ಬಳ್ಳಾರಿ: ಸಂಡೂರು ತಾಲ್ಲೂಕಿನ ದೇವದಾರಿ ಕಬ್ಬಿಣದ ಅದಿರು ಗಣಿಯ ಅರಣ್ಯ ಗುತ್ತಿಗೆ ಒಪ್ಪಂದವನ್ನು ಶತಾಯಗತಾಯ ಕಾರ್ಯಗತಗೊಳಿಸಲು ನಿರ್ಧರಿಸಿರುವ ‘ಕುದುರೆಮುಖ ಕಬ್ಬಿಣದ ಅದಿರು ಕಂಪನಿ (ಕೆಐಒಸಿಎಲ್)’ ರಾಜ್ಯ ಅರಣ್ಯ ಇಲಾಖೆಯ ಬೇಡಿಕೆಗಳಿಗೆ ಸಮ್ಮತಿ ಸೂಚಿಸಿದೆ.
ಸಂಡೂರಿನ ಸ್ವಾಮಿ ಮಲೈ ಅರಣ್ಯದ ಒಟ್ಟು 338 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಕೆಐಒಸಿಎಲ್ ಉದ್ದೇಶಿಸಿದೆ. ದಟ್ಟಅರಣ್ಯದಲ್ಲಿರುವ ಈ ಗಣಿಗೆ ಈಗಾಗಲೇ ಕೇಂದ್ರ ಅರಣ್ಯ ಇಲಾಖೆಯಿಂದ ಅಂತಿಮ ಹಂತದ ಅನುಮೋದನೆ ಪಡೆದಿದೆ.
ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದಲ್ಲಿ ಗಣಿಗಾರಿಕೆ ನಡೆಸಿದ್ದ ಕೆಐಒಸಿಎಲ್, ಅಲ್ಲಿ ಆಗಿದ್ದ ಅರಣ್ಯ ನಾಶಕ್ಕೆ ಸಂಬಂಧಿಸಿ ಕೇಂದ್ರದ ಉನ್ನತಾಧಿಕಾರ ಸಮಿತಿ (ಸಿಇಸಿ) ಶಿಫಾರಸು ಜಾರಿಗೊಳಿಸುವವರಿಗೆ ಸಂಡೂರಿನಲ್ಲಿ ಅರಣ್ಯ ಭೂಮಿ ಹಸ್ತಾಂತರಿಸದೇ ಇರಲು ರಾಜ್ಯ ಅರಣ್ಯ ಇಲಾಖೆ ನಿರ್ಧರಿಸಿತ್ತು.
ಈ ನಡುವೆ ಸರ್ಕಾರದೊಂದಿಗೆ ಎರಡು ಸಭೆಗಳನ್ನು ನಡೆಸಿರುವ ಕೆಐಒಸಿಎಲ್ ಮತ್ತು ಕೇಂದ್ರ ಉಕ್ಕು ಸಚಿವಾಲಯ, ಸಿಇಸಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದಾಗಿ ಮತ್ತು ರಾಜ್ಯ ಅರಣ್ಯ ಇಲಾಖೆ ಪ್ರಸ್ತಾಪಿಸಿರುವ ಹೆಚ್ಚುವರಿ ವಿಷಯಗಳನ್ನು ಪಾಲಿಸುವುದಾಗಿ ವಾಗ್ದಾನ (ಅಂಡರ್‌ಟೇಕಿಂಗ್) ನೀಡಿದೆ.
‘ಲಕ್ಯಾ ಅಣೆಕಟ್ಟೆ ಎತ್ತರ ಹೆಚ್ಚಿಸಿದ್ದರಿಂದ ಆದ 340 ಹೆಕ್ಟೇರ್ ಅರಣ್ಯ ಭೂಮಿ ಮುಳುಗಡೆ ಕುರಿತು ಸಿಇಸಿ ಶಿಫಾರಸುಗಳನ್ನು ಪಾಲಿಸಲಾಗುವುದು, ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿನ, ಕೆಐಒಸಿಎಲ್ ಒಡೆತನದ 114.3 ಹೆಕ್ಟೇರ್ ಭೂಮಿ ಮತ್ತು ಅಲ್ಲಿನ ನಿರ್ಮಾಣಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗುವುದು, 53.82 ಎಕರೆ ಭೂಮಿ ಬಳಕೆಗೆ ಸಂಬಂಧಿಸಿದ ಅರಣ್ಯ ಇಲಾಖೆ ಸೂಚನೆ ಪಾಲಿಸಲಾಗುವುದು’ ಎಂದು ಕೆಐಒಸಿಎಲ್ ಸರ್ಕಾರಕ್ಕೆ ಸಲ್ಲಿಸಿರುವ ಪತ್ರದಲ್ಲಿ ಹೇಳಿದೆ.
