ಸಾಂದರ್ಭಿಕ ಚಿತ್ರ
ಬಳ್ಳಾರಿ: ಸಂಡೂರಿನಲ್ಲಿ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದಿದ್ದ ‘ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮದ (ಕೆಎಂಇಆರ್‌ಸಿ) ಮೇಲುಸ್ತುವಾರಿ‘ಯ (ಒಎ) 19ನೇ ಸಭೆಯು ‘ಗಣಿಗಾರಿಕೆ ಪರಿಣಾಮ ವಲಯಕ್ಕಾಗಿ ಸಮಗ್ರ ಪರಿಸರ ಯೋಜನೆ (ಸಿಇಪಿಎಂಝಡ್)’ಯ ಆಶಯಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಏಪ್ರಿಲ್ 3ರಂದು ನಡೆದಿದ್ದ ಸಭೆಯಲ್ಲಿ ₹ 1,125 ಕೋಟಿಯ ರಸ್ತೆ, ಕುಡಿಯುವ ನೀರು, ಒಳಚರಂಡಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಆದರೆ, ಶಿಕ್ಷಣ ಆರೋಗ್ಯ, ಮಹಿಳೆ, ಮಕ್ಕಳು, ಕೃಷಿ, ಕೌಶಲ ಅಭಿವೃದ್ಧಿ ಸೇರಿದಂತೆ ಜನಕೇಂದ್ರಿತ ಯೋಜನೆಗಳ ಬದಲಾಗಿ ನಿರ್ಮಾಣ ಕೇಂದ್ರಿತ ಯೋಜನೆಗಳಿಗೆ ಮಾತ್ರವೇ ಸಭೆಯಲ್ಲಿ ಆದ್ಯತೆ ಕೊಟ್ಟಿರುವುದು ಸಭಾ ನಡಾವಳಿಗಳಿಂದ ಗೊತ್ತಾಗುತ್ತಿದೆ.
ಇಂಥ ಯೋಜನೆಗಳನ್ನು ಅಂಗೀಕರಿಸಲು ಸಂಡೂರಿನಲ್ಲಿ ಮೂರು ದಿನಗಳ ಪ್ರವಾಸವೆಂಬ ಪ್ರಹಸನ ನಡೆಸಬೇಕಾಗಿತ್ತೇ ಎಂಬ ಆಕ್ಷೇಪದ ನುಡಿಗಳು ಕೇಳಿ ಬಂದಿವೆ.
ಮೂರು ದಿನಗಳ ಕಾಲ ಸಂಡೂರಿನಲ್ಲಿ ಉಳಿದಿದ್ದ ಕೆಎಂಇಆರ್‌ಸಿಯ ಮುಖ್ಯಸ್ಥರು, ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ನಾಗರಿಕರು, ಸಂಘ–ಸಂಸ್ಥೆಗಳ ಸಭೆ ನಡೆಸಿದ್ದರು. ಅವರಿಂದ ಸಲಹೆ, ಶಿಫಾರಸುಗಳನ್ನು ಸ್ವೀಕರಿಸಿದ್ದರು. ಆದರೆ, ನಾಗರಿಕರು, ಸಂಘ–ಸಂಸ್ಥೆಗಳು ನೀಡಿದ ಸಲಹೆ ಸೂಚನೆಗಳನ್ನು ಸಭೆಯಲ್ಲಿ ಚರ್ಚಿಸಿರುವ ಬಗ್ಗೆಯೂ ಉಲ್ಲೇಖಗಳಿಲ್ಲ.
‘ನಾಗರಿಕ ಕೇಂದ್ರಿದ ಕಾರ್ಯಕ್ರಮಗಳನ್ನು ಜಾರಿಗೆ ತರುವಂತೆ ನಾವು ಕೆಎಂಇಆರ್‌ಸಿಯ ಪ್ರಮುಖರಿಗೆ ಲಿಖಿತ ಮನವಿ ಕೊಟ್ಟಿದ್ದೆವು. ಆದರೆ, ಸಭಾ ನಡಾವಳಿಗಳನ್ನು ನೋಡಿದರೆ, ತೀವ್ರ ನಿರಾಸೆಯಾಗಿದೆ. ನಮ್ಮ ಸಲಹೆಗಳನ್ನು ಪಾಲಿಸುವುದಿರಲಿ, ಚರ್ಚೆಯನ್ನೂ ಮಾಡಿಲ್ಲ’ ಎಂದು ವಿವಿಧ ಸಂಘಟನೆಗಳ ಮುಖಂಡರು ಹೇಳಿದ್ದಾರೆ.
