ADVERTISEMENT

ಹೊಸಪೇಟೆ: ಜೆ.ಎನ್‌.ಯು. ದಾಳಿಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 12:39 IST
Last Updated 6 ಜನವರಿ 2020, 12:39 IST
ನವದೆಹಲಿಯ ಜೆ.ಎನ್‌.ಯು. ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದವರನ್ನು ಬಂಧಿಸಬೇಕೆಂದು ಆಗ್ರಹಿಸಿ ಎಸ್‌.ಎಫ್‌.ಐ. ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೋಮವಾರ ಹೊಸಪೇಟೆಯಲ್ಲಿ ಉಪ ತಹಶೀಲ್ದಾರ್‌ ಅಮರನಾಥ ಅವರಿಗೆ ಮನವಿ ಪತ್ರ ಸಲ್ಲಿಸಿದರು
ನವದೆಹಲಿಯ ಜೆ.ಎನ್‌.ಯು. ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದವರನ್ನು ಬಂಧಿಸಬೇಕೆಂದು ಆಗ್ರಹಿಸಿ ಎಸ್‌.ಎಫ್‌.ಐ. ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೋಮವಾರ ಹೊಸಪೇಟೆಯಲ್ಲಿ ಉಪ ತಹಶೀಲ್ದಾರ್‌ ಅಮರನಾಥ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ: ನವದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆ.ಎನ್‌.ಯು.) ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿರುವ ಗೂಂಡಾಗಳನ್ನು ಬಂಧಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್‌ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಂತರ ತಹಶೀಲ್ದಾರ್‌ ಅಮರನಾಥ ಅವರಿಗೆ ಮನವಿ ಪತ್ರ ಸಲ್ಲಿಸಿದರು. ‘ಜೆ.ಎನ್‌.ಯು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯೇಷಾ ಘೋಷ್‌ ಮತ್ತು ಉಪಾಧ್ಯಕ್ಷ ಸೂರಿ ಸೇರಿದಂತೆ ಹಲವು ವಿದ್ಯಾರ್ಥಿಗಳ ಮೇಲೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ (ಎ.ಬಿ.ವಿ.ಪಿ.) ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌.ಎಸ್‌.ಎಸ್‌.) ಕಾರ್ಯಕರ್ತರು ಗೂಂಡಾಗಳಂತೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹೋಗಿ ದಾಳಿ ನಡೆಸಿದ್ದಾರೆ. ಇದು ಖಂಡನೀಯ. ಕೂಡಲೇ ಅವರನ್ನು ಬಂಧಿಸಬೇಕು’ ಎಂದು ಮನವಿಯಲ್ಲಿ ಆಗ್ರಹಿಸಿದರು.

‘ರಾತ್ರಿ ವೇಲೆ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಮೇಲೆ ಹಲ್ಲೆ ನಡೆಸಿರುವುದು ಸಮಾಜಘಾತುಕ ಕೆಲಸ. ಇತ್ತೀಚಿನ ದಿನಗಳಲ್ಲಿ ಕೋಮುವಾದಿ ಶಕ್ತಿಗಳು ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿರುವುದು ಹೆಚ್ಚಾಗಿದೆ. ಇದು ಭಾರತದ ಶಿಕ್ಷಣ ವ್ಯವಸ್ಥೆ ಮತ್ತು ಬಹುತ್ವಕ್ಕೆ ಬಂದೊದಗಿರುವ ಗಂಡಾಂತರ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಬಡ, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಶಿಕ್ಷಣ ಪಡೆಯದಂತೆ ಮಾಡುತ್ತಿರುವ ಹುನ್ನಾರವಿದು. ದೆಹಲಿ ಕಾನೂನು ಸುವ್ಯವಸ್ಥೆಯ ಹೊಣೆ ಹೊತ್ತಿರುವ ಕೇಂದ್ರ ಸರ್ಕಾರ ಈ ಘಟನೆ ತಡೆಯುವಲ್ಲಿ ವಿಫಲವಾಗಿದೆ. ಅಷ್ಟೇ ಅಲ್ಲ, ಇಂತಹ ದಾಳಿಗೆ ಪ್ರಚೋದನೆ ನೀಡುತ್ತಿರುವುದು ಅಕ್ಷಮ್ಯ. ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ, ದಾಳಿಕೋರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ಸೂಚನೆ ಕೊಡಬೇಕು’ ಎಂದು ಒತ್ತಾಯಿಸಿದರು.

ಫೆಡರೇಶನ್‌ ಜಿಲ್ಲಾ ಅಧ್ಯಕ್ಷ ದೊಡ್ಡಬಸವರಾಜ, ತಾಲ್ಲೂಕು ಅಧ್ಯಕ್ಷ ಶಿವಕುಮಾರ, ಕಾರ್ಯದರ್ಶಿ ಮಾರುತಿ, ಸಹ ಕಾರ್ಯದರ್ಶಿ ಪವನ್‌, ಉಪಾಧ್ಯಕ್ಷ ಗಣೇಶ್‌, ವಿದ್ಯಾರ್ಥಿ ಮುಖಂಡರಾದ ಸಂಗಮೇಶ, ರಾಗಿಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.