ADVERTISEMENT

ಬಳ್ಳಾರಿ | ಕಸಾಪ ಸಭೆ: ಮತ್ತೆ ಗೊಂದಲದ ಗೂಡು

ಸಭೆ ನಡೆಯುವ ಸ್ಥಳದ ಬಗ್ಗೆ ಪೊಲೀಸ್‌ ಇಲಾಖೆ ಆಕ್ಷೇಪ | ಕಾರ್ಯಸೂಚಿ ವಿವಾದ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 22:44 IST
Last Updated 24 ಜೂನ್ 2025, 22:44 IST
   

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಸಂಡೂರು ಪಟ್ಟಣದಲ್ಲಿ ಇದೇ 29ಕ್ಕೆ ನಿಗದಿಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಭೆ ಪೊಲೀಸ್‌ ಇಲಾಖೆಯ ವರದಿ ಮತ್ತು ಕಾರ್ಯಸೂಚಿಗಳ ಕಾರಣಕ್ಕೆ ಗೊಂದಲ, ವಿವಾದಗಳ ಗೂಡಾಗಿದೆ. 

ಸಭೆ ನಡೆಯುವ ಸ್ಥಳದ ಬಗ್ಗೆ ಪೊಲೀಸ್‌ ಇಲಾಖೆ ಆಕ್ಷೇಪವೆತ್ತಿದ್ದರೆ, ಸಭೆಯಲ್ಲಿ ಚರ್ಚೆಗೆ ನಿಗದಿ ಮಾಡಿರುವ ಕಾರ್ಯಸೂಚಿಗಳ ಬಗ್ಗೆ ಸದಸ್ಯರು ಪ್ರಶ್ನೆಗಳನ್ನೆತ್ತಿದ್ದಾರೆ. 

ಇದೇ ವರ್ಷ ಏಪ್ರಿಲ್‌ 27ರಂದು ಸಂಡೂರಿನಲ್ಲೇ ನಿಗದಿಯಾಗಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆಯೂ ಜಾಗ ಮತ್ತು ಕಾರ್ಯಸೂಚಿ ಕಾರಣಕ್ಕೆ ವಿವಾದಕ್ಕೆ ಗುರಿಯಾಗಿತ್ತು. ಕೊನೆಗೆ ಬಿಸಿಲಿನ ಕಾರಣ ನೀಡಿ ಮುಂದೂಡಲಾಗಿತ್ತು. ಸದ್ಯ, ಸಂಡೂರು ಪಟ್ಟಣದ ಕೂಡ್ಲಿಗಿ ರಸ್ತೆಯಲ್ಲಿರುವ ಆದರ್ಶ ಕಲ್ಯಾಣ ಮಂಟಪದಲ್ಲಿ ವಾರ್ಷಿಕ ಸಭೆ ಮತ್ತು ಕಾರ್ಯಕಾರಿ ಸಮಿತಿ ಸಭೆ ನಡೆಸಲು ಉದ್ದೇಶಿಸಲಾಗಿತ್ತು. ಇದಕ್ಕೆ ಅನುಮತಿ ನೀಡದಿರಲು ಪೊಲೀಸ್‌ ಇಲಾಖೆ ಜಿಲ್ಲಾಧಿಕಾರಿಗೆ ವರದಿ ನೀಡಿದೆ. 

ADVERTISEMENT

ಸಾವಿರಾರು ಅದಿರು ಲಾರಿಗಳ ನಿರಂತರ ಓಡಾಟ, ಇತ್ತೀಚೆಗೆ ಸಂಭವಿಸಿದ್ದ ಭಾರಿ ಅಪಘಾತಗಳು, ಸಾಹಿತಿಗಳ ಸುರಕ್ಷತೆ, ಸಭೆ ನಡೆಯುವ ಮಂಟಪದಲ್ಲಿನ ಮೂಲಸೌಕರ್ಯಗಳ ಕೊರತೆಯ ಕಾರಣವನ್ನು ಪೊಲೀಸ್‌ ಇಲಾಖೆ ಮುಂದಿಟ್ಟಿದೆ.‌ ಈ ಹಿನ್ನೆಲೆಯಲ್ಲಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಪತ್ರ ಬರೆದಿರುವ ಜಿಲ್ಲಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ, ನಿಮ್ಮದೇ ಜವಾಬ್ದಾರಿಯಲ್ಲಿ ಸಭೆ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ. ಇದು ಜಿಲ್ಲಾ ಘಟಕವನ್ನು ಗೊಂದಲಕ್ಕೆ ದೂಡಿದೆ. 

