
ಬಳ್ಳಾರಿ: ಸಂಡೂರು ತಾಲ್ಲೂಕಿನ ಸ್ವಾಮಿಮಲೈ ವಲಯದ ದೇವದಾರಿ ಬ್ಲಾಕ್‌ನ ಅರಣ್ಯದಲ್ಲಿ ಗಣಿಗಾರಿಕೆಗೆ ಕುದುರೆಮುಖ ಕಬ್ಬಿಣದ ಅದಿರು ಕಂಪನಿಗೆ (ಕೆಐಒಸಿಎಲ್) ಭೂಮಿ ನೀಡದಿರಲು ರಾಜ್ಯ ಸರ್ಕಾರ ಈಚೆಗೆ ನಿರ್ಧರಿಸಿತ್ತು. ಆದರೆ, ಅದೇ ಅರಣ್ಯದ ಹದ್ದಿನಪಡೆ ಬ್ಲಾಕ್ ಮೇಲೆ ಕಂಪನಿ ಕಣ್ಣಿಟ್ಟಿದ್ದು, ಅರಣ್ಯಇಲಾಖೆ ಜೊತೆ ಪತ್ರವ್ಯವಹಾರ ಮುಂದುವರಿಸಿದೆ.
‘ಹದ್ದಿನಪಡೆ’ಯ 1,074 ಎಕರೆ (434.73 ಹೆಕ್ಟೇರ್) ಪ್ರದೇಶದಲ್ಲಿ ಕೆಐಒಸಿಎಲ್ ಗಣಿಗಾರಿಕೆ ನಡೆಸುವ ಉದ್ದೇಶ ಹೊಂದಿದ್ದು, ಪೂರ್ವಭಾವಿಯಾಗಿ ಖನಿಜ ಶೋಧಿಸಲು ಮುಂದಾಗಿದೆ. ಇದಕ್ಕಾಗಿ 9 ಬೋರ್ ಹೋಲ್ ಕೊರೆಯಲು ಅರಣ್ಯ ಇಲಾಖೆಗೆ ಜನವರಿ 8ರಂದು ಪ್ರಸ್ತಾವವನ್ನೂ ಸಲ್ಲಿಸಿದೆ. ಆದರೆ, 9 ಪೈಕಿ 6 ಬೋರ್ ಹೋಲ್‌ಗಳಿಗೆ ಮಾತ್ರ ಜೂನ್ 13ರಂದು ಅರಣ್ಯ ಇಲಾಖೆ ಬಹುತೇಕ ಸಮ್ಮತಿ ಸೂಚಿಸಿದೆ.
‘ಹದ್ದಿನಪಡೆ ಬ್ಲಾಕ್‌ನಲ್ಲಿ ಕೊರೆಯಲು ನಿರ್ಧರಿಸಿರುವ 1 ರಿಂದ 6ನೇ ಸಂಖ್ಯೆಯ ಬೋರ್‌ಹೋಲ್‌ಗಳಿಗೆ ಯಂತ್ರಗಳು ತೆರಳಲು ದಾರಿ ಇದೆ. ಆದರೆ, 7,8 ಮತ್ತು 9ನೇ ಸಂಖ್ಯೆಯ ಬೋರ್‌ಹೋಲ್‌ಗಳಿಗೆ ನಿಗದಿಪಡಿಸಿರುವ ಜಾಗಕ್ಕೆ ತೆರಳಲು ರಸ್ತೆ ಇಲ್ಲ. ರಸ್ತೆ ನಿರ್ಮಿಸಿದರೆ, ಮರಗಳು ಉರುಳುವ ಸಾಧ್ಯತೆಗಳಿವೆ. ವನ್ (ಸಂರಕ್ಷಣ ಏವಂ ಸಂವರ್ಧನ್) ಅಧಿನಿಯಮ–1980ರಡಿಯ ಮಾರ್ಗಸೂಚಿಗಳ ಪ್ರಕಾರ ಸಮೀಕ್ಷೆಗಾಗಿ ಹೊಸ ರಸ್ತೆ ನಿರ್ಮಿಸುವಂತಿಲ್ಲ. ಹೀಗಾಗಿ 7, 8 ಮತ್ತು 9ನೇ ಸಂಖ್ಯೆಯ ಬೋರ್ ಹೋಲ್‌ಗಳಿಗೆ ಅನುಮತಿ ಸಾಧ್ಯವಿಲ್ಲ. ಪರಿಷ್ಕೃತ ಅರ್ಜಿ ಸಲ್ಲಿಸಿ’ ಎಂದು ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಕೆಐಒಸಿಎಲ್‌ಗೆ ಪತ್ರ ಬರೆದಿದ್ದಾರೆ.
