ADVERTISEMENT

ಐಎಸ್‌ಆರ್ ಸಕ್ಕರೆ ಕಾರ್ಖಾನೆ: ನಡೆಯದ ರಾಜಿ ಸಭೆ; ಸಂಧಾನ ವಿಫಲ

ನಾಲ್ಕು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಐಎಸ್‌ಆರ್‌ ವರ್ಕರ್ಸ್‌ ಯೂನಿಯನ್‌

ಶಶಿಕಾಂತ್ ಎಸ್. ಶೆಂಬೆಳ್ಳಿ
Published 8 ಸೆಪ್ಟೆಂಬರ್ 2020, 15:56 IST
Last Updated 8 ಸೆಪ್ಟೆಂಬರ್ 2020, 15:56 IST
ಹೊಸಪೇಟೆಯ ಐಎಸ್‌ಆರ್‌ ಸಕ್ಕರೆ ಕಾರ್ಖಾನೆ ಮುಚ್ಚುವುದಕ್ಕಿಂತ ಮೊದಲು ಕಬ್ಬು ನುರಿಸುತ್ತಿದ್ದ ದೃಶ್ಯ
ಹೊಸಪೇಟೆಯ ಐಎಸ್‌ಆರ್‌ ಸಕ್ಕರೆ ಕಾರ್ಖಾನೆ ಮುಚ್ಚುವುದಕ್ಕಿಂತ ಮೊದಲು ಕಬ್ಬು ನುರಿಸುತ್ತಿದ್ದ ದೃಶ್ಯ   

ಹೊಸಪೇಟೆ: ಬಾಕಿ ಹಣ ಪಾವತಿಗೆ ಸಂಬಂಧಿಸಿದಂತೆ ನಗರದ ಚಿತ್ತವಾಡ್ಗಿ ‘ಇಂಡಿಯನ್‌ ಶುಗರ್‌ ರಿಫೈನರಿ’ (ಐಎಸ್‌ಆರ್‌) ಸಕ್ಕರೆ ಕಾರ್ಖಾನೆ ನೌಕರರು ಹಾಗೂ ಆಡಳಿತ ಮಂಡಳಿಯವರ ನಡುವೆ ನಿಗದಿಯಾಗಿದ್ದ ರಾಜಿ ಸಂಧಾನ ಸಭೆ ವಿಫಲಗೊಂಡಿದೆ. ಇದರಿಂದಾಗಿ ನೌಕರರು ಮತ್ತೆ ಅಡ್ಡಕತ್ತರಿಗೆ ಸಿಲುಕಿದ್ದಾರೆ.

ಎರಡೂ ಕಡೆಯವರ ನಡುವೆ ಸಂಧಾನ ಸಭೆ ನಡೆಸಿ, ಪ್ರಕರಣ ಇತ್ಯರ್ಥಗೊಳಿಸಲು ಕಾರ್ಮಿಕ ಇಲಾಖೆಯ ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರು ಈ ಸಾಲಿನ ಜ. 16ರಿಂದ ಆ. 18ರ ನಡುವೆ ಹಲವು ಸಲ ಜಂಟಿ ಸಭೆಗಳನ್ನು ಕರೆದಿದ್ದರು. ನೌಕರರ ಪರವಾಗಿ ಐಎಸ್‌ಆರ್‌ ವರ್ಕರ್ಸ್‌ ಯೂನಿಯನ್‌ ಮುಖಂಡರು ಎಲ್ಲ ಸಭೆಗಳಲ್ಲಿ ಪಾಲ್ಗೊಂಡಿದ್ದರು. ಆದರೆ, ಕಾರ್ಖಾನೆ ಆಡಳಿತ ಮಂಡಳಿಯವರು ಒಂದೂ ಸಭೆಗೆ ಹಾಜರಾಗಲಿಲ್ಲ. ಯಾವುದೇ ಲಿಖಿತ ಆಕ್ಷೇಪಣೆ ಕೂಡ ಸಲ್ಲಿಸಲಿಲ್ಲ. ಸಭೆ ನಡೆಯದೆ ವಿಫಲಗೊಂಡಿದ್ದರಿಂದ ಕಾರ್ಮಿಕ ಆಯುಕ್ತರು ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ.

