ADVERTISEMENT

ಹಂಪಿ ಕನ್ನಡ ವಿ.ವಿ. ಕುಲಪತಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆ ಆರೋಪ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 7 ಫೆಬ್ರುವರಿ 2023, 6:17 IST
Last Updated 7 ಫೆಬ್ರುವರಿ 2023, 6:17 IST
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ   

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹೊಸ ಕುಲಪತಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆ ಎದ್ದು ಕಾಣುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಇಷ್ಟೇ ಅಲ್ಲ, ಇಡೀ ಪ್ರಕ್ರಿಯೆ ಬಹಳ ನಿಧಾನ ಗತಿಯಲ್ಲಿ ನಡೆಯುತ್ತಿದೆ. ಹಾಲಿ ಕುಲಪತಿ ಪ್ರೊ.ಸ.ಚಿ. ರಮೇಶ ಅವರ ಅವಧಿ ಫೆ. 21ರಂದು ಕೊನೆಗೊಳ್ಳಲಿದೆ. ಆದರೆ, ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸಿದವರ ಪಟ್ಟಿ ಇದುವರೆಗೆ ಉನ್ನತ ಶಿಕ್ಷಣ ಇಲಾಖೆಯ ವೈಬ್‌ಸೈಟಿನಲ್ಲಿ ಬಿಡುಗಡೆಗೊಳಿಸಿಲ್ಲ. ಶೋಧನಾ ಸಮಿತಿಯೂ ರಚಿಸಿಲ್ಲ.

ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಜ. 22 ಕೊನೆಯ ದಿನವಾಗಿತ್ತು. ನಂತರ ಅರ್ಜಿ ಸಲ್ಲಿಸಿದವರ ಹೆಸರುಗಳನ್ನು ವೈಬ್‌ಸೈಟಿನಲ್ಲಿ ಪ್ರಕಟಿಸಬೇಕು. ಬಳಿಕ ಪರಿಶೀಲಿಸಿ, ಅರ್ಹರ ಪಟ್ಟಿ ಪ್ರಕಟಿಸಿ ಒಂದು ವಾರ ಆಕ್ಷೇಪಣೆಗೆ ಕಾಲಾವಕಾಶ ಕೊಡಬೇಕು.

ADVERTISEMENT

ಅರ್ಜಿ ಕರೆದ ಸಂದರ್ಭದಲ್ಲೇ ಮೂವರನ್ನು ಒಳಗೊಂಡ ಶೋಧನಾ ಸಮಿತಿ ರಚಿಸಬೇಕು. ಅರ್ಜಿ ಸಲ್ಲಿಸಿದವರ ಹೆಸರುಗಳನ್ನು ಶೋಧನಾ ಸಮಿತಿಗೆ ಕಳಿಸಲಾಗುತ್ತದೆ. ಈ ಸಮಿತಿಯು ಮೂವರ ಹೆಸರು ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಮೂವರಲ್ಲಿ ಒಬ್ಬರ ಹೆಸರಿಗೆ ರಾಜ್ಯಪಾಲರು ಅಂಕಿತ ಹಾಕುತ್ತಾರೆ. ಇಡೀ ಪ್ರಕ್ರಿಯೆ ಫೆ. 21ರೊಳಗೆ ಪೂರ್ಣಗೊಳ್ಳಬೇಕು. ಆದರೆ, ಇದುವರೆಗೆ ಅರ್ಹರ ಪಟ್ಟಿ ಪ್ರಕಟಿಸಿ, ಆಕ್ಷೇಪಣೆಗೆ ಆಹ್ವಾನಿಸಿಲ್ಲ. ಶೋಧನಾ ಸಮಿತಿ ರಚಿಸಿ, ಅಧಿಸೂಚನೆಯೂ ಹೊರಡಿಸಿಲ್ಲ. ವಿಳಂಬಕ್ಕೆ ಕಾರಣವೇನು ಎಂಬುದು ಗೊತ್ತಾಗುತ್ತಿಲ್ಲ. ಇದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.

‘ರಾಜ್ಯದ ಏಳು ಹೊಸ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕಾತಿ ವಿಚಾರದಲ್ಲಿ ಉನ್ನತ ಶಿಕ್ಷಣ ಇಲಾಖೆಯು ಪಾರದರ್ಶಕವಾಗಿ ಎಲ್ಲ ನಿಯಮಗಳನ್ನು ಅನುಸರಿಸುತ್ತಿದೆ. ಕಾಲಕಾಲಕ್ಕೆ ಅದರ ಎಲ್ಲಾ ಮಾಹಿತಿ ಇಲಾಖೆಯ ವೈಬ್‌ಸೈಟಿನಲ್ಲಿ ಪ್ರಕಟಿಸಲಾಗುತ್ತಿದೆ. ಆದರೆ, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಷಯಕ್ಕೆ ಬಂದಾಗ ಗೋಪ್ಯ ಕಾಪಾಡಲಾಗುತ್ತಿದೆ. ಯಾರ ಹಿತಾಸಕ್ತಿ ಕಾಪಾಡಲು ಈ ರೀತಿ ಮಾಡಲಾಗುತ್ತಿದೆ ಎನ್ನುವುದು ಗೊತ್ತಾಗುತ್ತಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಕನ್ನಡ ವಿ.ವಿ. ಹಿರಿಯ ಪ್ರಾಧ್ಯಾಪಕರೊಬ್ಬರು ತಿಳಿಸಿದ್ದಾರೆ.

21ರೊಳಗೆ ಆಗದಿದ್ದರೆ ಏನು?: ಫೆ. 21ರಂದು ಸರ್ಕಾರ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಹೊಸ ಕುಲಪತಿ ಹೆಸರು ಘೋಷಿಸಲೇಬೇಕು. ಒಂದುವೇಳೆ ಈಗ ನಡೆಯುತ್ತಿರುವ ಪ್ರಕ್ರಿಯೆ ಪ್ರಕಾರ ಕುಲಪತಿ ಹುದ್ದೆ ತುಂಬದಿದ್ದಲ್ಲಿ ವಿಶ್ವವಿದ್ಯಾಲಯದ ಅತಿ ಹಿರಿಯ ಪ್ರಾಧ್ಯಾಪಕರಿಗೆ ಜವಾಬ್ದಾರಿ ವಹಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.