ಸಂಡೂರು ಸಣ್ಣ ಪಟ್ಟಣ. ಪರಿಷತ್ತಿನ ಸದಸ್ಯ ಬಲ ನಾಲ್ಕು ಲಕ್ಷ. ಒಂದು ವೇಳೆ ಅಷ್ಟು ಜನ ಬಂದರೆ ಅದನ್ನು ತಾಳಿಕೊಳ್ಳಲು ಪಟ್ಟಣಕ್ಕೆ ಸಾಧ್ಯವಾಗದು. ಸುರಕ್ಷತೆ ಕಾರಣದಿಂದ ಅನುಮತಿ ನಿರಾಕರಿಸಿದ್ದೇವೆ
 ಡಾ. ಶೋಭಾರಾಣಿ, ಎಸ್‌ಪಿ, ಬಳ್ಳಾರಿ 

ಸಾಹಿತಿಗಳು, ಸದಸ್ಯರ ಸುರಕ್ಷತೆ ಕಾರಣದಿಂದ ಸಭೆಗೆ ಪೊಲೀಸ್‌ ಇಲಾಖೆ ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಮಹೇಶ ಜೋಶಿ, ‘2,000 ಸದಸ್ಯರು ಬರಬಹುದು ಎಂದು ನಾವು ಅಂದಾಜಿಸಿದ್ದೇವೆ. ಒಂದು ಸಾವಿರ ಜನ ಬರಬಹುದಷ್ಟೇ. ಇನ್ನು ಸಾಹಿತಿಗಳು ಎಷ್ಟು ಮಂದಿ ಈ ಐದು ವರ್ಷದಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆಗೆ ಬಂದಿದ್ದಾರೆ? ಎಸ್‌. ಜಿ ಸಿದ್ದರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ, ವಸುಂಧರಾ ಭೂಪತಿ, ಬರಗೂರು ರಾಮಚಂದ್ರಪ್ಪ, ಹಂ.ಪ ನಾಗರಾಜಯ್ಯ, ಚಂದ್ರಶೇಖರ  ಕಂಬಾರ, ದೊಡ್ಡರಂಗೇಗೌಡ, ಭೈರಪ್ಪ ಇವರ್ಯಾರೂ ಸಭೆಗೆ ಬಂದಿಲ್ಲ. ಹೀಗಾಗಿ ಇಲ್ಲಿಯೂ ಅವರು ಬರುವುದನ್ನು ನಿರೀಕ್ಷಿಸಲಾಗದು. ಹೀಗಿದ್ದ ಮೇಲೆ ಹಿರಿಯ ಸಾಹಿತಿಗಳ ಸುರಕ್ಷತೆ ವಿಚಾರ ಉದ್ಭವಿಸುವುದಿಲ್ಲ’ ಎಂದು ಹೇಳಿದರು. 

ಎರಡು ವರ್ಷಗಳ ಬಳಿಕ ಮಂಡನೆ

2023-24ನೇ ಸಾಲಿನ ಲೆಕ್ಕಪರಿಶೋಧಿತ (ಆಡಿಟ್ ಆದ) ವಾರ್ಷಿಕ ಲೆಕ್ಕ ಪತ್ರಗಳ ಮಂಡನೆ ಮತ್ತು 2024–25ನೇ ಸಾಲಿನ ವಾರ್ಷಿಕ ಆಯವ್ಯಯವನ್ನು ಚರ್ಚಿಸಿ ಅನುಮೋದಿಸುವ ಕಾರ್ಯಸೂಚಿಯನ್ನು 29ರ ಸಾಮಾನ್ಯ ಸಭೆ ಒಳಗೊಂಡಿದೆ.

‘ಲೆಕ್ಕಪರಿಶೋಧನಾ ವರದಿಯನ್ನು ಎರಡು ವರ್ಷಗಳ ಬಳಿಕ ಈಗ ಮಂಡಿಸುತ್ತಿರುವುದು ಏಕೆ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಕಸಾಪ ಕೋಶಾಧ್ಯಕ್ಷ ಪಟೇಲ್‌ ಪಾಂಡು, ‘2024 –25ನೇ ಸಾಲಿನ ಆಯವ್ಯಯವನ್ನು ಈಗಾಗಲೇ ಸಂಬಂಧಿಸಿದ ಇಲಾಖೆಗಳಿಗೆ ಕಳುಹಿಸಿದ್ದೇವೆ. ಅದಕ್ಕೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಬೇಕಿದೆ. ಹಿಂದಿನ ಸಭೆ ಮುಂದೂಡಿಕೆಯಾಗಿತ್ತು. ಆ ಕಾರಣಕ್ಕೆ 29ರ ಸಭೆಯಲ್ಲಿ ಮಂಡಿಸುತ್ತಿದ್ದೇವೆ. ಅದನ್ನು ಮಂಡಿಸಲು ಡಿಸೆಂಬರ್ ವರೆಗೆ ನಮಗೆ ಅವಕಾಶವಿದೆ. ಸಭೆಯಲ್ಲಿ ಅದಕ್ಕೆ ನಾವು ಉತ್ತರವನ್ನೂ ಕೊಡಲಿದ್ದೇವೆ. ಇನ್ನು 2023–24ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಹಲವು ಹಂತಗಳಲ್ಲಿ ಪರಿಶೋಧನೆಗೊಂಡಿದ್ದು, ವಿಳಂಬವಾಗಿದೆ. ಈಗ ಮಂಡಿಸುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.