ಬಳ್ಳಾರಿ: ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ‘ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ)’ವು ಜಿಲ್ಲೆಯಲ್ಲಿ ಮನೆಗಳ ಜಿಯೊ ಟ್ಯಾಗಿಂಗ್ ಕೈಗೊಂಡಿದೆ.
ಆರ್.ಆರ್.ಸಂಖ್ಯೆ (ವಿದ್ಯುತ್ ಮೀಟರ್) ಮೂಲಕ ಮನೆಗಳನ್ನು ಗುರುತಿಸುವ ಕಾರ್ಯ ಜಿಲ್ಲೆಯಲ್ಲಿ ಆರಂಭವಾಗಿದೆ. ವಿದ್ಯುತ್ ಮೀಟರ್ ರೀಡರ್‌ಗಳ ಮೂಲಕ ಪ್ರತಿ ಮನೆಗೆ ಜಿಯೋ ಟ್ಯಾಗಿಂಗ್ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ (ಕೊಟ್ಟೂರು ಒಳಗೊಂಡಂತೆ) ಈಗಾಗಲೇ ಶೇ 77.06ರಷ್ಟು ಜಿಯೊ ಟ್ಯಾಗಿಂಗ್ ಕಾರ್ಯ ಪೂರ್ಣಗೊಂಡಿದೆ.
ಜೆಸ್ಕಾಂ ವ್ಯಾಪ್ತಿಯಲ್ಲಿ 3,54,549 ಆರ್. ಆರ್. ಸಂಖ್ಯೆಗಳಿವೆ. ಈ ಎಲ್ಲ ಮನೆಗಳಿಗೆ ಜಿಯೋ ಟ್ಯಾಗಿಂಗ್ ಮಾಡುವ ಕಾರ್ಯ ಈಗಾಗಲೇ ಆರಂಭವಾಗಿದೆ. ಜೆಸ್ಕಾಂ ಸಿಬ್ಬಂದಿ ಮನೆಗಳಿಗೆ ತೆರಳಿ ಸರ್ವೆ ಚೀಟಿ ಅಂಟಿಸುತ್ತಿದ್ದಾರೆ. ಚೀಟಿಗಳನ್ನು ತೆಗೆಯದಂತೆ ತಿಳಿಸಲಾಗಿದ್ದು, ಅದರಲ್ಲಿ ಸಹಾಯವಾಣಿ ಸಂಖ್ಯೆ: 80507 70004 ನಮೂದಿಸಲಾಗಿದೆ. ಜಿಯೊ ಟ್ಯಾಗಿಂಗ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮನೆಗಳ ಸರ್ವೆ ನಡೆಯಲಿದೆ.
ಬಳ್ಳಾರಿ ನಗರ–2ರಲ್ಲಿ ಶೇ 74.72, ಕಂಪ್ಲಿ–ಶೇ 79.80, ಸಿರುಗುಪ್ಪ– ಶೇ 65.50, ಬಳ್ಳಾರಿ ಗ್ರಾಮೀಣ– ಶೇ 80.66, ಬಳ್ಳಾರಿ ನಗರ–1 ಶೇ 84.21, ಸಂಡೂರು ಶೇ 77.85, ಕೊಟ್ಟೂರು – 89.50, ಕುರುಗೋಡು ಶೇ 69.36ರಷ್ಟು ಜಿಯೊ ಟ್ಯಾಗಿಂಗ್ ಪೂರ್ಣಗೊಂಡಿರುವುದಾಗಿ ದತ್ತಾಂಶಗಳು ಹೇಳುತ್ತಿವೆ.
