ಕೊಟ್ಟೂರು: ಇತ್ತೀಚಿಗೆ ಸುರಿದ ನಿರಂತರ ಮಳೆಗೆ ಪಟ್ಟಣದ ಕೆರಗೆ ಒಳ ಹರಿವು ಹೆಚ್ಚಾಗಿದೆ. ಇದೇ ರೀತಿ ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾದರೆ ಕಳೆದ ವರ್ಷದಂತೆ ಈ ವರ್ಷವೂ ಕೋಡಿ ಬೀಳುತ್ತದೆ ಎಂಬ ಆಶಾಭಾವನೆ ಮೂಡಿದೆ.
16ನೇ ಶತಮಾನದಲ್ಲಿ ವಿಜಯನಗರ ಅರಸರ ಆಳ್ವಿಕೆಯಲ್ಲಿ ಕೆರೆ ನಿರ್ಮಾಣಗೊಂಡು 1899 ರಲ್ಲಿ ಪುನರ್ ನಿರ್ಮಾಣ ಕಂಡಿದೆ ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ.
ಒಟ್ಟು 304 ಹೆಕ್ಟೇರ್ ಅಚ್ಚು ಕಟ್ಟು ಪ್ರದೇಶ ಹೊಂದಿರುವ ಕೆರೆಯ ಏರಿ ಗರಿಷ್ಠ 15 ಮೀ. ಎತ್ತರವಿದ್ದು, 0.1736 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ದೊಡ್ಡ ಕೆರೆಗೆ ಎರಡು ತೂಬುಗಳನ್ನು ಅಳವಡಿಸಲಾಗಿದ್ದು ಈ ಭಾಗದ ಜನತೆಯ ಜೀವನಾಡಿಯಾಗಿದೆ.
2017ರಲ್ಲಿ ಕೆರೆಯ ಅಭಿವೃದ್ಧಿಗೆ ನಮ್ಮ ಕೆರೆ ನಮ್ಮ ಹಕ್ಕು ತಂಡದ ಸದಸ್ಯರು, ಮಠಾಧೀಶರ ಪರಿಷತ್ತು, ಸಂಘ ಸಂಸ್ಥೆಗಳ ಪರಿಶ್ರಮ ಹಾಗೂ ಸಾರ್ವಜನಿಕರ ಸಹಕಾರದಿಂದ ಕೆರೆಯಲ್ಲಿ ಬೆಳೆದಿದ್ದ ಜಾಲಿಗಿಡಗಳನ್ನು ತೆರವುಗೊಳಿಸಲಾಗಿತ್ತು. ನರೇಗಾ ಯೋಜನೆಯಡಿ ಹೂಳು ತೆಗೆಯಲಾಗಿತು. ಇದರ ಪರಿಣಾಮವಾಗಿ ಕೆರೆಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದೆ. ಈ ಭಾಗದ ಅಂತರ್ಜಲ ವೃದ್ಧಿಗೂ ಸಹಕಾರಿಯಾಗಿದೆ.
‘ಪ್ರಕೃತಿದತ್ತವಾಗಿ ಹರಿದು ಬರುವ ನೀರಿನಿಂದ ಕೆರೆ ತುಂಬುತ್ತಿರುವುದು ಸಂತೋಷದ ವಿಷಯವಾಗಿದೆ. ಕೂಡಲೇ ತೂಬುಗಳನ್ನು ಸರಿಪಡಿಸಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವುದನ್ನು ತಡೆಯಬೇಕಾಗಿದೆ. ಬಿರುಕು ಬಿಟ್ಟಿರುವ ಏರಿಗಳನ್ನು ದುರಸ್ತಿಗೊಳಿಸಬೇಕಾಗಿದೆ. ಕಾಲುವೆಗಳಲ್ಲಿರುವ ಹೂಳನ್ನು ತೆರವುಗೊಳಿಸಿ ಎಂದು ಸಣ್ಣ ನೀರಾವರಿ ಸಚಿವರು ಹಾಗೂ ಇಲಾಖಾಧಿಕಾರಿಗಳ ಗಮನ ಸೆಳೆಯಲು ಪತ್ರ ಬರೆದಿದ್ದೇನೆ’ ಎಂದು ನಮ್ಮ ಕೆರೆ ನಮ್ಮ ಹಕ್ಕು ತಂಡದ ಅಂಚೆ ಕೊಟ್ರೇಶ್ ತಿಳಿಸಿದರು.
ನೈಸರ್ಗಿಕ ಸಂಪನ್ಮೂಲಗಳಲ್ಲಿ ಜಲ ಸಂಪತ್ತು ಒಂದು. ನೀರು ಜೀವಜಲ ಸಕಲ ಜೀವರಾಶಿಗಳಿಗೂ ನೀರು ಅತ್ಯವಶ್ಯಕವಾಗಿರುವುದರಿಂದ ನೀರು ಪೋಲಾಗದಂತೆ ಸಂರಕ್ಷಿಸುವುದು ಪ್ರತಿಯೊಬ್ಬರ ಹೊಣೆಯಾಗಿದೆ ಎಂದು ಸಾಮಾಜಿಕ ಹೋರಾಟಗಾರ ಸದಾನಂದ ಹೆಗ್ಗಡಾಳ್ ಮಠ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕೆರೆ ಸುತ್ತಮುತ್ತಲಿನ ಗಿಡ ಗಂಟೆಗಳನ್ನು ತೆರವುಗೊಳಿಸಿ ಕೆರೆ ಏರಿ ಹಾಗೂ ತೂಬುಗಳನ್ನು ಕೂಡಲೇ ದುರಸ್ತಿಗೊಳಿಸಲು ಕ್ರಮಕೈಗೊಳ್ಳಲಾಗುವುದುಎಂ.ರಾಜು ಸಹಾಯಕ ಎಂಜಿನಿಯರ್ ಸಣ್ಣ ನೀರಾವರಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.