ಬಳ್ಳಾರಿ: ಪೊಲೀಸ್ ವ್ಯವಸ್ಥೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ಹೆಚ್ಚಿಸಿ, ಜನರು ಮತ್ತು ಪೊಲೀಸರ ನಡುವೆ ನಿಕಟ ಸಂಬಂಧ ಬೆಸೆಯುವಂತೆ ಮಾಡಿ, ಸಮಸ್ಯೆಗಳನ್ನು ಮೂಲದಲ್ಲೇ ಸರಿಪಡಿಸಲು ಮುಂದಾಗಿರುವ ಪೊಲೀಸ್ ಇಲಾಖೆ, ಇದಕ್ಕಾಗಿ ‘ಮನೆ ಮನೆ ಪೊಲೀಸ್’ ಎಂಬ ಕಾರ್ಯಕ್ರಮ ಜಾರಿಗೆ ತರುತ್ತಿದೆ.
ರಾಜ್ಯದ ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಇತ್ತೀಚೆಗೆ 27 ಅಂಶಗಳ ಸುತ್ತೋಲೆ ಹೊರಡಿಸಿರುವ ಪೊಲೀಸ್ ಮಹಾನಿರ್ದೇಶಕರು, ಮಹಾ ನಿರೀಕ್ಷಕರು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಮನೆಗಳ ಸಮೂಹ ರಚನೆ: ಜಿಲ್ಲೆಯ ಐದು ತಾಲ್ಲೂಕುಗಳ ಪ್ರತಿಯೊಂದು ಪೊಲೀಸ್ ಠಾಣೆಗಳ ಸರಹದ್ದುಗಳ ಭೌಗೋಳಿಕ ಪ್ರದೇಶಗಳನ್ನು ವಿಂಗಡಿಸಿ 40-50 ಮನೆಗಳ ಸಮೂಹವನ್ನು ರಚಿಸಿಕೊಳ್ಳಬೇಕು. ಬೀಟ್ ಪೊಲೀಸರು ಈ ಸಮೂಹದ ಎಲ್ಲಾ ಮನೆಗಳಿಗೆ ಭೇಟಿ ನೀಡಬೇಕು. ಈ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕು.
ಅಹವಾಲುಗಳನ್ನು ಲಿಖಿತವಾಗಲೀ ಅಥವಾ ಮೌಖಿಕವಾಗಲೀ ಆಲಿಸಬೇಕು. ಅದಕ್ಕೆ ಸೂಕ್ತವಾಗಿ ಸ್ಪಂದಿಸಿ ಬಗೆಹರಿಸಲು ಪ್ರಯತ್ನಿಸಬೇಕು. ಮನೆಗಳ ಸುತ್ತಮುತ್ತಲ ಭದ್ರತಾ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಬೇಕು. ಲೋಪದೋಷವಿದ್ದಲ್ಲಿ ತಿಳಿಸಬೇಕು. ಪೊಲೀಸ್ ಠಾಣೆ, ಅಧಿಕಾರಿ ಮತ್ತು ನಿಯಂತ್ರಣಾ ಕೊಠಡಿ ಸಂಖ್ಯೆ –112 ಅನ್ನು ನೀಡಬೇಕು.
ನಾಗರಿಕರ ದೂರು ದುಮ್ಮಾನಗಳ ಕುರಿತು ರಿಜಿಸ್ಟರ್ ನಿರ್ವಹಿಸಬೇಕು. ಕೈಗೊಂಡ ಕ್ರಮಗಳ ಕುರಿತು ಅದರಲ್ಲಿ ಉಲ್ಲೇಖಿಸಬೇಕು. ಈ ಹಂತದಲ್ಲಿ ಎಲ್ಲಿಯೂ ನಾಗರಿಕರ ವೈಯಕ್ತಿಕ ಮಾಹಿತಿ ಪಡೆಯಲು ಪ್ರಯತ್ನಿಸಬಾರದು ಎಂದು ಸೂಚಿಸಲಾಗಿದೆ.
ಮಹಿಳಾ ರಕ್ಷಣೆ: ಮಹಿಳೆಯರು ಮಾತ್ರವೇ ಇರುವ ಕುಟುಂಬಗಳನ್ನು ಮಹಿಳಾ ಪೊಲೀಸ್ ಅಧಿಕಾರಿಗಳು ಮಾತ್ರವೇ ಸಂಪರ್ಕಿಸಬೇಕು. ಮಹಿಳೆಯರು, ಮಕ್ಕಳ ಸುರಕ್ಷತೆಗೆ, ಮಾನವ ಕಳ್ಳಸಾಗಣೆ, ಮಕ್ಕಳ ಭಿಕ್ಷಾಟನೆ ಹಾಗೂ ಪ್ರಚಲಿತ ತಿಳುವಳಿಕೆ ಅವಶ್ಯಕತೆ ಇರುವ ಇತರೆ ವಿಷಯಗಳಿಗೆ ಸಂಬಂಧಿಸಿದಂತೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಉತ್ತೇಜಿಸಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಪೊಲೀಸ್ ಅಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು.
ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಗೆ ಆದ್ಯತೆ: ಸಮುದಾಯದ ಪ್ರಮುಖ ಸ್ಥಳಗಳಲ್ಲಿ ಭದ್ರತಾ ದೃಷ್ಟಿಯಿಂದ ಸ್ಥಳೀಯ ಪೌರಾಡಳಿತ ಇಲಾಖೆ ವತಿಯಿಂದ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವಂತೆ ಸಂಬಂಧಪಟ್ಟ ಇಲಾಖೆಯನ್ನು ಕೋರಬೇಕು. ಎನ್.ಜಿ.ಒ ಮುಖ್ಯಸ್ಥರನ್ನು ಪ್ರೇರೇಪಿಸಬೇಕು.
