ADVERTISEMENT

ಕೊಟ್ಟೂರು | ‘ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿ ಇಲ್ಲ’

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 4:31 IST
Last Updated 25 ಫೆಬ್ರುವರಿ 2026, 4:31 IST
ಕೊಟ್ಟೂರಿನಲ್ಲಿ ನಡೆಯುತ್ತಿರುವ ಪ್ರಜಾಸೌಧ ಕಟ್ಟಡದ ಕಾಮಗಾರಿ ಸ್ಥಳಕ್ಕೆ ಸೋಮವಾರ ಶಾಸಕ ಕೆ.ನೇಮರಾಜನಾಯ್ಕ ಭೇಟಿ ನೀಡಿ ಪರಿಶೀಲಿಸಿದರು
ಕೊಟ್ಟೂರಿನಲ್ಲಿ ನಡೆಯುತ್ತಿರುವ ಪ್ರಜಾಸೌಧ ಕಟ್ಟಡದ ಕಾಮಗಾರಿ ಸ್ಥಳಕ್ಕೆ ಸೋಮವಾರ ಶಾಸಕ ಕೆ.ನೇಮರಾಜನಾಯ್ಕ ಭೇಟಿ ನೀಡಿ ಪರಿಶೀಲಿಸಿದರು   

ಕೊಟ್ಟೂರು: ಕ್ಷೇತ್ರದಾದ್ಯಂತ ನಡೆಯುವ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿಯಾಗುವ ಪ್ರಶ್ನೆಯಿಲ್ಲ ಹಾಗೂ ಕಾಮಗಾರಿಯಲ್ಲಿ ಕಳಪೆ ಕಂಡುಬಂದಲ್ಲಿ ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಶಾಸಕ ಕೆ.ನೇಮರಾಜನಾಯ್ಕ ಹೇಳಿದರು.

ಪಟ್ಟಣದ ಪ್ರಜಾಸೌಧ ಕಟ್ಟಡದ ಕಾಮಗಾರಿಯನ್ನು ಸೋಮವಾರ ಪರಿಶೀಲಿಸಿ ಮಾತನಾಡಿದ ಅವರು, ಇತ್ತೀಚಿಗೆ ಕೆಲವು ಸಂಘಟನೆಗಳ ಮುಖಂಡರು ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ಆರೋಪಿಸುತ್ತಿರುವುದು ಸತ್ಯಕ್ಕೆ ದೂರವಾಗಿದೆ ಎಂದರು.

ಸಂಘಟನೆಯ ಮುಖ್ಯಸ್ಥರು ಸಂಬಂಧಿಸಿದ ಇಲಾಖಾಧಿಕಾರಿಗಳ ಗಮನಕ್ಕೆ ತಂದರೆ ಅಧಿಕಾರಿಗಳು ಕಾಮಗಾರಿಗಳನ್ನು ಪರೀಕ್ಷಿಸಲು ಸಹಕಾರಿಯಾಗುತ್ತದೆ ವಿನಃ ಅನಗತ್ಯವಾಗಿ ಗುತ್ತಿಗೆದಾರರ ವಿರುದ್ಧ ಆರೋಪಿಸುವುದು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುವುದು ಉತ್ತಮ ಬೆಳವಣಿಗೆಯಲ್ಲ ಎಂದರು.

ADVERTISEMENT

ನಿಗದಿತ ಅವಧಿಯೊಳಗೆ ಸುಸಜ್ಜಿತ ಪ್ರಜಾಸೌಧದ ಕಾಮಗಾರಿ ಪೂರ್ಣಗೊಂಡು ಶೀಘ್ರದಲ್ಲಿಯೇ ಲೋಕಾರ್ಪಣೆಗೊಳಿಸಲಾಗುವುದು. ಪೂರ್ಣ ಪ್ರಮಾಣದ ತಾಲ್ಲೂಕು ಮಟ್ಟದ ಕಚೇರಿಗಳನ್ನು ಸಹ ಆರಂಭಿಸುವಂತೆ ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ಅವರು ಭರವಸೆ ನೀಡಿದರು.

ಮುಖಂಡರಾದ ಬೂದಿ ಶಿವಕುಮಾರ್, ಬಾವಿಕಟ್ಟೆ ಶಿವಾನಂದ, ತಿಮ್ಮಲಾಪುರ ಕೊಟ್ರೇಶ್, ಎಚ್.ಗುರುಬಸವರಾಜ್, ತಹಶೀಲ್ದಾರ್ ಜಿ.ಕೆ.ಅಮರೀಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ನಸರುಲ್ಲಾ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಎಚ್.ವಿಜಯಕುಮಾರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.