ADVERTISEMENT

ಕಂಪ್ಲಿ |ರಸ್ತೆ ಮೇಲೆ ಕೊಳಚೆ ನೀರು,ನಿವಾಸಿಗಳಿಗೆ ಸಂಕಷ್ಟ; ಸೂಕ್ತ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 2:23 IST
Last Updated 19 ಜನವರಿ 2026, 2:23 IST
ಕಂಪ್ಲಿ ತಾಲ್ಲೂಕಿನ ಚಿಕ್ಕಜಾಯಗನೂರು ಗ್ರಾಮದ ಎಸ್.ಸಿ ಕಾಲೊನಿಯ ರಸ್ತೆ ಮೇಲೆ ಚರಂಡಿ ನೀರು ಹರಿಯಿತು
ಕಂಪ್ಲಿ ತಾಲ್ಲೂಕಿನ ಚಿಕ್ಕಜಾಯಗನೂರು ಗ್ರಾಮದ ಎಸ್.ಸಿ ಕಾಲೊನಿಯ ರಸ್ತೆ ಮೇಲೆ ಚರಂಡಿ ನೀರು ಹರಿಯಿತು   

ಕಂಪ್ಲಿ: ತಾಲ್ಲೂಕಿನ ಚಿಕ್ಕಜಾಯಗನೂರು ಗ್ರಾಮದ ಪರಿಶಿಷ್ಟ ಜಾತಿ ಕಾಲೊನಿಯ ಕೆಂಚಮ್ಮ ದೇವಸ್ಥಾನದಿಂದ ವೆಂಕಟೇಶ್ವರ ದೇವಸ್ಥಾನವರೆಗೆ ಸಿಸಿ ರಸ್ತೆಯ ಎರಡೂ ಬದಿ ಚರಂಡಿ ನಿರ್ಮಿಸದ ಕಾರಣ ರಸ್ತೆ ಮೇಲೆ ಕೊಳಚೆ  ನೀರು ಹರಿಯುತ್ತದೆ.

ಕೆಂಚಮ್ಮನ ದೇವಸ್ಥಾನ ಹಿಂಭಾಗದಲ್ಲಿ ಅಂಗನವಾಡಿ ಕೇಂದ್ರವಿದ್ದು, ಅಲ್ಲಿನ ಮಕ್ಕಳು ಓಡಾಡಲು ಕಷ್ಟವಾಗಿದೆ. ಇದೇ ರಸ್ತೆಯಲ್ಲಿ ಸ್ಮಶಾನ ಇರುವುದರಿಂದ, ಅಂತ್ಯಸಂಸ್ಕಾರಕ್ಕೆ ಹೋಗುವುದಕ್ಕೂ ತೊಂದರೆಯಾಗಿದೆ. ತ್ಯಾಜ್ಯ, ಸೊಳ್ಳೆ ಹಾವಳಿಯಿಂದ ಆರೋಗ್ಯ ಸಮಸ್ಯೆ ಬಾಧಿಸುತ್ತಿದೆ ಎಂದು ಸ್ಥಳೀಯರಾದ ರಾಮಯ್ಯ, ಲಿಂಗಪ್ಪ, ಮಲ್ಲಯ್ಯ, ರಾಜಮ್ಮ, ಪಾರ್ವತಮ್ಮ, ಹಂಪಮ್ಮ, ಹುಲಿಗೆಮ್ಮ, ರುದ್ರಮ್ಮ ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಹಂಪಾದೇವನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೀರಲಿಂಗ ಪ್ರತಿಕ್ರಿಯಿಸಿ, ‘ಚರಂಡಿ ನಿರ್ಮಿಸಲು ಶಾಸಕರು ₹25 ಲಕ್ಷ ಅನುದಾನ ಮಂಜೂರು ಮಾಡಿದ್ದರು. ಸ್ಥಳೀಯ ನಿವಾಸಿಗಳು ಸಹಕರಿಸದ ಕಾರಣ ಕಾಮಗಾರಿ ಸ್ಥಗಿತವಾಯಿತು’ ಎಂದರು.

ADVERTISEMENT

‘ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಚರಂಡಿ ಕಾಮಗಾರಿಗೆ ರಸ್ತೆ ಪಕ್ಕದ ಭೂಮಿ ಪಟ್ಟದಾರರು ಸಹಕರಿಸುವಂತೆ ಕೋರಿದ್ದರೂ, ಪ್ರಯೋಜನವಾಗಲಿಲ್ಲ. ಸದ್ಯ ಈ ಕಾಮಗಾರಿಗೆ ₹2 ಕೋಟಿ ಹೆಚ್ಚುವರಿ ಅನುದಾನ ನೀಡುವಂತೆ ಜಿಲ್ಲಾಧಿಕಾರಿರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ವಿವರಿಸಿದರು.

‘ಕಾಮಗಾರಿ ಆರಂಭವಾಗುವವರೆಗೆ ಗ್ರಾಮ ಪಂಚಾಯಿತಿಯಿಂದ ಸಕಾಲಕ್ಕೆ ಸ್ವಚ್ಛತೆ, ಬ್ಲೀಚಿಂಗ್ ಪೌಡರ್ ಎರಚಲು ಕ್ರಮ ವಹಿಸಲಾಗಿದೆ. ನರೇಗಾ ಯೋಜನೆಯಡಿ ಮನೆ ಬಳಿ ಇಂಗು ಗುಂಡಿ ನಿರ್ಮಿಸಿಕೊಳ್ಳಲು ಅವಕಾಶವಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.