ADVERTISEMENT

ಬಳ್ಳಾರಿ: ಉಪಚುನಾವಣೆಯಲ್ಲಿ ವಿಳಾಸವಲ್ಲ, ಅಭಿವೃದ್ಧಿ ಆದ್ಯತೆಯಾಗಲಿ: ಕೊಂಡಯ್ಯ

‘ಸ್ಥಳೀಯರಿಗೇ ಟಿಕೆಟ್‌ ನೀಡುವಂತೆ ಆಗ್ರಹಿಸಿದ್ದು ನಿಜ’

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 9:22 IST
Last Updated 20 ಅಕ್ಟೋಬರ್ 2018, 9:22 IST
ಕೆ.ಸಿ.ಕೊಂಡಯ್ಯ
ಕೆ.ಸಿ.ಕೊಂಡಯ್ಯ   

ಬಳ್ಳಾರಿ: ‘ಲೋಕಸಭೆ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪನವರ ವಿಳಾಸ ಮುಖ್ಯವಲ್ಲ, ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ ಎಂಬುದನ್ನು ಬಿಜೆಪಿಯವರು ಅರಿಯಬೇಕು’ ಎಂದು ಶಾಸಕ ಕೆ.ಸಿ.ಕೊಂಡಯ್ಯ ಪ್ರತಿಪಾದಿಸಿದರು.

‘ಸಂಸತ್‌ ಸದಸ್ಯರಾಗಿ ಆಯ್ಕೆಯಾಗಿರುವ ಬಿ.ಶ್ರೀರಾಮುಲು, ಜೆ.ಶಾಂತಾ ಕೂಡ ಸ್ಥಳೀಯರಲ್ಲ. 2004ರಿಂದ ಇಲ್ಲಿವರೆಗೆ ಆಯ್ಕೆಯಾಗಿರುವ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಅಗತ್ಯ ಗಮನ ಹರಿಸಲಿಲ್ಲ’ ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಚುನಾವಣಾ ಇತಿಹಾಸದ ಪುಟ ನೋಡಿದರೆ ಹೊರಗಿನವರು ಸ್ಪರ್ಧಿಸಿದ ನಿದರ್ಶನಗಳಿವೆ. ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿದ್ದ ಡಾ.ವಿ.ಕೆ.ಆರ್‌.ವಿ.ರಾವ್‌, ಬಸವರಾಜೇಶ್ವರಿ, ಸೋನಿಯಾಗಾಂಧಿ ಹೊರಗಿನವರು. ಉಪಚುನಾವಣೆಯಲ್ಲಿ ಸ್ಥಳೀಯರಿಗೇ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿದ್ದು ನಿಜ. ಆದರೆ ಹೈಕಮಾಂಡ್‌ ಮುತ್ಸದ್ದಿ ಉಗ್ರಪ್ಪನವರನ್ನು ಆಯ್ಕೆ ಮಾಡಿದೆ’ ಎಂದರು.

ADVERTISEMENT

ಅಭಿವೃದ್ಧಿ: ಹೊಸ ರೈಲು ಮಾರ್ಗಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ತುಂಗಭದ್ರಾ ಸೇತುವೆ ದುರಸ್ತಿ, ಕೇಂದ್ರ ರಸ್ತೆ ನಿಧಿಯ ಸಮರ್ಪಕ ಬಳಕೆ, ರುರ್ಬನ್‌ ಯೋಜನೆಯನ್ನು ಕ್ಷೇತ್ರದ 10 ಗ್ರಾಮ ಪಂಚಾಯ್ತಿಗಳಿಗೆ ವಿಸ್ತರಿಸುವುದು, ಬಳ್ಳಾರಿ–ಹೊಸಪೇಟೆಯನ್ನು ಸ್ಮಾರ್ಟ್‌ ಸಿಟಿಗಳನ್ನಾಗಿಸುವುದು, ಬಳ್ಳಾರಿಯಲ್ಲಿ ಇಂಧನ ಡಿಪೋ ಸ್ಥಾಪನೆ, ಗಣಿ ಸಂತ್ರಸ್ತರ ಅಭಿವೃದ್ಧಿ, ಜವಳಿ ಪಾರ್ಕ್‌ ಸ್ಥಾಪನೆಯಂಥ ಕಾರ್ಯಗಳು ನಡೆಯಬೇಕಾಗಿವೆ. ಉಗ್ರಪ್ಪ ಆಯ್ಕೆಯಾದರೆ ಇವೆಲ್ಲವೂ ಸಾಧ್ಯವಾಗುತ್ತದೆ’ ಎಂದು ಅವರು ಪ್ರತಿಪಾದಿಸಿದರು.

ನಾನೂ ಹೊರಗಿನವನಾಗಿದ್ದೆ!
‘1996ರ ಲೋಕಸಭೆ ಚುನಾವಣೆಯಲ್ಲಿ ಪಕ್ಷ ನನಗೆ ಟಿಕೆಟ್‌ ನೀಡಿದ್ದಾಗಲೂ ಹಲವರು ಕೊಂಡಯ್ಯ ಆಂಧ್ರದವರು ಎಂದು ದೂರಿದ್ದರು’ ಎಂದು ಕೊಂಡಯ್ಯ ಸ್ಮರಿಸಿದರು.

‘1996ರಲ್ಲಿ ಮತ್ತು 1998ರಲ್ಲಿ ಸಂಸದನಾಗಿ ಆಯ್ಕೆಯಾಗಿದ್ದ ನಾನು, ದೊಡ್ಡ ಮನುಷ್ಯರು ಇಲ್ಲಿ ಸ್ಪರ್ಧಿಸಿ ಆಯ್ಕೆಯಾದರೆ ಕ್ಷೇತ್ರದ ಅಭಿವೃದ್ಧಿ ಹೆಚ್ಚಾಗುತ್ತದೆ ಎಂಬ ಕಾರಣದಿಂದ ಸೋನಿಯಾಗಾಂಧೀಯವರನ್ನೇ ಒಪ್ಪಿಸಿದ್ದೆ. ಅವರು ಇಲ್ಲಿಂದಲೇ ಸ್ಪರ್ಧಿಸಿ ಗೆದ್ದಿದ್ದರು’ ಎಂದರು.

ಮುಖಂಡರಾದ ಐವಾನ್‌ ಡಿಸೋಜಾ, ನಗರದ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಿ.ಎಸ್‌.ಮಹ್ಮದ್‌ ರಫೀಕ್‌ ಉಪಸ್ಥಿತರಿದ್ದರು.

ಅನಗತ್ಯವಾಗಿದ್ದ ಉಪಚುನಾವಣೆಗೆ ಆಯೋಗವು ₨ 8 ಕೋಟಿ ಖರ್ಚು ಮಾಡಬೇಕು. ಬಿ.ಶ್ರೀರಾಮುಲು ರಾಜೀನಾಮೆ ನೀಡಿದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ
–ಕೆ.ಸಿ.ಕೊಂಡಯ್ಯ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.