ದೇವದಾರಿ ಗಣಿಗಾರಿಕೆಯಿಂದ 99,330 ಮರಗಳು ನಾಶವಾಗಲಿವೆ ಎಂದು ಅರಣ್ಯ ಇಲಾಖೆ ಹೇಳಿದೆ.
ದೇವದಾರಿ ಗಣಿಗೆ ಇಲ್ಲ ದಾರಿ: ಸಂಡೂರಿನ ಸ್ವಾಮಿ ಮಲೈ ಅರಣ್ಯದ 338 ಹೆಕ್ಟೇರ್ ಪ್ರದೇಶದ ದೇವದಾರಿ ಗಣಿಗೆ ಕೆಐಒಸಿಎಲ್ ಬಹುತೇಕ ಎಲ್ಲ ಅನುಮತಿ ಪಡೆದಿದೆ. ಆದರೆ, ಗಣಿಗೆ ತಲುಪಲು ರಸ್ತೆಗಳೇ ಇಲ್ಲ. ಗಣಿಗೆ ತಲುಪಲು ಅರಣ್ಯ ಭೂಮಿ ಬಳಸಲು ಇಲಾಖೆಗೆ ಆಗಸ್ಟ್ 20ರಂದು ಅರ್ಜಿ ಸಲ್ಲಿಸಿದೆ.
ಪ್ರಧಾನಿ ಅಂಗಳಕ್ಕೆ ವಿವಾದ: ಕೆಐಒಸಿಎಲ್‌ಗೆ ಅರಣ್ಯ ಭೂಮಿ ಹಸ್ತಾಂತರ ಮಾಡುವ ವಿಷಯದಲ್ಲಿ ಉಕ್ಕು ಸಚಿವಾಲಯ ಮತ್ತು ರಾಜ್ಯ ಸರ್ಕಾರದ ನಡುವೆ ಉದ್ಭವಿಸಿರುವ ವಿವಾದವು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯುವ ‘ಪ್ರಗತಿ’ ಸಭೆಯಲ್ಲಿ ಇತ್ಯರ್ಥವಾಗಬೇಕಿದೆ.
ಕುದುರೆಮುಖದಲ್ಲಿನ ಅರಣ್ಯ ನಾಶವನ್ನು ಸರಿಪಡಿಸುವುದಾಗಿ ಕೆಐಒಸಿಎಲ್ ಹೇಳುತ್ತಿದೆ. ಆದರೆ ಸಂಡೂರಿನಲ್ಲಿ ಹೊಸದಾಗಿ ಒಂದು ಲಕ್ಷ ಮರ ಕಡಿಯಲು ಮುಂದಾಗಿದೆಶ್ರೀಶೈಲ ಆಲದಹಳ್ಳಿ ಮುಖಂಡ ಜನಸಂಗ್ರಾಮ ಪರಿಷತ್
ಏಕಿಷ್ಟು ತರಾತುರಿ?
ಕೆಐಒಸಿಎಲ್ 50 ವರ್ಷಗಳ ಅವಧಿಗೆ ದೇವದಾರಿ ಗಣಿಯನ್ನು ಗುತ್ತಿಗೆಗೆ ಪಡೆದಿದೆ. ಗುತ್ತಿಗೆ ಕರಾರು ನೋಂದಣಿಯಾದ ಎರಡು ವರ್ಷಗಳ ಒಳಗೆ ಕಂಪನಿ ನಿರ್ದಿಷ್ಟ ಪ್ರದೇಶದಲ್ಲಿ ಗಣಿಗಾರಿಕೆ ಆರಂಭಿಸಿ ಅದಿರು ಉತ್ಪಾದನೆ ಮಾಡಬೇಕಿತ್ತು. ಎಂಎಂಡಿಆರ್ ಕಾಯ್ದೆ ಪ್ರಕಾರ ಗಣಿ ಗುತ್ತಿಗೆ 2025ರ ಜ. 17ಕ್ಕೆ ಅಂತ್ಯವಾಗಬೇಕಾಗಿತ್ತು. ಕಂಪನಿ 2024ರ ಡಿ. 30ರಂದು ಗುತ್ತಿಗೆ ನವೀಕರಿಸಿಕೊಂಡಿದೆ. ಆ ಪ್ರಕಾರ ಡಿಸೆಂಬರ್ 30ರ ಒಳಗಾಗಿ ಕೆಐಒಸಿಎಲ್ ದೇವದಾರಿ ಗಣಿ ಕಾರ್ಯಾಚರಣೆ ಆರಂಭಿಸಬೇಕಾದ ಅನಿವಾರ್ಯತೆ ಇದೆ. ಇಲ್ಲವಾದರೆ ಗುತ್ತಿಗೆ ಒಪ್ಪಂದ ರದ್ದಾಗುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.