ಸಂಡೂರು: ‘ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಜೊತೆಗೆ ಪಠ್ಯೇತರ ಚಟುವಟಿಕೆಗಳು ಬಹಳ ಮುಖ್ಯವಾಗಿದ್ದು, ಕಥೆ, ಕವನ, ನಾಟಕ, ಸಂಗೀತ ಇತರೆ ಸೃಜನಾತ್ಮಕ ಕಲೆಗಳಿಂದ ಬುದ್ಧಿಮಟ್ಟ ಹೆಚ್ಚಾಗುತ್ತದೆ’ ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಮುನಿರಾಜು ಹೇಳಿದರು.
ತಾಲ್ಲೂಕಿನ ನಂದಿಹಳ್ಳಿ ಗ್ರಾಮದ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಜ್ಞಾನ ಸರೋವರ ಸಭಾಂಗಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಾಟಕ ಪಠ್ಯ, ರಂಗಪಠ್ಯಗಳ ಓದು : ತಾತ್ವಿಕ ಸ್ವರೂಪ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಸ್ಕೂಲ್ ಆಫ್ ಮಿನಿರಲ್ ಸೈನ್ಸ್ ಇಂಟರ್ ನ್ಯಾಶನಲ್ ಸ್ಪೋರ್ಟ್ಸ್ ಅಕಾಡೆಮಿ ತೆರೆಯುವ, ಹೊಸ ತರಗತಿಗಳನ್ನು ಆರಂಭಿಸಲು ಪ್ರಯತ್ನ ಮಾಡಲಾಗುತ್ತಿದೆ’ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ.ನಾಗರಾಜಮೂರ್ತಿ ಮಾತನಾಡಿ, ‘ನಮ್ಮ ರಾಜ್ಯದ ಶ್ರೀಮಂತ ಕಲೆ ಎಂದರೆ ರಂಗ ಕಲೆಯಾಗಿದ್ದು, ರಂಗಕಲೆಯಲ್ಲಿ ನಾಟಕ ಪಠ್ಯ, ರಂಗ ಪಠ್ಯಗಳ ಓದು ಪ್ರಸ್ತುತ ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾಗಿದೆ. ಗ್ರಾಮೀಣ ಭಾಗದ ಕಲಾವಿದರು ರಂಗಕಲೆಯನ್ನು ಉಳಿಸಿ ಬೆಳೆಸುತ್ತೀರುವುದು ಶ್ಲಾಘನೀಯ ವಿಚಾರ’ ಎಂದರು.
ರಂಗಲೋಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯವತಿಯಿಂದ ರಂಗ ಗೀತೆಗಳ ಗಾಯನ, ರಂಗ ಗೀತೆಗಳ ಪ್ರಸ್ತುತಿ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು. ಸಂಡೂರಿನ ವಿ.ಟಿ.ಕಾಳೆ, ವಿಶ್ವವಿದ್ಯಾಲಯದ ಕಲಾ ನಿಕಾಯದ ಮುಖ್ಯಸ್ಥ ರಾಬರ್ಟ್‍ಜೋಸ್, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ರವಿ, ನಾಟಕ ಅಕಾಡಮಿಯ ಸದಸ್ಯ ಶಿವನಾಯಕ ದೊರೆ, ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಜಿ.ಕೆ.ಸಂತೋಷ್, ಅಧ್ಯಾಪಕರಾದ ಡಾ.ಮಲ್ಲಯ್ಯ, ಕೇಂದ್ರದ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.