕೆ.ಎಸ್.ದಿವಾಕರ, ಕೃಷ್ಣಪ್ಪ, ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.