ADVERTISEMENT

‘ಚಿಲ್ಲರೆ ಮಾರುಕಟ್ಟೆಗೆ ಭಾರತ ಚಿನ್ನದ ಗಣಿ’

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 10:02 IST
Last Updated 29 ಆಗಸ್ಟ್ 2019, 10:02 IST
ಕಾರ್ಯಕ್ರಮದಲ್ಲಿ ಗಣ್ಯರು ಪುಸ್ತಕ ಬಿಡುಗಡೆಗೊಳಿಸಿದರು
ಕಾರ್ಯಕ್ರಮದಲ್ಲಿ ಗಣ್ಯರು ಪುಸ್ತಕ ಬಿಡುಗಡೆಗೊಳಿಸಿದರು   

ಹೊಸಪೇಟೆ: ಡಾ. ಅನಸೂಯ ಅಂಗಡಿ ಅವರು ಬರೆದಿರುವ ‘ರಿಟೇಲ್‌ ಮ್ಯಾನೇಜ್‌ಮೆಂಟ್‌’, ‘ಚಿಲ್ಲರೆ ವ್ಯಾಪಾರ ನಿರ್ವಹಣೆ’ ಕುರಿತ ಎರಡು ಪುಸ್ತಕಗಳ ಬಿಡುಗಡೆ ಗುರುವಾರ ನಗರದ ಉಗಮದೇವಿ ಭವರಲಾಲ್‌ ನಾಹರ್‌ ಥಿಯೊಸಫಿಕಲ್‌ ಮಹಿಳಾ ಕಾಲೇಜಿನಲ್ಲಿ ನಡೆಯಿತು.

ಶಂಕರ್‌ಆನಂದ್ ಸಿಂಗ್ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ವಾರುಣಿ ಮಾತನಾಡಿ, ‘1990ರ ದಶಕದಲ್ಲಿ ಹೊಮ್ಮಿದ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಅಲೆಯು ಭಾರತದಲ್ಲಿ ಚಿಲ್ಲರೆ ವ್ಯಾಪಾರದ ಹೊಸ ಯುಗದ ಪ್ರಾರಂಭಕ್ಕೆ ಮುನ್ನುಡಿ ಬರೆಯಿತು’ ಎಂದರು.

‘ಬಂಡವಾಳ ಹೂಡಿಕೆಗೆ ಭಾರತೀಯ ಚಿಲ್ಲರೆ ವ್ಯಾಪಾರ ಮಾರುಕಟ್ಟೆಯು ಅತ್ಯಂತ ಆಕರ್ಷಣೀಯ ಕ್ಷೇತ್ರವಾಗಿದೆ. ಪ್ರಪಂಚದ ಬಹುತೇಕ ಚಿಲ್ಲರೆ ವ್ಯಾಪಾರಿಗಳು ಭಾರತದಲ್ಲಿ ಬಂಡವಾಳ ಹೂಡಲು ಇಚ್ಛಿಸುವುದು ಈ ಕಾರಣಕ್ಕಾಗಿ. ಜಗತ್ತಿನಲ್ಲಿ ಹೊರಹೊಮ್ಮುತ್ತಿರುವ 30 ಶ್ರೇಷ್ಠ ಮಾರುಕಟ್ಟೆಗಳಲ್ಲಿ ಭಾರತವು ಮೊದಲನೆ ಸ್ಥಾನ ಪಡೆದಿದೆ. ಭಾರತದ ಚಿಲ್ಲರೆ ವ್ಯಾಪಾರ ವಲಯವು ಬಹುತೇಕ ವಿಭಜನೆಗೊಂಡಿದ್ದು, ಸಂಘಟಿತ ಚಿಲ್ಲರೆ ವ್ಯಾಪಾರದ ಕೊಡುಗೆಯು ಒಟ್ಟು ಚಿಲ್ಲರೆ ಮಾರಾಟದ ಶೇ. 2 ರಷ್ಟಿದೆ’ ಎಂದು ವಿವರಿಸಿದರು.

ADVERTISEMENT

‘ಪ್ರಸ್ತುತ, ಭಾರತವು ಪ್ರಪಂಚದಲ್ಲಿ ಹೊರಹೊಮ್ಮುತ್ತಿರುವ ಅತ್ಯಂತ ಆಕರ್ಷಣೀಯ ಚಿಲ್ಲರೆ ಮಾರುಕಟ್ಟೆಗಳಲ್ಲಿ ಐದನೇ ಸ್ಥಾನ ಪಡೆದಿದೆ. ಭಾರತವನ್ನು ಸಂಭಾವ್ಯ ಚಿನ್ನದ ಗಣಿಯಾಗಿ ನೋಡಲಾಗುತ್ತಿದೆ. ಭಾರತದಲ್ಲಿ ಚಿಲ್ಲರೆ ವ್ಯಾಪಾರವು ಹೆಚ್ಚಿನ ಉದ್ಯೋಗವಕಾಶವನ್ನು ಕಲ್ಪಿಸುತ್ತಿದ್ದು, ಕೃಷಿಯ ನಂತರದ ಎರಡನೇ ಸ್ಥಾನವನ್ನು ಹೊಂದಿದೆ’ ಎಂದು ತಿಳಿಸಿದರು.

ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಜಿ.ಭರಮಲಿಂಗನ ಗೌಡ,‘ಪುಸ್ತಕಗಳು ಉತ್ತಮ ಸ್ನೇಹಿತರಿದ್ದಂತೆ.ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು‘ಎಂದು ತಿಳಿಸಿದರು.

ಕಾರ್ಯದರ್ಶಿಅಶೋಕ ಜೀರೆ, ಸದಸ್ಯರಾದ ಡಾ. ಹನುಮಂತ ರಾವ್,ಪ್ರಾಚಾರ್ಯೆಬಿ. ಮಂಜುಳಾ,ಐ.ಕ್ಯೂ.ಎ.ಸಿ ಸಂಚಾಲಕಿ ಸಂಗೀತಾ ಗಾಂವಕರ್, ಲೇಖಕಿ ಅನಸೂಯ ಅಂಗಡಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆಅಂಜಲಿ ದೇಸಾಯಿ, ಅತಿಯಾ ಕೌಸರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.