ADVERTISEMENT

ಕನ್ನಡ ಹಲವು ಭಾಷೆಗಳ ಸಂಗಮ

ವಿವಿಧ ಸಂಘ ಸಂಸ್ಥೆಗಳಿಂದ ಸಂಭ್ರಮದ ನಾಡಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 16:14 IST
Last Updated 1 ನವೆಂಬರ್ 2019, 16:14 IST
ರಾಜ್ಯೋತ್ಸವದ ಪ್ರಯುಕ್ತ ನಡೆದ  ಮೆರವಣಿಗೆಯಲ್ಲಿ ಕುಲಪತಿ ಪ್ರೊ.ಸ.ಚಿ. ರಮೇಶ ಅವರು ಡೊಳ್ಳು ಬಾರಿಸಿದರು
ರಾಜ್ಯೋತ್ಸವದ ಪ್ರಯುಕ್ತ ನಡೆದ  ಮೆರವಣಿಗೆಯಲ್ಲಿ ಕುಲಪತಿ ಪ್ರೊ.ಸ.ಚಿ. ರಮೇಶ ಅವರು ಡೊಳ್ಳು ಬಾರಿಸಿದರು   

ಹೊಸಪೇಟೆ: ನಗರ ಸೇರಿದಂತೆ ತಾಲ್ಲೂಕಿನ ಹಲವೆಡೆ ಶುಕ್ರವಾರ ಕನ್ನಡ ರಾಜ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಅದರ ವಿವರ ಇಂತಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯ:ಕಾರ್ಯಕ್ರಮದಲ್ಲಿ ‘ಕನ್ನಡ ಕರ್ನಾಟಕತ್ವ; ಮರುಚಿಂತನೆ’ ಕುರಿತು ಉಪನ್ಯಾಸ ನೀಡಿದ ಹಿರಿಯ ಪ್ರಾಧ್ಯಾಪಕ ರಹಮತ್‌ ತರೀಕೆರೆ, ‘ನಮ್ಮ ದಾರ್ಶನಿಕರು, ಕವಿಗಳು ಕನ್ನಡವನ್ನು ಎಂದು ಭಾಷಾ ಸೂಚಕವಾಗಿ ಬಳಸಲಿಲ್ಲ. ಕರ್ನಾಟಕದಲ್ಲಿ ವಾಸಿಸುವ ಎಲ್ಲರೂ ಕನ್ನಡಿಗರೆ. ದಾರ್ಶನಿಕರು, ಕವಿಗಳು, ಲೇಖಕರು ಭಾವನಾತ್ಮಕ ಬುನಾದಿಯ ಮೇಲೆ ತಮ್ಮ ಇಳಿ ವಯಸ್ಸಿನಲ್ಲೂ ಈ ನಾಡನ್ನು ಸುತ್ತಿ ಕರ್ನಾಟಕದಲ್ಲಿ ವಾಸಿಸುವ ಎಲ್ಲಾ ಭಾಷಿಕರು ಕನ್ನಡಿಗರೆ ಎಂಬ ಏಕೀಕರಣ ತತ್ವದಲ್ಲಿ ನಾಡನ್ನು ಕಟ್ಟಿದರು’ ಎಂದರು.

‘ಇಂದು ನಾಡಹಬ್ಬ ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ಜೊತೆಯಲ್ಲೇ ಸಂಕಟವು ಕೂಡ ಮನೆ ಮಾಡಿದೆ. ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದ ಹಿಂದೆ ಎಂದೂ ಅನುಭವಿಸದ ಸಮಸ್ಯೆಗಳನ್ನು ಕರ್ನಾಟಕದ ಜನತೆ ಅನುಭವಿಸುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಲಪತಿ ಪ್ರೊ. ಸ.ಚಿ. ರಮೇಶ, ‘ಕನ್ನಡ ಎಂದರೆ ಒಂದು ಭಾಷೆಯಲ್ಲ. ಹಲವು ಭಾಷೆಗಳ ಸಂಗಮ. ಅದರಲ್ಲಿ ಕನ್ನಡದ ಹಲವು ಪ್ರಭೇದಗಳುಂಟು. ಕನ್ನಡದ ಜೊತೆಗೆ ಉರ್ದು, ಹಿಂದಿ, ಕೊಂಕಣಿ, ತೆಲುಗು, ಮರಾಠಿ, ತುಳು, ಮಲಯಾಳಿ, ತಮಿಳು, ಇಂಗ್ಲಿಷ್ ಇತರೆ ಮುಂತಾದ ಭಾಷಿಕರನ್ನು ನಾವು ಕಾಣಬಹುದು. ಕನ್ನಡ ರಾಜ್ಯೋತ್ಸವವನ್ನು ಕರ್ನಾಟಕದ ರಾಜ್ಯೋತ್ಸವವಾಗಿ ಆಚರಿಸಬೇಕು. ಆದರೆ ಬೇರೆ ಭಾಷೆಗಳನ್ನು ಮತ್ತು ಬೇರೆ ಭಾಷಿಕರನ್ನು ದ್ವೇಷಿಸಬಾರದು’ ಎಂದು ಹೇಳಿದರು.

