ADVERTISEMENT

ಬಳ್ಳಾರಿ | ರಾಬಕೊವಿ ಗದ್ದುಗೆಗೆ ಚುನಾವಣೆ

ಅವಿರೋಧ ಆಯ್ಕೆಯ ಸಾಧ್ಯತೆಗಳು ದಟ್ಟ | ಹಿಟ್ನಳ್‌ ಬಣದಲ್ಲಿ ಮನೆ ಮಾಡಿದೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 5:12 IST
Last Updated 25 ಜುಲೈ 2025, 5:12 IST
ಬಳ್ಳಾರಿ ಕೆಎಂಎಫ್‌ 
ಬಳ್ಳಾರಿ ಕೆಎಂಎಫ್‌    

ಬಳ್ಳಾರಿ: ಭಾರೀ ಕುತೂಹಲಕ್ಕೆ ಕಾರಣವಾಗಿರುವ ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಉತ್ಪಾದರಕ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದೆ. 

ಬೆಳಿಗ್ಗೆ 9ರಿಂದ 11ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ. 11 ಗಂಟೆಗೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಕ್ರಮಬದ್ಧ ಉಮೇದುವಾರಿಕೆಯನ್ನು ಪ್ರಕಟಿಸಲಾಗುತ್ತದೆ. ಆ ಬಳಿಕ ನಾಮಪತ್ರ ಹಿಂಪಡೆಯಲು ಅಭ್ಯರ್ಥಿಗಳಿಗೆ 30 ನಿಮಿಷ ಸಮಯ ನೀಡಲಾಗಿದೆ. ಇದಾದ ಬಳಿಕ ಕಣದಲ್ಲಿ ಉಳಿಯುವ ಅಂತಿಮ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗುತ್ತದೆ. 

ಮಧ್ಯಾಹ್ನ 1ಗಂಟೆಗೆ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆ ಸಂಗವಾಗಿ ನೆರವೇರಲು ಸಕಲ ಸಿದ್ಧತೆಗಳಾಗಿವೆ. ಪೊಲೀಸ್‌ ಬಿಗಿ ಬಂದೋಬಸ್ತ್‌ ಒದಗಿಸಲಾಗಿದೆ.  

ADVERTISEMENT

ಇತ್ತೀಚೆಗೆ ಒಕ್ಕೂಟದ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಖಂಡ ಬಳ್ಳಾರಿ, ರಾಯಚೂರು, ಕೊಪ್ಪಳದಿಂದ 12 ಮಂದಿ ಆಯ್ಕೆಯಾಗಿದ್ದರು. ಇದರಲ್ಲಿ ಒಕ್ಕೂಟದ ಮಾಜಿ ಅಧ್ಯಕ್ಷ ಭೀಮ ನಾಯ್ಕ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್‌ ಅವರ ಬಣಗಳೆರಡೂ ಸಮಬಲ ಸಾಧಿಸಿದ್ದವು. ಆ ಬಳಿಕ ರಾಘವೇಂದ್ರ ಹಿಟ್ನಾಳ್‌ ಬಣ ಬಲವರ್ಧನೆಗೊಂಡಿದ್ದು, ಸಂಖ್ಯಾಬಲವನ್ನೂ ಹೆಚ್ಚಿಸಿಕೊಂಡಿದೆ. 

ಈ ಮಧ್ಯೆ, ಸ್ವತಃ ರಾಘವೇಂದ್ರ ಹಿಟ್ನಾಳ್‌ ಅವರೇ ಒಕ್ಕೂಟಕ್ಕೆ ನಾಮ ನಿರ್ದೇಶನಗೊಂಡಿರುವುದು ಇಡೀ ಚಿತ್ರಣವನ್ನೇ ಬದಲು ಮಾಡಿದೆ. ಅವರನ್ನು ಅಧ್ಯಕ್ಷರನ್ನಾಗಿಸುವುದಕ್ಕಾಗಿಯೇ ಸರ್ಕಾರ ನಾಮ ನಿರ್ದೇಶನ ಮಾಡಿದೆ ಎಂದು ವ್ಯಾಖ್ಯಾನಿಸಲಾಗಿದೆ. 

ಅವಿರೋಧ ಆಯ್ಕೆಯ ಸಾಧ್ಯತೆ: ರಾಘವೇಂದ್ರ ಹಿಟ್ನಾಳ್‌ ಬಣ ಸಂಖ್ಯಾಬಲದಲ್ಲಿ ಮುಂದಿರುವುದನ್ನು ಗಮನಿಸಿರುವ ಕಾಂಗ್ರೆಸ್‌ ರಾಜ್ಯ ನಾಯಕರು, ಅವರಿಗೇ ಅಧ್ಯಕ್ಷಗಿರಿ ನೀಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸ್ಪರ್ಧಾ ಕಣಕ್ಕಿಳಿದು ಅನಗತ್ಯ ಹೋರಾಟ ಮಾಡುವ ಬದಲಿಗೆ ಅವಿರೋಧ ಆಯ್ಕೆಗೆ ಸಹಕರಿಸಲು ಭೀಮ ನಾಯ್ಕ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಚುನಾವಣೆಯೇ ನಡೆಯದೇ ಅಧ್ಯಕ್ಷರ ಘೋಷಣೆಯಾಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ ಎಂದು ಮೂಲಗಳು ತಿಳಿಸಿವೆ.

