ADVERTISEMENT

ಆನಂದ್‌ ಸಿಂಗ್‌ ಶಾಸಕರಾದ ನಂತರ ಸಕ್ಕರೆ ಕಾರ್ಖಾನೆ ಬಂದ್‌: ಮರಡಿ ಜಂಬಯ್ಯ ನಾಯಕ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 11:43 IST
Last Updated 28 ಸೆಪ್ಟೆಂಬರ್ 2020, 11:43 IST

ಹೊಸಪೇಟೆ: ‘ವಿಜಯನಗರ ಕ್ಷೇತ್ರದಿಂದ ಈ ಹಿಂದೆ ಆಯ್ಕೆಯಾಗಿದ್ದ ಶಾಸಕರೆಲ್ಲರೂ ರೈತರ ಪರವಾಗಿ ಇದ್ದರು. ರೈತರಿಗೆ ಏನೇ ಸಮಸ್ಯೆ ಎದುರಾದರೂ ಅದಕ್ಕೆ ಸ್ಪಂದಿಸುತ್ತಿದ್ದರು. ಆದರೆ, ಯಾವಾಗ ಆನಂದ್‌ ಸಿಂಗ್‌ ಶಾಸಕರಾಗಿ ಆಯ್ಕೆಯಾದರೋ ಅದರ ನಂತರ ನಗರದ ಐಎಸ್‌ಆರ್‌ ಸಕ್ಕರೆ ಕಾರ್ಖಾನೆ, ಪ್ರತಿಷ್ಠಿತ ಟಿಎಸ್‌ಪಿ ಕಂಪನಿ ಬಂದ್‌ ಆಗಿವೆ’ ಎಂದು ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಮರಡಿ ಜಂಬಯ್ಯ ನಾಯಕ ಆರೋಪಿಸಿದರು.

ರೈತ ಕಾರ್ಮಿಕ ದಲಿತರ ಐಕ್ಯ ಹೋರಾಟ ಸಮಿತಿಯಿಂದ ಹೊಸಪೇಟೆ ಬಂದ್‌ ನಿಮಿತ್ತ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಆನಂದ್‌ ಸಿಂಗ್‌ ಶಾಸಕರಾದ ನಂತರ ಒಮ್ಮೆಯೂ ವಿಧಾನಸಭೆಯಲ್ಲಿ ರೈತರ ಪರ, ಐಎಸ್‌ಆರ್‌ ಸಕ್ಕರೆ ಕಾರ್ಖಾನೆ ಆರಂಭಿಸುವ ಕುರಿತು ಮಾತನಾಡಿಲ್ಲ. ಆರೋಗ್ಯ ಸಚಿವ ಶ್ರೀರಾಮುಲು ಕೂಡ ಅಷ್ಟೇ. ಈ ಹಿಂದೆ ಅವರು ಸಂಸದರಾಗಿದ್ದರು. ಆದರೆ, ಒಮ್ಮೆಯೂ ಸಂಸತ್ತಿನಲ್ಲಿ ರೈತರ ಪರ ಮಾತನಾಡಿಲ್ಲ. ಆದರೆ, ಸ್ಥಳೀಯವಾಗಿ ರೈತರು ಹೋರಾಟ ನಡೆಸಿದರೆ ಅದರಲ್ಲಿ ಇಬ್ಬರು ಪಾಲ್ಗೊಳ್ಳುತ್ತಿದ್ದರು. ರೈತರ ಪರ ಇದ್ದೇವೆ ಎಂದು ಹೇಳುತ್ತಿದ್ದರು. ರೈತರನ್ನು ತೋರಿಸಿ ರಾಜಕೀಯ ಮಾಡುವವರ ಬಣ್ಣ ಬಯಲು ಮಾಡಬೇಕಿದೆ’ ಎಂದರು.

‘85 ವರ್ಷಗಳ ಹಿಂದೆ ಆರಂಭಗೊಂಡ ಐಎಸ್‌ಆರ್‌ ಸಕ್ಕರೆ ಕಾರ್ಖಾನೆಗೆ ರೈತರು ಉಚಿತವಾಗಿ ಜಮೀನು ಕೊಟ್ಟಿದ್ದರು. ಅದನ್ನು ನಂಬಿ ತಾಲ್ಲೂಕಿನ 30,000 ರೈತರು ಕಬ್ಬು ಬೆಳೆಯುತ್ತಿದ್ದರು. ಸಾವಿರಾರು ಜನ ಕೂಲಿ ಕಾರ್ಮಿಕರು ಅದನ್ನು ಅವಲಂಬಿಸಿದ್ದರು. ಆದರೆ, ಆನಂದ್‌ ಸಿಂಗ್‌ ಅವರ ‘ಅರಮನೆ’ ಮೇಲೆ ಕಾರ್ಖಾನೆಯ ಧೂಳು ಬೀಳುತ್ತದೆ ಎಂಬ ಕಾರಣಕ್ಕಾಗಿ ಅದನ್ನು ಮುಚ್ಚಿಸಿದ್ದಾರೆ ಎಂಬ ಆರೋಪವಿದೆ. ರೈತರು ಅನೇಕ ಸಲ ಕಾರ್ಖಾನೆ ಆರಂಭಿಸುವಂತೆ ಹೋರಾಟ ನಡೆಸಿದ್ದಾರೆ. ಆದರೆ, ಒಮ್ಮೆಯೂ ಸಿಂಗ್‌ ಅದರ ಬಗ್ಗೆ ಮಾತನಾಡಿಲ್ಲ. ಹಾಗಾಗಿ ಅವರ ವಿರುದ್ಧ ಮಾಡುತ್ತಿರುವ ಆರೋಪದಲ್ಲಿ ಹುರುಳಿರಬಹುದು’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.