ಮೀಟರ್ ರೀಡರ್‌ಗಳು ಮನೆಗಳನ್ನು ಗುರುತಿಸಿ, ಯುಎಚ್‌ಐಡಿ ಸಂಖ್ಯೆ ನೀಡುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಶಿಕ್ಷಕರು ಗಣತಿ ಆರಂಭಿಸಲಿದ್ದಾರೆ. ದಸರಾ ರಜೆಯ ಅವಧಿಯಲ್ಲಿ ಗಣತಿದಾರರು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಿದ್ದಾರೆ. ಸಮೀಕ್ಷೆ ಸೆ.22ರಿಂದ ಅಕ್ಟೋಬರ್ 7ರವರೆಗೆ ನಡೆಯಲಿದೆ. ಶಾಲಾ ರಜಾದಿನಗಳಿರುವುದರಿಂದ ಸಮೀಕ್ಷೆ ಕಾರ್ಯಕ್ಕೆ ಸಹಾಯವಾಗಲಿದೆ. ಜಿಯೋ ಟ್ಯಾಗ್ ಮಾಡಿರುವ ಮನೆಗಳಲ್ಲಿ ವಾಸವಿರುವ ಕುಟುಂಬದವರ ಮಾಹಿತಿಯನ್ನು ಆ್ಯಪ್ ಮೂಲಕ ಅಪ್‌ಲೋಡ್ ಮಾಡಲಿದ್ದಾರೆ. 150 ಮನೆಗಳನ್ನು ಸಮೀಕ್ಷೆ ಮಾಡುವವರಿಗೆ ಒಟ್ಟು ₹20 ಸಾವಿರ ವರೆಗೆ ಗೌರವಧನ ಸಿಗಲಿದೆ.
2024ರ ದತ್ತಾಂಶಗಳ ಪ್ರಕಾರ ಜಿಲ್ಲೆಯಲ್ಲಿ ಅಂದಾಜು 4.04 ಲಕ್ಷ ಕುಟುಂಬಗಳಿವೆ. ಅಂದಾಜು 150 ಕುಟುಂಬಗಳಿಗೆ ಒಬ್ಬ ಗಣತಿದಾರರನ್ನು ನಿಯೋಜಿಸಲಾಗುತ್ತಿದ್ದು, ಗಣತಿ ಕಾರ್ಯಕ್ಕೆ ಕನಿಷ್ಠ 2,694 ಮಂದಿ ಅಗತ್ಯ. ಆದರೆ, ಇನ್ನೂ ಶೇ 10 ರಷ್ಟು ಗಣತಿದಾರರು ಬೇಕಾಗುತ್ತಾರೆ. ಆದರೆ, ಅಷ್ಟು ಪ್ರಮಾಣದಲ್ಲಿ ಶಿಕ್ಷಕರು ಲಭ್ಯರಿಲ್ಲದ ಕಾರಣ ಇತರ ಇಲಾಖೆಗಳಿಂದಲೂ ಸಿಬ್ಬಂದಿಯನ್ನು ಗಣತಿ ಕಾರ್ಯಕ್ಕೆ ಹೊಂದಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ.
ಅಧಿಕಾರಿಗಳಿಗೆ ಮಾರ್ಗದರ್ಶನ
ಸೆ.22ರಿಂದ ಸಮೀಕ್ಷೆ ಕಾರ್ಯ ಆರಂಭವಾಗಲಿದ್ದು ಹಿಂದಿನ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಕಳೆದ ಸೆ. 1ರಂದೇ ಸಭೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಜಾಗೃತಿ ಕೈಗೊಳ್ಳುವಂತೆಯೂ ತಿಳಿಸಿದ್ದಾರೆ. ಇನ್ನೊಂದೆಡೆ ಸಮೀಕ್ಷೆಯ ಭಾಗವಾಗಿ ಸರ್ಕಾರವೂ ಹಿಂದುಳಿದ ವರ್ಗಗಳ ಇಲಾಖೆಯಿಂದ ಜಾಗೃತಿ ಕಾರ್ಯ ಕೈಗೊಳ್ಳಲಿದೆ ಎಂದು ಗೊತ್ತಾಗಿದೆ. ಹೀಗಿರುವಾಗಲೇ ಹಿಂದುಳಿದ ಜಾತಿಗಳ ಮುಖಂಡರೂ ತಮ್ಮ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಜಾತಿ ಹೆಸರು ಕ್ರಮ ಸಂಖ್ಯೆಯ ಬಗ್ಗೆ ತಿಳಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.