ಸೈಬರ್, ಮಾದಕ ದ್ರವ್ಯ ಕುರಿತು ಜಾಗೃತಿ: ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳಿಂದಾಗುತ್ತಿರುವ ಅಪಾಯ ಮತ್ತು ನಷ್ಟಗಳ ಬಗ್ಗೆ ಕೂಲಂಕಷವಾಗಿ ನಾಗರಿಕರಿಗೆ ವಿವರಿಸಬೇಕು. ಇಂತಹ ಸೈಬರ್ ಅಪರಾಧಗಳಿಗೆ ಬಲಿಪಶುಗಳಾಗದಂತೆ ಅವರಲ್ಲಿ ತಿಳಿವಳಿಕೆ ಮೂಡಿಸಬೇಕು. ಈ ಕುರಿತ ಕೃತ್ಯಗಳ ಕುರಿತು ಪೊಲೀಸ್ ಇಲಾಖೆಗೆ ತ್ವರಿತವಾಗಿ ಮಾಹಿತಿ ನೀಡಲು ಕೋರಬೇಕು. ಮಾದಕ ದ್ರವ್ಯದ ವ್ಯಸನಗಳಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು.
ಸಿಬ್ಬಂದಿ ಕೊರತೆ ಸಮಸ್ಯೆ: ಪ್ರತಿ ಠಾಣೆ ವ್ಯಾಪ್ತಿಯಲ್ಲಿ 40–50 ಮನೆಗಳನ್ನು ಪ್ರತ್ಯೇಕ ಸಮೂಹವಾಗಿ ರಚಿಸಿ ಒಬ್ಬ ಸಿಬ್ಬಂದಿಗೆ ಹೊಣೆಗಾರಿಕೆ ನೀಡಬೇಕು ಎಂದು ಸುತ್ತೋಲೆ ಹೇಳುತ್ತದೆ. ಆದರೆ, ಅಷ್ಟು ದೊಡ್ಡ ಸಂಖ್ಯೆಯ ಸಿಬ್ಬಂದಿ ವರ್ಗ ಯಾವುದೇ ಜಿಲ್ಲೆಯಲ್ಲೂ ಇಲ್ಲ. ಹೀಗಾಗಿ ಅಲ್ಪಸ್ವಲ್ಪ ಮಾರ್ಪಾಡಿನೊಂದಿಗೆ ಕಾರ್ಯಕ್ರಮ ಜಾರಿ ಮಾಡಬೇಕಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.
‘ಮನೆ ಮನೆ ಪೊಲೀಸ್’
ಕಾರ್ಯಕ್ರಮ ಸಂಬಂಧ ಸಿಬ್ಬಂದಿ ಮತ್ತು ಅಧಿಕಾರಿಗಳ ಸಭೆ ನಡೆಸಿ ಸಲಹೆ ಸೂಚನೆ ನೀಡಲಾಗಿದೆ. ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನ ಶೀಘ್ರವೇ ಆಗಲಿದೆ ಡಾ. ಶೋಭಾರಾಣಿ ವಿ.ಜೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪರಿಶಿಷ್ಟ ಸಮುದಾಯದ ಹಿತ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಹಕ್ಕುಗಳಿಗೆ ಯಾವುದೇ ಬೆದರಿಕೆ ಇಲ್ಲದಿರುವುದನ್ನು ನಿರ್ಭಯವಾಗಿ ಜೀವಿಸುತ್ತಿರುವುದನ್ನು ‘ಮನೆ ಮನೆ ಪೊಲೀಸ್’ ಕಾರ್ಯದ ವೇಳೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಒಂದು ವೇಳೆ ಪರಿಶಿಷ್ಟ ಸಮುದಾಯದ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕೆ ಅಪಾಯವಿರುವುದು ಗಮನಕ್ಕೆ ಬಂದಲ್ಲಿ ಸಿಬ್ಬಂದಿ ತಮ್ಮ ಹಿರಿಯ ಅಧಿಕಾರಿಗಳಿಗೆ ವರದಿ ಮಾಡಬೇಕು. ಮೇಲಧಿಕಾರಿಗಳು ಈ ಬಗ್ಗೆ ಗಮನಿಸಬೇಕು.
ನಾಗರಿಕರಿಗೆ ಪ್ರಶಸ್ತಿ
ಪೊಲೀಸರಿಗೆ ಅತ್ಯುತ್ತಮ ಸಲಹೆ ನೀಡುವ ಪೊಲೀಸರೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿರುವ ಜಿಲ್ಲೆಯ ಇಬ್ಬರಿಗೆ ಪ್ರಶಸ್ತಿ ನೀಡಿ ಗೌರವಿಸಬೇಕು. ಸ್ವಾತ್ರಂತ್ರ್ಯ ದಿನಾಚರಣೆ ಅಥವಾ ಗಣರಾಜ್ಯೋತ್ಸವ ದಿನದಂದು ಪೊಲೀಸ್ ವರಿಷ್ಠಾಧಿಕಾರಿ ‘ಅತ್ಯುತ್ತಮ ಪೊಲೀಸ್ ಸಲಹೆಗಾರರು’ ಹಾಗೂ ‘ಅತ್ಯುತ್ತಮ ಪೊಲೀಸ್ ಸ್ನೇಹಿತರು’ ಎಂಬ ಎರಡು ಪ್ರಶಸ್ತಿಯನ್ನು ನೀಡಬಹುದು ಎಂದೂ ಇಲಾಖೆಯು ಸುತ್ತೋಲೆಯಲ್ಲಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.