ಸಂಡೂರು: ‘ಅದಿರು ಲಾರಿಗಳ ಚಾಲಕರು ಮಾನವೀಯತೆ ಮರೆತು ರಾಕ್ಷಸರಂತೆ ಚಾಲನೆ ಮಾಡಿ ಅಮಾಯಕ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ. ಮುಂದಿನ 14 ದಿನಗಳಲ್ಲಿ ಅದಿರು ಲಾರಿಗಳಿಗೆ ವೇಗ ನಿಯಂತ್ರಕ ಅಳವಡಿಸಬೇಕು’ ಎಂದು ತೋರಣಗಲ್ಲು ವಿಭಾಗದ ಡಿವೈಎಸ್‍ಪಿ ಪ್ರಸಾದ್ ಗೋಖಲೆ ಎಚ್ಚರಿಕೆ ನೀಡಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಾರಿಗೆ, ಪೊಲೀಸ್, ಅರಣ್ಯ ಇಲಾಖೆ, ಗಣಿ ಕಂಪನಿಗಳ ಮಾಲೀಕರ, ಲಾರಿ ಸಂಘಟನೆಗಳ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಪಘಾತಗಳ ನಿಯಂತ್ರಣ, ಜಾಗೃತಿಯ ಸಭೆಯಲ್ಲಿ ಅವರು ಮಾತನಾಡಿದರು.
‘ಎಲ್ಲ ಚಾಲಕರು ಸಮವಸ್ತ್ರ ಧರಿಸಬೇಕು. ಮದ್ಯಪಾನ ಮಾಡಿ ಚಾಲನೆ ಮಾಡಬಾರದು, ಲಾರಿಗಳಿಗೆ ಎಚ್‍ಎಸ್‍ಆರ್‌ಪಿ ಸಂಖ್ಯೆಯ ಪ್ಲೇಟ್‍ಗಳನ್ನು ಅಳವಡಿಸಬೇಕು. ವೇಗದ ಮಿತಿ 50ಕ್ಕೆ ಇಳಿಸುವುದು, ಗಣಿ ಕಂಪನಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಲಾರಿಗಳ ದಾಖಲೆಗಳನ್ನು ಕಡ್ಡಾಯವಾಗಿ, ಪರಿಶೀಲಿಸಬೇಕು. ಉಲ್ಲಂಘಿಸಿದರೆ ಪ್ರಕರಣ ದಾಖಲಿಸಲಾಗುವುದು’ ಎಂದರು.
ಸಿಪಿಐ ಮಹೇಶ್ ಗೌಡ ಮಾತನಾಡಿ, ‘ಲಾರಿ ಸಂಘದವರು ಟನ್‍ಗೆ ₹2 ಸಂಗ್ರಹ ಮಾಡುತ್ತೀರಿ. ಲಾರಿ ಚಾಲಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಜಿಂದಾಲ್ ಕಾರ್ಖಾನೆಯವರ ಜೊತೆಗೆ ಸೇರಿ ಒಳಗೊಳಗೆ ಲಾಬಿ ನಡೆಸಿ ಹಣ ತಿಂದು ಬಡವರಿಗೆ ಮೋಸ ಮಾಡಬಾರದು’ ಎಂದು ತಿಳಿಸಿದರು.
ಸಂಡೂರಿನ ಲಾರಿ ಸಂಘದ ಅಧ್ಯಕ್ಷ ಈರಣ್ಣ, ‘ಲಾರಿ ಸಂಘದ ವತಿಯಿಂದ ಅನೇಕ ಬಾರಿ ಸುರಕ್ಷತಾ ಸಭೆಗಳನ್ನು ನಡೆಸಿದ್ದೇವೆ. ರಸ್ತೆಯ ಬದಿಯಲ್ಲಿನ ಮದ್ಯ ಮಾರಾಟವನ್ನು ನಿಯಂತ್ರಿಸಬೇಕು. ಲಾರಿಗಳ ಸಂಚಾರದ ಸಮಯವನ್ನು ಆರು ತಾಸು ನಿಗದಿ ಮಾಡಿದ್ದರಿಂದ ಲಾರಿಗಳ ವೇಗ ಹೆಚ್ಚಾಗಿ ಅಪಘಾತಗಳಿಗೆ ಕಾರಣವಾಗಿದ್ದು, ಸಮಯವನ್ನು 12 ತಾಸಿಗೆ ಏರಿಕೆ ಮಾಡಬೇಕು’ ಎಂದು ಒತ್ತಾಯಿಸಿದರು.
ಮುಖಂಡ ಶ್ರೀಶೈಲ ಆಲದಳ್ಳಿ ಮಾತನಾಡಿ, ‘ಅಪಘಾತಗಳ ನಿಯಂತ್ರಣಕ್ಕಾಗಿ ಲಾರಿಗಳು ಸಂಚರಿಸುವ ರಸ್ತೆಯಲ್ಲಿ ಪ್ರತಿ 2 ಕಿ.ಮೀ.ಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಲಾರಿಗಳಿಗೆ ಪ್ರತ್ಯೇಕ ಕಾರಿಡಾರ್ ನಿರ್ಮಿಸಬೇಕು, ಸಂಡೂರಿನಲ್ಲಿ ನೂತನವಾಗಿ ಉಪ ಆರ್‌ಟಿಒ, ಸಂಚಾರ ಪೊಲೀಸ್ ಠಾಣೆಯನ್ನು ತೆರೆಯಬೇಕು’ ಎಂದು ಒತ್ತಾಯಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ದ್ವಿತೀಯ, ಅಧಿಕಾರಿ ಚಂದ್ರಶೇಖರ್ ಇದ್ದರು.
ಅಪಘಾತ ನಿಯಂತ್ರಣಕ್ಕಾಗಿ ಒಂದು ಲಾರಿಗೆ ಒಂದು ಟ್ರಿಪ್‌ಗೆ ಮಾತ್ರ ಪರವಾನಗಿ ನೀಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಲಾರಿ ಮಾಲೀಕರು ಇದಕ್ಕೆ ಸಹಕಾರ ನೀಡಬೇಕು
- ಶ್ರೀನಿವಾಸ್‍ಗಿರಿ ಬಳ್ಳಾರಿಯ ಸಾರಿಗೆ ಇಲಾಖೆ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.