ಕಂಪ್ಲಿ: ‘ಪೌಷ್ಟಿಕ ಮಣ್ಣು ಯಶಸ್ವಿ ಬೇಸಾಯದ ಮೂಲಾಧಾರವಾಗಿದೆ’ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಅಧಿಕಾರಿ ಸಂಜುಕುಮಾರ್ ತಿಳಿಸಿದರು.
ತಾಲ್ಲೂಕಿನ ನಂ.10 ಮುದ್ದಾಪುರ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‍ನಿಂದ ರೈತ ಮಹಿಳೆಯರಿಗೆ ಕೃಷಿ ವಿಸ್ತರಣಾ ಕಾರ್ಯಕ್ರಮಗಳ ಯೋಜನೆ ಅಡಿ ನೆಲ-ಜಲ ಸಂರಕ್ಷಣೆ, ಮಳೆ ನೀರು ಕೊಯ್ಲು ಹಾಗೂ ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಸಾಯನಿಕ ಗೊಬ್ಬರ ಬಳಕೆ ತ್ಯಜಿಸಿ ಸಾವಯವ ಹಾಗೂ ಯಂತ್ರಾಧಾರಿತ ಕೃಷಿಯತ್ತ ಗಮನಹರಿಸುವಂತೆ ರೈತರಲ್ಲಿ ಮನವಿ ಮಾಡಿದರು.
ಕೃಷಿ ಅಧಿಕಾರಿ ಕೆ. ಸೋಮಶೇಖರ್ ಮಾತನಾಡಿ, ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ದೊರೆಯುವ ಬಿತ್ತನೆ ಬೀಜ, ಯಂತ್ರೋಪಕರಣ ಸೇರಿದಂತೆ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಗ್ರಾಮದ ಪ್ರಮುಖ ಚನ್ನಬಸಯ್ಯಸ್ವಾಮಿ, ಒಕ್ಕೂಟದ ಉಪಾಧ್ಯಕ್ಷೆ ಬಿ. ಲಕ್ಷ್ಮಿ, ಸೇವಾ ಪ್ರತಿನಿಧಿ ಚೈತ್ರಾ, ಸ್ವಸಹಾಯ ಸಂಘದ 65ಕ್ಕೂ ಹೆಚ್ಚು ರೈತ ಮಹಿಳೆಯರು ಭಾಗವಹಿಸಿದ್ದರು.