ADVERTISEMENT

ಬಳ್ಳಾರಿ ವಿಮ್ಸ್‌ನಲ್ಲಿ ವೈರಾಣು ಪರೀಕ್ಷಾ ಲ್ಯಾಬ್ ಆರಂಭ: ಕೊರೊನಾ ಪತ್ತೆಗೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 8:35 IST
Last Updated 6 ಏಪ್ರಿಲ್ 2020, 8:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಳ್ಳಾರಿ: ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿಯೇ ವೈರಾಣು ಪರೀಕ್ಷಾ ಪ್ರಯೋಗಾಲಯ ಆರಂಭವಾಗಿದ್ದು, ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದೆ.

ಮಹಾಮಾರಿ‌ ಕೊರೊನಾ ಸೊಂಕಿನ ಪರೀಕ್ಷಾ ವರದಿ‌ ಬೆಂಗಳೂರಿನಿಂದ ಬರುವಿಕೆಗಾಗಿ ಕಾಯುವುದಕ್ಕೆ ಇನ್ಮುಂದೆ ತಡೆ ಬೀಳಲಿದ್ದು, ತತ್‌ಕ್ಷಣವೇ ವರದಿ ಲಭ್ಯವಾಗಲಿದೆ.

ಅತಿ ಕಡಿಮೆ ಅವಧಿಯಲ್ಲಿ ಅಗತ್ಯ ಕ್ರಮಗಳನ್ನು‌ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಅನುಕೂಲವಾಗಲಿದೆ. ಬಳ್ಳಾರಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಗೂ‌ ಇದು ಸಹಕಾರಿಯಾಗಲಿರುವುದೆ.

ADVERTISEMENT

ವಿಮ್ಸ್‌ನಲ್ಲಿ ಆರಂಭಿಸಲಾಗಿರುವ ವೈರಾಣು ಸಂಶೋಧನಾ ಮತ್ತು ರೋಗ ಪರೀಕ್ಷಾ ಪ್ರಯೋಗಾಲಯವು ಸರ್ಕಾರದಿಂದ ಎಲ್ಲ ರೀತಿಯ ಪರಿಶೀಲನೆಗೆ ಒಳಪಟ್ಟು ಸುಸೂತ್ರ ಕಾರ್ಯಾರಂಭಕ್ಕೆ ಅನುಮತಿ ದೊರಕಿದೆ.

ಈ ಪ್ರಯೋಗಾಲಯದಲ್ಲಿ ‌ಒಂದು ಯಂತ್ರವಿದ್ದು, ಪ್ರತಿದಿನಕ್ಕೆ ಒಂದು ಶಿಫ್ಟ್‌ನಲ್ಲಿ 15 ಸ್ಯಾಂಪಲ್ ಪರೀಕ್ಷಿಸಬಹುದಾಗಿದೆ. ಈ ಪ್ರಯೋಗಾಲಯದಲ್ಲಿ ಎಲ್ಲ ರೀತಿಯ ವೈದ್ಯಕೀಯ ಪರಿಕರಗಳನ್ನು ವ್ಯವಸ್ಥೆಗೊಳಿಸಲಾಗಿದೆ.

ಜಿಲ್ಲಾ‌ಡಳಿತದಿಂದ ಜಿಲ್ಲಾ ವಿಪತ್ತು ಪರಿಹಾರ ನಿಧಿ ಅಡಿ 16.5ಲಕ್ಷ ರೂಪಾಯಿ ಮೊತ್ತದಲ್ಲಿ ಇನ್ನೊಂದು ವೈರಾಣು ಪರೀಕ್ಷಾ ಯಂತ್ರವನ್ನು ಖರೀದಿಸಲಾಗಿದ್ದು, ಇದು ಕೂಡ ಪ್ರತಿ ಪಾಳಿಯಲ್ಲಿ 45 ಮಾದರಿಗಳನ್ನು ಪರೀಕ್ಷಿಸಲಿದೆ.

ಎರಡು ಪಾಳಿಗಳಲ್ಲಿ ಎರಡು ಯಂತ್ರಗಳಿಂದ ಒಟ್ಟು 110 ಮಾದರಿ ಗಳನ್ನು ಪ್ರತಿನಿತ್ಯ ಪರೀಕ್ಷಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ಈ ಪ್ರಯೋಗಾಲಯ ಸ್ಥಾಪಿಸುವಲ್ಲಿ ವಿಮ್ಸ್ ನಿರ್ದೇಶಕ ಡಾ.ಬಿ.ದೇವಾನಂದ, ಮೈಕ್ರೋಬಯೋಲಾಜಿ ವಿಭಾಗದ ಮುಖ್ಯಸ್ಥ ಡಾ.ಕೃಷ್ಣ ವಿಶೇಷ ಶ್ರಮ ವಹಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.