ADVERTISEMENT

ಯೋಗ|ವಿದೇಶದಲ್ಲೂ ಮಿಂಚು: ಅನೇಕ ಪ್ರಶಸ್ತಿ, ಸನ್ಮಾನಕ್ಕೆ ಭಾಜನಳಾದ ಕೆ.ಎನ್. ಹಿಮಜ

ಎ.ಎಂ.ಸೋಮಶೇಖರಯ್ಯ
Published 14 ನವೆಂಬರ್ 2025, 5:13 IST
Last Updated 14 ನವೆಂಬರ್ 2025, 5:13 IST
ಯೋಗಾಸನದ ಭಂಗಿಯಲ್ಲಿ ಕೆ.ಎನ್. ಹಿಮಜ
ಯೋಗಾಸನದ ಭಂಗಿಯಲ್ಲಿ ಕೆ.ಎನ್. ಹಿಮಜ   

ಕೂಡ್ಲಿಗಿ: ಪಟ್ಟಣದ ಕೆ.ಎನ್. ಹಿಮಜ ಚಿಕ್ಕವಯಸ್ಸಿನಲ್ಲಿಯೇ ಅಂತರರಾಷ್ಟ್ರೀಯ ಯೋಗ ಪಟುವಾಗಿ ಬೆಳೆದಿದ್ದಾಳೆ.

ಉಪನ್ಯಾಸಕ ನಾಗರಾಜ ಕೊಟ್ರಪ್ಪಗಳ ಹಾಗೂ ಶ್ವೇತಾ ದಂಪತಿಯ ಮಗಳಾಗಿರುವ ಹಿಮಜಾ ತನ್ನ ಅಜ್ಜಿ ಯೋಗಮಾತೆ ಗೌರಮ್ಮ ಬ್ಯಾಳಿ ಅವರಿಂದ ಪ್ರೇರಿತರಾಗಿ, ಅವರಿಂದಲೇ ತರಬೇತಿ ಪಡೆದು ಉತ್ತಮ ಸಾಧನೆ ಮಾಡುತ್ತಿದ್ದಾರೆ. 8ನೇ ವಯಸ್ಸಿನಿಂದಲೇ ಯೋಗಾಭ್ಯಾಸ ಆರಂಭಿಸಿದ ಈ ಬಾಲಕಿ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಯೋಗ ಪ್ರದರ್ಶನ ಮಾಡಿ ಅನೇಕ ಬಹುಮಾನಗಳನ್ನು ತನ್ನದಾಗಿಸಿಕೊಳ್ಳುತ್ತಿದ್ದಾಳೆ.

ಪ್ರಸ್ತುತ ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಮಾಧ್ಯಮದಲ್ಲಿ 8ನೇ ತರಗತಿ ಓದುತ್ತಿದ್ದು, ಪ್ರಾಣಾಯಾಮ ಸೇರಿದಂತೆ ಅನೇಕ ಆಸನಗಳನ್ನು ಕರಗತ ಮಾಡಿಕೊಂಡಿರುವ ಹಿಮಜ, ಯೋಗಪಟುವೆಂಬ ಕಾರಣಕ್ಕಾಗಿಯೇ ಇಲ್ಲಿ ಉಚಿತ ಪ್ರವೇಶ ಪಡೆದಿದ್ದಾಳೆ.

ADVERTISEMENT

ಈ ವರ್ಷದ ಜೂನ್ ತಿಂಗಳಲ್ಲಿ ವಿಯೆಟ್ನಾಂ ದೇಶದ ಹೊಚಿಮಿನ್ ನಗರದಲ್ಲಿ ನಡೆದ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಹಿಮಜ, ಟ್ರೆಡಿಷನಲ್ ಯೋಗಾಸನದ ಜೂನಿಯರ್ ಬಾಲಕಿಯರ ವಿಭಾಗದ ಚಿನ್ನದ ಪದಕ ಗಳಿಸಿದ್ದು, ಕಳೆದ ಮೂರು ವರ್ಷಗಳ ಸಾಧನೆ ಪರಿಗಣಿಸಿ ‘ಅಂತರರಾಷ್ಟ್ರೀಯ ಜಾಗತಿಕ ಯೋಗ ಶ್ರೇಷ್ಠ ಪ್ರಶಸ್ತಿ 2025’ ನೀಡಿ ಗೌರವಿಸಲಾಗಿದೆ.

ಚಂಡೀಗಢದಲ್ಲಿ ನಡೆಯುವ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಮೂರು ವರ್ಷಗಳಿಂದಲೂ ಭಾಗಿಯಾಗುತ್ತಿದ್ದು, ಬಹುಮಾನಗಳನ್ನು ಗೆದ್ದಿದ್ದಾಳೆ. ಪ್ರಸ್ತುತ ವರ್ಷದ ಪ್ರೌಢಾಶಾಲಾ ವಿಭಾಗದ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾಳೆ. ಬಾಲಕಿಯ ಪ್ರತಿಭೆ ಗುರುತಿಸಿದ ಅನೇಕ ಸಂಘ ಸಂಸ್ಥೆಗಳು ಸನ್ಮಾನ ಮಾಡಿವೆ. ಇತ್ತೀಚೆಗೆ ಪಟ್ಟಣದಲ್ಲಿ ನಡೆದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಲ್ಲೂಕು ಆಡಳಿತದಿಂದಲೂ ಸನ್ಮಾನ ಮಾಡಲಾಗಿದೆ.

ಹಿಮಜ ಮೊದಲಿನಿಂದಲೂ ನಾನು ಮಾಡುವ ಯೋಗವನ್ನು ಗಮನಿಸುತ್ತಿದ್ದಳು. ಇದರಿಂದ ಅವಳಲ್ಲಿ ಅಸಕ್ತಿ ಬೆಳೆದು ಯೋಗಾಭ್ಯಾಸದಲ್ಲಿ ತೊಡಗಿಕೊಂಡಳು
ಗೌರಮ್ಮ ಬ್ಯಾಳಿ, ಹಿಮಜ ಅಜ್ಜಿ