ಕುಡುತಿನಿ (ಸಂಡೂರು): ಕುಡುತಿನಿ ಸಮೀಪದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಕೈಗಾರಿಕಾ ವಲಯದಲ್ಲಿ ಜಿಂದಾಲ್‌ನ ಕಬ್ಬಿಣ ಕಾರ್ಖಾನೆಯ (ಕೋಲ್ಡ್ ರೋಲ್ಡ್ ಗ್ರೇನ್ ಓರಿಯೆಂಟೆಡ್ ಸ್ಟೀಲ್ ಪ್ಲಾಂಟ್) ಸ್ಥಾಪನೆಗೆಂದು ಬುಧವಾರ ಕರೆದಿದ್ದ ಸಾರ್ವಜನಿಕರ ಅಹವಾಲು ಆಲಿಕೆ ಸಭೆಗೆ ಕುಡುತಿನಿ ಭೂಸಂತ್ರಸ್ತ ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಹೋರಾಟಗಾರರು, ನ್ಯಾಯಯುತ ಭೂಪರಿಹಾರ ನೀಡುವಂತೆ ಪಟ್ಟು ಹಿಡಿದರು. ಉದ್ಯೋಗಾವಕಾಶ ಕಲ್ಪಿಸಲು ಒತ್ತಾಯಿಸಿದರು. ಇದಕ್ಕೂ ಮುನ್ನ ಅವರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅವರು ಪ್ರತಿಭಟನೆ ನಡೆಸಿದರು.
‘ಆರಂಭದಲ್ಲಿ ಲಕ್ಷ್ಮೀ ಮಿತ್ತಲ್‌ನ ಕಬ್ಬಿಣ ಕಾರ್ಖಾನೆಗೆಂದು ವಶಕ್ಕೆ ಪಡೆಯಲಾಗಿದ್ದ ಭೂಮಿಯಲ್ಲಿ ಒಂದಷ್ಟು ಭಾಗವನ್ನು ಮರಳಿ ತನ್ನ ಸುಪರ್ದಿಗೆ ಪಡೆದಿರುವ ಕೆಐಎಡಿಬಿ ಅದನ್ನು ಅಭಿವೃದ್ಧಿಪಡಿಸಿ, ಜೆಎಸ್‌ಡಬ್ಲ್ಯುಗೆ ನೀಡಿದೆ. ಭೂಮಿಯನ್ನು ಯಾವ ಉದ್ದೇಶಕ್ಕೆ ವಶಕ್ಕೆ ಪಡೆದಿದೆಯೋ, ಅದೇ ಉದ್ದೇಶಕ್ಕೆ ಬಳಸಬೇಕು. ಇಲ್ಲದಿದ್ದರೆ, ರೈತರಿಗೆ ವಾಪಸ್ ನೀಡಬೇಕು’ ಎಂದು ಹೋರಾಟಗಾರರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.