ಕುರುಗೋಡು: ‘ತಾಲ್ಲೂಕು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆ ಆರಂಭಗೊಂಡಿವೆ. ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯ ಕುರಿತು ಪ್ರಚಾರ ನಡೆಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಾಗೀಶ ಶಿವಾಚಾರ್ಯ ಸೂಚಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ದಯಾನಂದ್ ಮಾತನಾಡಿ, ‘ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದ ಭೂಮಿ ನೀರಾವರಿ ವ್ಯಾಪ್ತಿಗೆ ಒಳಪಟ್ಟಿದೆ. ಕಡಿಮೆ ಪ್ರಮಾಣದಲ್ಲಿರುವ ಮಳೆಯಾಶ್ರಿತ ಭೂಮಿಯಲ್ಲಿ ಬಿತ್ತನೆ ಮಾಡಲು ಸಜ್ಜೆ, ತೊಗರಿ, ಹತ್ತಿ, ನವಣೆ, ಬೀಜ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನಿದೆ’ ಎಂದು ಮಾಹಿತಿ ನೀಡಿದರು.
ಮಣ್ಣಿನ ಫಲವತ್ತತೆಯ ರಕ್ಷಣೆಗೆ ಸೆಣಬು ಬೀಜ ಬಿತ್ತನೆ ಮಾಡುವುದು ಮತ್ತು ಉತ್ತಮ ಇಳುವರಿಗಾಗಿ ವರ್ಷದಿಂದ ವರ್ಷಕ್ಕೆ ಬೆಳೆ ಪರಿವರ್ತನೆ ಮಾಡುವಂತೆ ರೈತರಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದರು.
ಆರೋಗ್ಯ ಇಲಾಖೆಯ ಮಾಹಿತಿ ಪಡೆದ ಉಪ ಕಾರ್ಯದರ್ಶಿ ವಾಗೀಶ ಶಿವಾಚಾರ್ಯ, ಮಳೆಗಾಲ ಆರಂಭವಾಗಿದೆ. ವಾಂತಿ-ಭೇದಿ, ಮಲೇರಿಯಾ, ಡೆಂಗಿ, ಚಿಕುನ್ ಗುನ್ಯಾ ಹರಡದಂತೆ ಮುಂಜಾಗ್ರತೆ ವಹಿಸಬೇಕು. ಜನರಲ್ಲಿ ರೋಗ ನಿಯಂತ್ರಣ ಕುರಿತು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ನೀರಿನ ಮೂಲಗಳ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿ ಕುಡಿಯಲು ಯೋಗ್ಯವಿದ್ದರೆ ಮಾತ್ರ ಸರಬರಾಜು ಮಾಡಲು ಗ್ರಾಮ ಪಂಚಾಯಿತಿಗಳಿಗೆ ಸೂಚಿಸಬೇಕು ಎಂದರು.
ಚಿಕ್ಕಮಕ್ಕಳ ಆರೈಕೆಗಾಗಿ ಎನ್.ಐ.ಸಿ.ಯು. ವಾರ್ಡ್ ಆರಂಭಿಸುವಂತೆ ಸೂಚಿಸಿದರು. ತಾಲ್ಲೂಕು ಪ್ರಭಾರ ಆರೋಗ್ಯಾಧಿಕಾರಿ ಮಂಜುನಾಥ, ಪ್ರಸ್ತುತ ಕುರುಗೋಡು ಪಟ್ಟಣದಲ್ಲಿರುವುದು 30 ಹಾಸಿಗೆ ಸಾಮರ್ಥ್ಯದ ಸಮುದಾಯ ಆರೋಗ್ಯ ಕೇಂದ್ರ. ನಿತ್ಯ 70ಕ್ಕೂ ಹೆಚ್ಚು ಒಳರೋಗಿಗಳು ದಾಖಲಾಗುತ್ತಿದ್ದಾರೆ. ನಿರ್ಮಾಣ ಹಂತದಲ್ಲಿರುವ 100 ಹಾಸಿಗೆ ಆಸ್ಪತ್ರೆ ಪ್ರಾರಂಭಗೊಂಡ ನಂತರ ಎನ್.ಐ.ಸಿ.ಯು. ವಾರ್ಡ್ ಆರಂಭಿಸಲಾಗುವುದು ಎಂದರು.
ಕೆಲವು ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಳ್ಳದ ಬಗ್ಗೆ ಬಿಸಿ ಚರ್ಚೆ ಜರುಗಿತು.
ಕೆಲವು ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದರು. ಅವರ ಪರವಾಗಿ ಬಂದ ಸಹ ಸಿಬ್ಬಂದಿ ಸಭೆಯಲ್ಲಿ ಮಾಹಿತಿ ನೀಡಲು ತಡಕಾಡಿದರು.
ಇ.ಒ. ಕೆ.ವಿ. ನಿರ್ಮಲಾ, ನರೇಗಾ ಎ.ಡಿ. ಶಿವರಾಮ ರೆಡ್ಡಿ, ಯೋಜನಾಧಿಕಾರಿ ರಾಧಿಕಾ ಮತ್ತು ಕಚೇರಿ ಪ್ರಭಾರ ವ್ಯವಸ್ಥಾಪಕ ಅನೀಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.