‘ಕನ್ನಡದ ಶಕ್ತಿ ಕೇಂದ್ರ ಕರ್ನಾಟಕತ್ವ. ಕನ್ನಡ ಎನ್ನುವುದು ಕೇವಲ ಭಾಷೆಯಲ್ಲ, ಅದು ಕನ್ನಡಿಗರ ಬದುಕು, ಉಸಿರು. ಕನ್ನಡ ಎನ್ನುವುದು ಏಕಾಂಗಿ ಭಾಷೆಯಲ್ಲ. ಮಂಗಳೂರು ಕನ್ನಡ, ಧಾರವಾಡ ಕನ್ನಡ, ಬೆಂಗಳೂರು ಕನ್ನಡ, ಕಲಬುರ್ಗಿ ಕನ್ನಡ ಹೀಗೆ ಹಲವು ಕನ್ನಡಗಳು ನಮ್ಮಲ್ಲಿವೆ’ ಎಂದರು ಕುಲಸಚಿವ ಎ.ಸುಬ್ಬಣ್ಣ ರೈ, ಶೈಕ್ಷಣಿಕ ಕುಲಸಚಿವ ಎಸ್.ವೈ ಸೋಮಶೇಖರ, ಉಪಕುಲಸಚಿವ ಎ.ವೆಂಕಟೇಶ ಇದ್ದರು.

ಬ್ಲಾಕ್‌ ಕಾಂಗ್ರೆಸ್‌ ಸಮಿತಿ:ಪಕ್ಷದ ನಗರದ ಕಚೇರಿಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮವನ್ನು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮೊಹಮ್ಮದ್‌ ಇಮಾಮ್‌ ನಿಯಾಜಿ ಉದ್ಘಾಟಿಸಿ, ‘ಭಾಷೆಯ ಆಧಾರದ ಮೇಲೆ ಸಮಸ್ತ ಕನ್ನಡಿಗರನ್ನು ಒಗ್ಗೂಡಿಸಿದ್ದಾರೆ ನಮ್ಮ ಹಿರಿಯರು. ಆ ಒಗ್ಗಟ್ಟು ಹಾಗೆಯೇ ಇರಬೇಕು’ ಎಂದರು.

ಮುಖಂಡರಾದ ವಿ.ಸೋಮಪ್ಪ, ತಾರಿಹಳ್ಳಿ ವೆಂಕಟೇಶ್, ನಿಂಬಗಲ್ ರಾಮಕೃಷ್ಣ, ವಿನಾಯಕ ಶೆಟ್ಟರ್, ಬಸವಲಿಂಗಪ್ಪ ಮೇಟಿ, ವಿಜಯಕುಮಾರ್, ತೇಜು ನಾಯಕ, ಮುನ್ನಿ ಕಾಸಿಂ, ಕಮಲಮ್ಮ, ನೀಲಮ್ಮ, ರೋಫಿಯಾ, ಶಮಾ, ಲಕ್ಷ್ಮಿ, ಮಾಬುನ್ನಿ, ಫಾತಿಮಾ, ಶೈನಾಜ್, ಪ್ರಿಯಾಂಕ, ವಿಶಾಲ, ಸರಸ್ವತಿ, ಮುಮ್ತಾಜ್‌, ಆಯೇಶಾ ಮೌಲಾಬಿ, ಶಾಹೀನ್, ರಮೇಶ್ ಬಾಬು, ನಾಗರಾಜ್, ಜಾವೇದ್‌, ಮುನಿಯಪ್ಪ ಇದ್ದರು.

ಎಂ.ಎಸ್‌.ಪಿ.ಎಲ್‌.: ರಾಜ್ಯೋತ್ಸವದ ಪ್ರಯುಕ್ತ ನಗರದ ಸಂಗನಬಸವೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಎಂ.ಎಸ್‌.ಪಿ.ಎಲ್‌. ಸಂಸ್ಥೆಯಿಂದ ನೂತನವಾಗಿ ನಿರ್ಮಿಸಿರುವ ಶೌಚಾಲಯವನ್ನು ಸಂಸ್ಥೆಯ ಸಿ.ಎಸ್‌.ಆರ್‌. ವಿಭಾಗದ ಮುಖ್ಯಸ್ಥ ಎಚ್‌. ರಮೇಶ ಉದ್ಘಾಟಿಸಿದರು.

ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ವಿಜಯ್ ಎಂ. ಸಿಂದಗಿ, ಅಶ್ವಿನ್ ಕೋತಂಬ್ರಿ, ಕೆ. ಮಹಾಂತೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.