ಇದರಿಂದ ಎದೆಗುಂದದ ವರ್ಕರ್ಸ್‌ ಯೂನಿಯನ್‌ನವರು ಬೆಂಗಳೂರಿನ ಕಾರ್ಮಿಕ ಇಲಾಖೆಯ ಆಯುಕ್ತರ ಕಚೇರಿಯ ಮೊರೆ ಹೋಗಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಅವರಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಒಂದುವೇಳೆ ಅವರಿಂದಲೂ ನ್ಯಾಯ ಸಿಗದಿದ್ದಲ್ಲಿ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದಾರೆ.

ADVERTISEMENT

‘ಹಾಲಿ ನೌಕರರು, ನಿವೃತ್ತರಾದವರು ಬಹಳ ಕಷ್ಟದ ನಡುವೆ ಜೀವನ ನಡೆಸುತ್ತಿದ್ದಾರೆ. ನ್ಯಾಯಯುತವಾಗಿ ನಮಗೆ ಸಿಗಬೇಕಾದ ಬಾಕಿ ಹಣ ಕೊಡಬೇಕು. ನ್ಯಾಯ ಸಿಗುವವರೆಗೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಯೂನಿಯನ್‌ ಪ್ರಧಾನ ಕಾರ್ಯದರ್ಶಿ ಅನ್ವರ್‌ ಬಾಷಾ ತಿಳಿಸಿದ್ದಾರೆ. ಈ ಸಂಬಂಧ ಆಡಳಿತ ಮಂಡಳಿಯವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ಏನಿದು ಪ್ರಕರಣ?

2016ರ ಆಗಸ್ಟ್‌ನಲ್ಲಿ ಐಎಸ್‌ಆರ್‌ ಸಕ್ಕರೆ ಕಾರ್ಖಾನೆ ಕೆಲಸ ಸ್ಥಗಿತಗೊಳಿಸಿದೆ. ಆದರೆ, 130 ಕಾಯಂ ನೌಕರರಿಗೆ ವಿಆರ್‌ಎಸ್‌ ಸೇರಿದಂತೆ ಯಾವುದೇ ರೀತಿಯ ಸೌಲಭ್ಯ ನೀಡಿಲ್ಲ. 2016ರಿಂದ ನಿರಂತರವಾಗಿ ಅವರ ಹಾಜರಾತಿ ಪಡೆಯಲಾಗುತ್ತಿದೆ. ಆದರೆ, ಇದುವರೆಗೆ ಅವರಿಗೆ ವೇತನ, ಬಾಕಿ ಹಣ ನೀಡಿಲ್ಲ. ಬೋನಸ್‌ ಸೇರಿದಂತೆ ಒಟ್ಟು ₹7.26 ಕೋಟಿ ಪಾವತಿಸಬೇಕು. ಇದಲ್ಲದೇ ಕೆಲಸದಿಂದ ನಿವೃತ್ತಿ ಹೊಂದಿರುವ 150 ಜನರ ಗ್ರ್ಯಾಚುಟಿ ₹2.40 ಕೋಟಿ ನೀಡಬೇಕಿದೆ.

‘ಆಡಳಿತ ಮಂಡಳಿಯವರಿಗೆ ಹಲವು ಸಲ ಪತ್ರ ಬರೆದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಮೌಖಿಕವಾಗಿ ಭೇಟಿಯಾದಾಗ ಅನುಚಿತವಾಗಿ ವರ್ತಿಸಿದ್ದಾರೆ. ನಿವೃತ್ತರಾದವರಿಗೆ ‘ಆಪತ್‌ಧನ’ವೂ ಕೊಡದೇ ಪೀಡಿಸುತ್ತಿದ್ದಾರೆ’ ಎಂದು ವರ್ಕರ್ಸ್‌ ಯೂನಿಯನ್‌ನವರು ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತರಿಗೆ ಪತ್ರ ಬರೆದಿದ್ದರು. ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಜಂಟಿ ಸಂಧಾನ ಸಭೆ ಕರೆದಿದ್ದರು.

ಕಾರ್ಮಿಕ ಇಲಾಖೆಯ ಆಯುಕ್ತರು ಕರೆದ ಸಭೆಗೆ ಕಾರ್ಖಾನೆ ಮಾಲೀಕರು ಗೈರು ಹಾಜರಾಗಿ ಅದಕ್ಕೆ ಅಪಮಾನ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕುಐಎಸ್‌ಆರ್‌ ವರ್ಕರ್ಸ್‌ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿಅನ್ವರ್‌ ಬಾಷಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.