ಈ ಕುರಿತ ದಾಖಲೆಗಳು ‘ಆರ್‌ಟಿಐ’ನಡಿ ಲಭ್ಯವಾಗಿವೆ. ಅದರಂತೆ ಮೊದಲ 6 ಬೋರ್‌ಹೋಲ್‌ಗಳಿಗಾಗಿ ಕೆಐಒಸಿಎಲ್ ಹೊಸದಾಗಿ ಪ್ರಸ್ತಾವ ಸಲ್ಲಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
‘ನಿರ್ದಿಷ್ಟ ಪ್ರದೇಶದಲ್ಲಿ ಕಂಪನಿಯೊಂದು ಗಣಿಗಾರಿಕೆ ಆರಂಭಿಸಬೇಕಿದ್ದರೆ, ಖನಿಜ ಶೋಧನೆ ಮೊದಲ ಹಂತ. ಅಲ್ಲಿ ಖನಿಜವಿದೆ ಎಂಬುದು ಸಮೀಕ್ಷೆಯಿಂದ ಗೊತ್ತಾದರೆ, ಗಣಿಗಾರಿಕೆಗೆ ಸಂಬಂಧಿಸಿದ ಪ್ರಕ್ರಿಯೆ ನಂತರ ಚುರುಕುಗೊಳ್ಳುತ್ತದೆ. ಈಗ 6 ಬೋರ್ ಹೋಲ್‌ಗಳಿಗೆ ಸಮ್ಮತಿ ಸಿಕ್ಕಿರುವುದು ಗಣಿಗಾರಿಕೆಗೆ ಆರಂಭಿಕ ಅನುಮೋದನೆ ಸಿಕ್ಕಂತೆಯೇ ಸರಿ’ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನ ಕುದುರೆಮುಖ ಪ್ರದೇಶದಲ್ಲಿ ಕೆಐಒಸಿಎಲ್‌ನಿಂದ ಆದ ಅರಣ್ಯ ನಾಶವನ್ನು ಆಧರಿಸಿ ಸರ್ಕಾರ ಇತ್ತೀಚೆಗೆ ಕಂಪನಿಗೆ ದೇವದಾರಿ ಗಣಿ ಕಾರ್ಯಾಚರಣೆಗೆ ಭೂಮಿ ನೀಡದಿರಲು ನಿರ್ಧರಿಸಿತ್ತು. ಆದರೆ, ಅದೇ ಕಂಪನಿಗೆ ಹದ್ದಿನಪಡೆ ಬ್ಲಾಕ್‌ನಲ್ಲಿ ಖನಿಜ ಶೋಧಕ್ಕೆ ಅವಕಾಶ ಕಲ್ಪಿಸುತ್ತಿರುವುದು ಪರಿಸರ ಪ್ರೇಮಿಗಳಿಗೆ ಅಚ್ಚರಿ ಉಂಟು ಮಾಡಿದೆ.
ಬೋರ್ ಹೋಲ್‌ಗಳಿಗೆ ಅನುಮತಿ ಕೋರಿ ಕೆಐಒಸಿಎಲ್‌ನಿಂದ ಪ್ರಸ್ತಾವ ಸಲ್ಲಿಕೆಯಾಗಿದೆ. ಪರಿಶೀಲಿಸಿ ಪರಿಷ್ಕೃತ ಪ್ರಸ್ತಾವ ಸಲ್ಲಿಸಲು ಸೂಚಿಸಲಾಗಿದೆ. ಆ ಅರ್ಜಿ ಪರಾಮರ್ಶೆ ಹಂತದಲ್ಲಿದೆ.– ಸಂದೀಪ್ ಸೂರ್ಯವಂಶಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಳ್ಳಾರಿ
ಕುದುರೆಮುಖದಲ್ಲಿ ಆದ ಅರಣ್ಯ ಕಾಯ್ದೆ ಉಲ್ಲಂಘನೆಯ ಕಾರಣಕ್ಕೆ ಕೆಐಒಸಿಎಲ್‌ನ ಗಣಿಗಾರಿಕೆಗೆ ಭೂಮಿ ನೀಡದಿರಲು ಸರ್ಕಾರ ನಿರ್ಧರಿಸಿದೆ ಎಂದ ಮೇಲೆ ಖನಿಜ ಶೋಧಕ್ಕೆ ಯಾಕೆ ಭೂಮಿ ನೀಡಬೇಕು?– ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಜನಸಂಗ್ರಾಮ ಪರಿಷತ್ ಬಳ್ಳಾರಿ
‘ರಾಜ್ಯದ ಅತಿದೊಡ್ಡ ಖನಿಜ ಶೋಧನೆ’ ‘ಹದ್ದಿನಪಡೆ’ ಬ್ಲಾಕ್‌ನ ಒಟ್ಟು 1074 ಎಕರೆಯಲ್ಲಿ ಕಬ್ಬಿಣದ ಅದಿರು ಮ್ಯಾಂಗನೀಸ್ ಶೋಧನೆ ಕಾರ್ಯವನ್ನು ಕೆಐಒಸಿಎಲ್‌ಗೆ ನೀಡಲಾಗಿದೆ. ಕರ್ನಾಟಕ ಸರ್ಕಾರದಿಂದ ಮಂಜೂರಾದ ಅತಿದೊಡ್ಡ ಖನಿಜ ಶೋಧನಾ ಬ್ಲಾಕ್ ಇದಾಗಿದೆ. ಇದಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರದ ಕಬ್ಬಿಣ ಮತ್ತು ಉಕ್ಕು ಇಲಾಖೆಯ 2021ರ ಮಾರ್ಚ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಖನಿಜ ಶೋಧನೆ ಮೂಲಯೋಜನೆ ಮೊತ್ತ ₹21.29 ಕೋಟಿ ಎಂದು ಕೆಐಒಸಿಎಲ್ 2019–20ರ 44ನೇ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.