ADVERTISEMENT

ಮಡದಿ, ಮಕ್ಕಳು ಸೇರಿ ಐವರ ಕೊಲೆ; ಗಲ್ಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 12:26 IST
Last Updated 4 ಡಿಸೆಂಬರ್ 2019, 12:26 IST
   

ಹೊಸಪೇಟೆ: ಮಡದಿ, ಮೂವರು ಮಕ್ಕಳು ಹಾಗೂ ಪತ್ನಿಯ ಸಹೋದರಿಯನ್ನು ಹತ್ಯೆ ಮಾಡಿರುವ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ರಾಜಶೇಖರ್‌ ಬುಧವಾರ ಆದೇಶ ನೀಡಿದ್ದಾರೆ.

ಕಂಪ್ಲಿಯ ಚಪ್ಪರದಹಳ್ಳಿ ನಿವಾಸಿ ಬೈಲೂರು ತಿಪ್ಪಯ್ಯ ಮಲ್ಲಪ್ಪ ಶಿಕ್ಷೆಗೊಳಗಾದವನು. ‘ಪತ್ನಿಯ ಶೀಲ ಶಂಕಿಸಿ ನಿತ್ಯ ಜಗಳವಾಡುತ್ತಿದ್ದ. 2017ರ ಫೆ. 25ರ ರಾತ್ರಿ ಪತ್ನಿ ಫಕೀರಮ್ಮ, ಮಕ್ಕಳಾದ ನಾಗರಾಜ, ಪವಿತ್ರ, ಬಸಮ್ಮ ಹಾಗೂ ಮಡದಿಯ ಸಹೋದರಿ ಗಂಗಮ್ಮಳನ್ನು ಮಚ್ಚಿನಿಂದ ಹೊಡೆದು ಸಾಯಿಸಿದ್ದ. ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಸಂಬಂಧ ಕಂಪ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆ ನಡೆದ 12 ವರ್ಷಗಳ ಹಿಂದೆ ಮದುವೆಯಾಗಿದ್ದ.

ಸಿ.ಪಿ.ಐ. ಸಿದ್ದೇಶ್ವರ, ಪಿ.ಎಸ್‌.ಐ. ನಿರಂಜನ್‌ ನೇತೃತ್ವದ ತಂಡ ತನಿಖೆ ನಡೆಸಿ, ದೋಷಾರೋಪಣ ಪತ್ರ ಸಲ್ಲಿಸಿತ್ತು. 36 ಜನ ಸಾಕ್ಷಿ, 51 ದಾಖಲೆ, 22 ವಸ್ತುಗಳನ್ನು ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯದ ಎದುರು ಪ್ರಸ್ತುತಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಕೊಲೆ ನಡೆಸಿರುವುದು ಸಾಬೀತಾಗಿರುವುದರಿಂದ ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ.

ADVERTISEMENT

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಂ.ಬಿ. ಸುಂಕಣ್ಣ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.