
ಕಂಪ್ಲಿ: ತಾಲ್ಲೂಕಿನ ಶ್ರೀರಾಮರಂಗಾಪುರ ಗ್ರಾಮದ ಮಾದಿಗರ ಸಮಾಜದ ಬಡಾವಣೆಯಲ್ಲಿ ಮಹಿಳೆಯರಿಗೆ ಹೈಟೆಕ್ ಸಾಮೂಹಿಕ ಶೌಚಾಲಯ ನಿರ್ಮಿಸುವಂತೆ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಒತ್ತಾಯಿಸಿದರು.
ಈ ಕುರಿತು ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ಬರೆದ ಮನವಿಯನ್ನು ಕಾರ್ಯದರ್ಶಿ ಎಚ್. ಶಿವಪ್ಪ ಅವರಿಗೆ ಬುಧವಾರ ಸಲ್ಲಿಸಿದರು.
ಬಳಿಕ ವೇದಿಕೆ ಅಧ್ಯಕ್ಷ ಇ.ಧನಂಜಯ ಮಾತನಾಡಿ, ಮಾದಿಗರ ಸಮಾಜದ ಮಹಿಳೆಯರಿಗೆ ಸಾಮೂಹಿಕ ಶೌಚಾಲಯವಿಲ್ಲದ ಕಾರಣ ಬಯಲು ಬಹಿರ್ದೆಸೆ ಅನಿವಾರ್ಯವಾಗಿದೆ. ಮಹಿಳೆಯರ ಗೌರವ ಕಾಪಾಡಲು ಗ್ರಾಮ ಪಂಚಾಯಿತಿಯವರು ಕೂಡಲೇ ಗಮನಹರಿಸಿ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
‘ಮಹಿಳೆಯರ ಹೈಟೆಕ್ ಸಾಮೂಹಿಕ ಶೌಚಾಲಯ ನಿರ್ಮಾಣ ಒಂದು ವೇಳೆ ಕಡೆಗಣಿಸಿದಲ್ಲಿ ನಿಗದಿತ ದಿನ ಮಹಿಳೆಯರೆಲ್ಲರೂ ಸೇರಿ ತಂಬಿಗೆ ಹಿಡಿದು ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟಿಸಲಾಗುವುದು’ ಎಂದು ಮಲ್ಲಮ್ಮ, ಲಕ್ಷ್ಮಿ, ಭಾರತಿ, ಸರೋಜಮ್ಮ, ವೆಂಕಟಲಕ್ಷ್ಮಿ, ಲಕ್ಷ್ಮಿದೇವಿ, ಪ್ರೇಮಮ್ಮ, ಸರಸ್ವತಿ ಎಚ್ಚರಿಸಿದರು.
ಗ್ರಾಮದ ಪೆದ್ದಮ್ಮ ದೇವಸ್ಥಾನದಿಂದ ಉತ್ತಮಯ್ಯ ಅವರ ಮನೆಯವರೆಗೆ ಚರಂಡಿ ಹಾಳಾಗಿದ್ದು, ಹೊಸ ಚರಂಡಿ ನಿರ್ಮಿಸಬೇಕು ಎಂದು ಇದೇ ವೇಳೆ ಒತ್ತಾಯಿಸಿದರು. ವೇದಿಕೆ ಗೌರವ ಅಧ್ಯಕ್ಷ ಜಯಣ್ಣ, ಉಪಾಧ್ಯಕ್ಷ ಓಬಳೇಶ್, ಸಂಘಟನಾ ಕಾರ್ಯದರ್ಶಿ ರಾಕೇಶ್, ವೀರಾಂಜನೇಯಲು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.