ನರಸಿಂಗಪುರ ಮತ್ತು ಇತರ ಮೂರು ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ₹3.55 ಕೋಟಿ ವೆಚ್ಚದ ಯೋಜನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಆದರೆ, ಆ ಮೂರು ಹಳ್ಳಿಗಳು ಯಾವುದು ಎಂಬುದರ ಬಗ್ಗೆ ನಡಾವಳಿಗಳಲ್ಲಿ ಒಂದೇ ಒಂದು ಉಲ್ಲೇಖವೂ ಇಲ್ಲ. ಸಂಡೂರಿನ ಗಣಿಬಾಧಿತ ಬಹುತೇಕ ಹಳ್ಳಿಗಳಲ್ಲಿ ನೀರು ಮತ್ತು ನೈರ್ಮಲ್ಯದ ಸಮಸ್ಯೆ ತಾಂಡವವಾಡುತ್ತಿದೆ. ಆದರೆ, ಈ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿಲ್ಲ.
ಗಣಿ ಪ್ರದೇಶದಲ್ಲಿರುವ ಹಳ್ಳಿಗಳಲ್ಲಿ ಅದಿರು ಲಾರಿಗಳ ಸುಗಮ ಓಡಾಟಕ್ಕಾಗಿ ₹ 300.05 ಕೋಟಿ ಮೊತ್ತದ 5 ಸಿಮೆಂಟ್ ರಸ್ತೆಗಳಿಗೆ ಕೆಎಂಇಆರ್‌ಸಿಯ ಒಎ ಸಭೆ ಅನುಮೋದನೆ ನೀಡಿದೆ. ಮೊದಲಿಗೆ ಗ್ರಾಮವನ್ನು ಪೀಡಿಸುತ್ತಿರುವ ಸಮಸ್ಯೆ ನಿವಾರಣೆ, ಮೂಲಸೌಕರ್ಯದತ್ತ ಗಮನಿಸಬೇಕಾಗಿದ್ದ ಕೆಎಂಇಆರ್‌ಸಿ, ದೂಳು ನಿವಾರಣೆಯ ನೆಪವೊಡ್ಡಿ ಅದಿರು ಲಾರಿಗಳ ಸುಗಮ ಓಡಾಟದ ಹಿತ ಕಾದಿರುವುದು ಗೊತ್ತಾಗಿದೆ. ಅಷ್ಟೇ ಅಲ್ಲ, ಈ ಐದು ರಸ್ತೆಗಳಲ್ಲಿ ಒಂದು ನಾರಾಯಣಪುರ–ರಾಜಾಪುರ ಎಂದು ಹೇಳಲಾಗಿದೆ. ಇನ್ನುಳಿದ ನಾಲ್ಕು ರಸ್ತೆಗಳು ಯಾವುವು ಎಂಬುದರ ಬಗ್ಗೆ ಮಾಹಿತಿಯೇ ಇಲ್ಲ. ಇದರಲ್ಲಿ ಗುಪ್ತ ಕಾರ್ಯಸೂಚಿ ಅಡಗಿರುವ ಸಾಧ್ಯತೆಗಳಿವೆ ಎಂಬ ಆರೋಪಗಳು ಕೇಳಿ ಬಂದಿವೆ.
ಇದರ ಜತೆಗೆ, ಸಂಡೂರು ನಗರಕ್ಕೆ ₹189 ಕೋಟಿ ಮೊತ್ತದ ಕುಡಿಯುವ ನೀರು ಮತ್ತು ಸಂಡೂರು ಪುರಸಭೆಗೆ ₹167 ಕೋಟಿಯ ನೈರ್ಮಲ್ಯ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ.
ಕುಡುತಿನಿ ಮತ್ತು ವೇಣಿವೀರಪುರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಒಟ್ಟು ₹464.81ಕೋಟಿ ಯೋಜನೆಗೆ ಅನುಮೋದನೆ ನೀಡಲಾಗಿದೆ. ಕುಡಿಯುವ ನೀರು ಸರಬರಾಜಿಗೆ ₹299.43 ಕೋಟಿ, ನೈರ್ಮಲ್ಯಕ್ಕೆ ₹165.38 ಕೋಟಿಯ ಪ್ರಸ್ತಾವಗಳು ಸಲ್ಲಿಕೆಯಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.