ADVERTISEMENT

ಮೂರನೇ ದಿನಕ್ಕೆ ಮುಷ್ಕರ: ಪಟ್ಟು ಬಿಡದ ಸಾರಿಗೆ ನೌಕರರಿಗೆ ಉತ್ತಮ ಬೆಂಬಲ

ಮೂರನೇ ದಿನವೂ ಮುಷ್ಕರಕ್ಕೆ ಉತ್ತಮ ಬೆಂಬಲ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 8:06 IST
Last Updated 9 ಏಪ್ರಿಲ್ 2021, 8:06 IST
ಸಾರಿಗೆ ಸಂಸ್ಥೆ ನೌಕರರು ಸತತ ಮೂರನೇ ದಿನವೂ ಮುಷ್ಕರ ಮುಂದುವರೆಸಿದ್ದರಿಂದ ಶುಕ್ರವಾರ ಹೊಸಪೇಟೆ ಕೇಂದ್ರ ಬಸ್‌ ನಿಲ್ದಾಣದಿಂದಲೇ ಖಾಸಗಿ ವಾಹನಗಳು ಸಂಚರಿಸಿದವು. ಬಸ್‌ ನಿಲ್ದಾಣ ಅಕ್ಷರಶಃ ಖಾಸಗಿ ವಾಹನಗಳ ನಿಲ್ದಾಣವಾಗಿ ಮಾರ್ಪಟ್ಟಿದೆಪ್ರಜಾವಾಣಿ ಚಿತ್ರ: ಅಭಿಷೇಕ್‌ ಸಿ.
ಸಾರಿಗೆ ಸಂಸ್ಥೆ ನೌಕರರು ಸತತ ಮೂರನೇ ದಿನವೂ ಮುಷ್ಕರ ಮುಂದುವರೆಸಿದ್ದರಿಂದ ಶುಕ್ರವಾರ ಹೊಸಪೇಟೆ ಕೇಂದ್ರ ಬಸ್‌ ನಿಲ್ದಾಣದಿಂದಲೇ ಖಾಸಗಿ ವಾಹನಗಳು ಸಂಚರಿಸಿದವು. ಬಸ್‌ ನಿಲ್ದಾಣ ಅಕ್ಷರಶಃ ಖಾಸಗಿ ವಾಹನಗಳ ನಿಲ್ದಾಣವಾಗಿ ಮಾರ್ಪಟ್ಟಿದೆಪ್ರಜಾವಾಣಿ ಚಿತ್ರ: ಅಭಿಷೇಕ್‌ ಸಿ.   

ಹೊಸಪೇಟೆ (ವಿಜಯನಗರ): ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ತರಬೇಕೆಂದು ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಶುಕ್ರವಾರ ಮೂರನೇ ದಿನವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸರ್ಕಾರ ಹಾಗೂ ಸ್ಥಳೀಯ ಅಧಿಕಾರಿಗಳು ಕೆಲಸಕ್ಕೆ ಹಾಜರಾಗುವಂತೆ ಎಷ್ಟೇ ಮನವಿ ಮಾಡಿಕೊಂಡರೂ ಸಾರಿಗೆ ನೌಕರರು ಪಟ್ಟು ಸಡಿಲಿಸುತ್ತಿಲ್ಲ. ಇದು ಸಾರಿಗೆ ಸೇವೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇದರಿಂದ ಜನ ಬಹಳ ಸಮಸ್ಯೆ ಎದುರಿಸುತ್ತಿದ್ದಾರೆ.

ಯಾವುದೇ ರೀತಿಯ ಖಾಸಗಿ ವಾಹನಗಳು ನಗರದ ಕೇಂದ್ರ ಬಸ್‌ ನಿಲ್ದಾಣದೊಳಗೆ ಪ್ರವೇಶಿಸಲು ಸಿಬ್ಬಂದಿ ಈ ಹಿಂದೆ ಬಿಡುತ್ತಿರಲಿಲ್ಲ. ಅದಕ್ಕಾಗಿಯೇ ಸಿಬ್ಬಂದಿ 24X7ರಂತೆ ಕೆಲಸ ನಿರ್ವಹಿಸುತ್ತಾರೆ. ಆದರೆ, ಈಗ ಅದೇ ಸಾರಿಗೆ ಸಂಸ್ಥೆಯವರು ಕೇಂದ್ರ ಬಸ್‌ ನಿಲ್ದಾಣದಿಂದ ಖಾಸಗಿ ವಾಹನಗಳು ಸಂಚರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಮೂರನೇ ದಿನವೂ ಬಸ್‌ ನಿಲ್ದಾಣದಿಂದಲೇ ಖಾಸಗಿ ಬಸ್‌, ಮ್ಯಾಕ್ಸಿಕ್ಯಾಬ್‌, ಟಂ ಟಂ, ಕ್ರೂಸರ್‌ ವಾಹನಗಳು ಸಂಚರಿಸಿದವು. ಬೆರಳೆಣಿಕೆಯಷ್ಟು ಸಾರಿಗೆ ಬಸ್‌ಗಳು ದೀರ್ಘ ಸಮಯದ ವರೆಗೆ ಕಾದು ಕೆಲವು ಮಾರ್ಗಗಳಲ್ಲಿ ಸಂಚರಿಸಿದವು.

ADVERTISEMENT

ಸಾರಿಗೆ ಸಂಸ್ಥೆಯ ಕೆಲವೇ ಕೆಲವು ಬಸ್ಸುಗಳು, ಖಾಸಗಿ ವಾಹನಗಳು ತಾಲ್ಲೂಕು ಕೇಂದ್ರಗಳಿಗಷ್ಟೇ ಸಂಚರಿಸುತ್ತಿರುವುದರಿಂದ ಹೆಚ್ಚಿನ ಜನರಿಗೆ ಅನುಕೂಲವಾಗುತ್ತಿಲ್ಲ. ಮೇಲಿಂದ ಖಾಸಗಿಯವರು ಬಸ್‌ ದರಕ್ಕಿಂತ ದುಪ್ಪಟ್ಟು ಹಣ ಕೇಳುತ್ತಿದ್ದಾರೆ ಎಂಬ ಆರೋಪ ಇದೆ. ಅದಕ್ಕಾಗಿ ಜನ ಬಸ್‌ ನಿಲ್ದಾಣದ ಕಡೆಗೆ ಸುಳಿಯುತ್ತಿಲ್ಲ. ಹೆಚ್ಚಿನವರು ದ್ವಿಚಕ್ರ ವಾಹನ ಸೇರಿದಂತೆ ಇತರೆ ವೈಯಕ್ತಿಕ ವಾಹನ, ಗೆಳೆಯರು, ಸಂಬಂಧಿಕರ ವಾಹನಗಳಲ್ಲಿ ದೈನಂದಿನ ಕೆಲಸಕ್ಕೆ ಬೇರೆ ಬೇರೆ ಭಾಗಗಳಿಗೆ ಹೋಗಿ ಬರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.