ಕೂಡ್ಲಿಗಿ: ‘ವಸತಿ ಶಾಲೆಗಳಲ್ಲಿ ಯಾವುದೇ ಮುಲಾಜಿಗೂ ಒಳಗಾಗದೆ ವಿದ್ಯಾರ್ಥಿನಿಯರ ಕಾಳಜಿ ಬಗ್ಗೆ ಗಮನಹರಿಸಿ, ಕಟ್ಟು ನಿಟ್ಟಾಗಿ ಕರ್ತವ್ಯ ನಿರ್ವಹಿಸಬೇಕು’ ಎಂದು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರು ವಸತಿ ಶಾಲೆಗಳ ಪ್ರಾಚಾರ್ಯರರಿಗೆ ಸೂಚನೆ ನೀಡಿದರು.
ತಾಲ್ಲೂಕಿನ ಹಿರೇಹೆಗ್ಡಾಳ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಸೋಮವಾರ ವಿಜ್ಞಾನ ಪದವಿಪೂರ್ವ ಕಾಲೇಜು ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
‘ಇಂದು ಸಮಾಜ ಎತ್ತ ಸಾಗುತ್ತಿದೆ ಎಂಬ ಚಿಂತನೆ ಮಾಡಬೇಕಾಗಿದೆ. ಯಾವುದೇ ಕಾರಣಕ್ಕೂ ತಾಲ್ಲೂಕಿನಲ್ಲಿ ಇಂತಹ ಘಟನೆಗಳು ನಡೆಯದಂತೆ ಅಧಿಕಾರಿಗಳು ನಿಗಾ ವಹಿಸಬೇಕು’ ಎಂದು ಸೂಚಿಸಿದರು.
‘ತಾಲ್ಲೂಕಿನಲ್ಲಿ ಬಾಲ್ಯವಿವಾಹ ಹೆಚ್ಚುತ್ತಿವೆ. ಇವುಗಳನ್ನು ಕೊನೆಗಾಣಿಸಲು ಶಿಕ್ಷಣವೊಂದೇ ಮಾರ್ಗ. ವಸತಿ ಶಾಲೆಗಳು ಗಂಜಿ ಕೇಂದ್ರಗಳಲ್ಲ. ಈ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಪದವಿ ಪಡೆದು ರಾಷ್ಟ್ರಕ್ಕೆ ಉತ್ತಮ ಕೊಡುಗೆ ನೀಡುವ ಪ್ರಜೆಗಳಾಗಬೇಕು. ಇದಕ್ಕೆ ತಕ್ಕ ವಾತಾವರಣ ನಿರ್ಮಿಸುವ ಜೊತೆಗೆ ಬೋಧನೆ, ಆರೋಗ್ಯ, ಆಹಾರ ಹಾಗೂ ಸ್ವಚ್ಚತೆಗೆ ಮೊದಲ ಆದ್ಯತೆ ನೀಡಬೇಕು’ ಎಂದು ಹೇಳಿದರು.
ಹಿರೇಹೆಗ್ಡಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಟಿ ವಿಮಲಾಕ್ಷಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ, ತಹಶೀಲ್ದಾರ್ ವಿ.ಕೆ. ನೇತ್ರಾವತಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್ ದಿಡಗೂರು, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮೆಹೆಬೂಬ್ ಬಾಷಾ, ಜಿಲ್ಲಾ ಸಮನ್ವಯಾಧಿಕಾರಿಗಳಾದ ಪುಲಿಕೇಶಿ, ಗಂಗಾಧರ, ಪ್ರಾಚಾರ್ಯರಾದ ನಾಗರಾಜ ಕನ್ನಿಹಳ್ಳಿ, ಎಂ ಶೋಭಾ, ಕೆ. ಶಶಿಧರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.