ದೇವರ ದರ್ಶನ ಬಳಿಕ ನಾಯಕರ ಭೇಟಿ: ಕೊಪ್ಪಳ,  ರಾಯಚೂರು ಜಿಲ್ಲೆಗಳಿಂದ ಆಯ್ಕೆಯಾಗಿರುವ ಒಟ್ಟು 8 ಮಂದಿಯ ಪೈಕಿ 7 ಮಂದಿ ರಾಘವೇಂದ್ರ ಹಿಟ್ನಾಳ್‌ ಅವರ ಪರವಾಗಿದ್ದು, ಒಟ್ಟಾಗಿ ಇತ್ತೀಚೆಗೆ ಮಂತ್ರಾಲಯದ ರಾಘವೇಂದ್ರನ ದರ್ಶನಕ್ಕೆ ತೆರಳಿದ್ದರು. ಅಲ್ಲಿಂದ ನೇರವಾಗಿ ಬೆಂಗಳೂರಿಗೆ ಹೋಗಿರುವ ತಂಡ ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಮತ್ತು ಇತರೆ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಎಲ್ಲರ ಬೆಂಬಲ ಕೋರಿದ್ದಾರೆ ಎಂದು ಗೊತ್ತಾಗಿದೆ. 

ಮತಗಳ ಲೆಕ್ಕ: ರಾಬಕೊವಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಒಟ್ಟು 18 ಮತಗಳು ಚಲಾವಣೆಗೊಳ್ಳಲಿವೆ. 

ಅಖಂಡ ಬಳ್ಳಾರಿ, ಕೊಪ್ಪಳ, ರಾಯಚೂರಿನಿಂದ ಒಟ್ಟು 12ನಿರ್ದೇಶಕರು ಗೆದ್ದಿದ್ದಾರೆ. ಇದರ ಜತೆಗೆ ನಾಮನಿರ್ದೇಶಿತಗೊಂಡ ಒಬ್ಬ ನಿರ್ದೇಶಕ, ರಬಕೊವಿ ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳದಿಂದ (ಕೆಎಂಎಫ್‌) ನಿಯೋಜನೆಗೊಂಡ ಒಬ್ಬ ಅಧಿಕಾರಿ, ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಯ (ಎನ್‌ಡಿಡಿಬಿ) ಒಬ್ಬರು, ಪಶುಸಂಗೋಪನಾ ಇಲಾಖೆ ಮತ್ತು ಸಹಕಾರ ಇಲಾಖೆಯಿಂದ ತಲಾ ಒಬ್ಬೊಬ್ಬರು ಸೇರಿ ಒಟ್ಟು 18 ಮಂದಿ ಮತ ಚಲಾಯಿಸಲಿದ್ದಾರೆ. 

9ಕ್ಕಿಂತಲೂ ಅಧಿಕ ಮತ ತೆಗೆದುಕೊಂಡವರು ವಿಜಯಶಾಲಿಗಳಾಗಲಿದ್ದಾರೆ. 

ಹಿಟ್ನಾಳ್‌ಗೆ ಈಗಲೇ ಜೈಕಾರ:

ರಾಘವೇಂದ್ರ ಹಿಟ್ನಾಳ್‌ ಅವರು ಒಕ್ಕೂಟದ ಅಧ್ಯಕ್ಷರಾಗುವ ಸಂಭಾವ್ಯತೆ ಅಧಿಕವಾಗಿದೆ ಎಂದು ತಿಳಿಯುತ್ತಲೇ ಅವರ ಅಭಿಮಾನಿಗಳು ಈಗಾಗಲೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಅವರಿಗೆ ಶುಭಕೋರುವ ಪೋಸ್ಟ್‌ಗಳು ಹರಿದಾಡುತ್ತಿವೆ. 

ಇತ್ತ ಭೀಮ ನಾಯ್ಕ ಅವರ ಬಣದ ಕಡೆಯಿಂದ ಹೆಚ್ಚಾಗಿ ಸುದ್ದಿಯಾಗಲಿ, ಸದ್ದಾಗಲಿ ಕಾಣಿಸುತ್ತಿಲ್ಲ. ಇದು, ಅವರು ಈಗಾಗಲೇ ಸೋಲೊಪ್ಪಿಕೊಂಡಿರುವ ಕುರಿತು ಪರೋಕ್ಷ ಸಂದೇಶವನ್ನು ನೀಡುತ್ತಿರುವಂತಿದೆ ಎಂಬ ಮಾತುಗಳು ಬಳ್ಳಾರಿಯ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.