ADVERTISEMENT

ಅಖಂಡ ಬಳ್ಳಾರಿಗೆ 31 ಕರ್ನಾಟಕ ಪಬ್ಲಿಕ್‌ ಶಾಲೆ

ಬಳ್ಳಾರಿಯ 18, ವಿಜಯನಗರ ಜಿಲ್ಲೆಯ 13 ಶಾಲೆಗಳು ಮೇಲ್ದರ್ಜೆಗೆ

ಆರ್. ಹರಿಶಂಕರ್
Published 12 ಡಿಸೆಂಬರ್ 2025, 6:22 IST
Last Updated 12 ಡಿಸೆಂಬರ್ 2025, 6:22 IST
ಉಮಾದೇವಿ 
ಉಮಾದೇವಿ    

ಬಳ್ಳಾರಿ: ಪ್ರಾಥಮಿಕ ತರಗತಿಗಳಿಂದ ಪದವಿಪೂರ್ವ ತರಗತಿಗಳವರೆಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ನೀಡಲು ಮತ್ತು ದಾಖಲಾತಿ ಪ್ರಮಾಣವನ್ನು ಹೆಚ್ಚಿಸಲು ರಾಜ್ಯದಾದ್ಯಂತ 900 ‘ಕರ್ನಾಟಕ ಪಬ್ಲಿಕ್‌ ಶಾಲೆ’ಗಳನ್ನು ಆರಂಭಿಸಲು ಉದ್ದೇಶಿಸಿರುವ ರಾಜ್ಯ ಸರ್ಕಾರ, ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ 200 ಸರ್ಕಾರಿ ಶಾಲೆ ಕೆಪಿಎಸ್‌ ಆಗಿ ಮೇಲ್ದರ್ಜೆಗೆ ಏರಿಸುತ್ತಿದೆ.

ಅದರಂತೆ, ಬಳ್ಳಾರಿ ಜಿಲ್ಲೆಯಲ್ಲಿ 18, ವಿಜಯನಗರ ಜಿಲ್ಲೆಯಲ್ಲಿ 13 ಮ್ಯಾಗ್ನೆಟ್‌ ಶಾಲೆಗಳನ್ನು ಗುರುತಿಸಿ ಅವುಗಳನ್ನು ಕೆಪಿಎಸ್‌ ಆಗಿ ಪರಿವರ್ತಿಸಲಾಗುತ್ತಿದೆ. ಕುರುಗೋಡು–4, ಸಿರುಗುಪ್ಪ –5, ಬಳ್ಳಾರಿ–4, ಸಂಡೂರು –5, ಹರಪನಹಳ್ಳಿ – 3, ಹಡಗಲಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ ತಲಾ 2, ಕೂಡ್ಲಿಗಿ –4 ಒಳಗೊಂಡಿದೆ. 

ಯೋಜನೆ ಅನುಷ್ಠಾನಕ್ಕೆ ನ.29ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಶಾಲೆಗಳ ಗುರುತಿಸುವಿಕೆ ಮತ್ತು ಮೇಲ್ದರ್ಜೆಗೇರಿಸುವ ವಿಷಯವಾಗಿ ಅಧಿಕಾರಿಗಳು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. 

ADVERTISEMENT

ಒಂದು ಶಾಲೆಯಲ್ಲಿ 1200 ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸವಲತ್ತುಗಳನ್ನು ಒದಗಿಸಲು, ಪ್ರತಿಶಾಲೆಗೆ ಅಂದಾಜು ₹2 ಕೋಟಿಯಿಂದ ₹4 ಕೋಟಿವರೆಗೆ ಸಿದ್ಧಪಡಿಸುವ ಯೋಜನಾ ವರದಿಗೆ ಅನುಸಾರವಾಗಿ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಲು ಕೆಕೆಆರ್‌ಡಿಬಿ ಅನುದಾನ ಬಳಸಿಕೊಳ್ಳಲು ಸರ್ಕಾರ ಆದೇಶಿಸಿದೆ. ಕೆಪಿಎಸ್‌ ಶಾಲೆಗಳ 1–5 ಕಿ.ಮೀ ವ್ಯಾಪ್ತಿಯ ಚಿಕ್ಕ ಶಾಲೆಗಳನ್ನು ಈ ಮ್ಯಾಗ್ನೆಟ್‌ ಶಾಲೆಗಳಲ್ಲಿ ವಿಲೀನ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆಯನ್ನು ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ ಖಚಿತಪಡಿಸಬೇಕು ಎಂದು ಸೂಚನೆ ನೀಡಲಾಗಿದೆ.

ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಎಲ್‌.ಕೆ.ಜಿ.ಯಿಂದ ಪಿ.ಯು.ಸಿ.ವರೆಗೂ ಶಿಕ್ಷಣದ ವ್ಯವಸ್ಥೆ ಇರಲಿದೆ. ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಏಕ ತರಗತಿ ಪಠ್ಯಪುಸ್ತಕ ಆಧಾರಿತ ದ್ವಿಭಾಷಾ ಮಾಧ್ಯಮ (ಕನ್ನಡ– ಇಂಗ್ಲಿಷ್) ಬೋಧನೆ ಇರಲಿದೆ. 6ರಿಂದ 10ನೇ ತರಗತಿವರೆಗೆ ಮಾಧ್ಯಮವಾರು ಏಕ ತರಗತಿ ಪಠ್ಯಪುಸ್ತಕ ಆಧಾರಿತ ತರಗತಿಗಳು, ಕ್ರಿಯಾಶೀಲ ಕಲಿಕಾ ಪದ್ಧತಿ ಅಳವಡಿಸಲಾಗಿದೆ. ಒಂದನೇ ತರಗತಿಯಲ್ಲಿ ಕಂಪ್ಯೂಟರ್‌ ಶಿಕ್ಷಣ ಹಾಗೂ ಆರನೇ ತರಗತಿಯಲ್ಲಿ ಕೌಶಲ ಅಭಿವೃದ್ಧಿ ತರಬೇತಿ ನೀಡಲಾಗುತ್ತದೆ. 

ಪ್ರತಿ ಕರ್ನಾಟಕ ಪಬ್ಲಿಕ್ ಶಾಲೆಗೆ ಒಂದು ಆಡಳಿತ ಮಂಡಳಿ ರಚಿಸಲಾಗುತ್ತದೆ. ಆಡಳಿತ ಮಂಡಳಿಯು ಶಾಲೆಯ ಸಮಗ್ರ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ಮತ್ತು ಕಾರ್ಯನಿರ್ವಹಣೆಯನ್ನು ಖಾತರಿಪಡಿಸಿಕೊಳ್ಳಲು ಕನಿಷ್ಠ ಎರಡು ವಾರಗಳಿಗೊಮ್ಮೆ ಸಭೆ ಸೇರಬೇಕು ಎಂದು ಸೂಚಿಸಲಾಗಿದೆ. 

ಹಲವಾರು ನ್ಯೂನತೆಗಳ ಕಾರಣಗಳಿಂದಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಸತತವಾಗಿ ಕುಸಿಯುತ್ತಿದೆ. ಇದೇ ಹೊತ್ತಲ್ಲೇ ಕೆಪಿಎಸ್‌ಗಳಲ್ಲಿ ದಾಖಲಾತಿ, ಉತ್ತೀರ್ಣರಾಗುವ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ರಾಜ್ಯದಾದ್ಯಂತ ವಿಸ್ತರಿಸಿ, ಉಚಿತ, ಗುಣಮಟ್ಟದ ಶಿಕ್ಷಣ ಒದಗಿಸುವ ಮೂಲ ಉದ್ದೇಶ ಹೊಂದಿರುವುದಾಗಿ ಸರ್ಕಾರ ಹೇಳಿದೆ.

ಕೆಪಿಎಸ್‌ಗಳಿಂದ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಲಿದೆ. ವಿಲೀನ ಪ್ರಕ್ರಿಯೆಯಿಂದ ಸಮಸ್ಯೆಗಳೇನೂ ಇಲ್ಲ. ವಿದ್ಯಾರ್ಥಿಗಳನ್ನು ಕರೆತರಲು ಸಾರಿಗೆ ವ್ಯವಸ್ಥೆ ಮಾಡಲಾಗುತ್ತದೆ. ಶಿಕ್ಷಕರು ಕಾಯಂ ಆಗಿ ಕೆಪಿಎಸ್‌ಗಳಲ್ಲೇ ಉಳಿಯಲಿದ್ದಾರೆ 
ಉಮಾದೇವಿ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ
ಕಲ್ಯಾಣ ಕರ್ನಾಟಕಕ್ಕೆ 200 ಶಾಲೆ 
ಅಕ್ಷರ ಆವಿಷ್ಕಾರ ಯೋಜನೆಯ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ 50 ಶಾಲೆಗಳನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ  (ಕೆಕೆಆರ್‌ಡಿಬಿ)ಯ ₹200 ಕೋಟಿ ಅನುದಾನದಲ್ಲಿ ಕೆಪಿಎಸ್‌ಗಳಾಗಿ ಮೇಲ್ದರ್ಜೆಗೇರಿಸಲು 2025–26ರ ಬಜೆಟ್‌ನಲ್ಲಿ ಸರ್ಕಾರ ಘೋಷಣೆ ಮಾಡಲಾಗಿತ್ತು. ಸದ್ಯ ರಾಜ್ಯದಾದ್ಯಂತ ಕೆಪಿಎಸ್‌ಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದ್ದು ಒಟ್ಟು 200 ಶಾಲೆಗಳನ್ನು ಈ ಭಾಗದ ಜಿಲ್ಲೆಗಳಲ್ಲಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಕೆಕೆಆರ್‌ಡಿಬಿಯಿಂದಲೇ ಅನುದಾನ ಒದಗಿಸಲು ನಿರ್ಧರಿಸಲಾಗಿದೆ.