ADVERTISEMENT

ಮೊರಾರ್ಜಿ ಶಾಲೆ: ಪಾಠ,ಊಟ,ವಾಸ್ತವ್ಯ ಒಂದೇಕಡೆ, 125 ವಿದ್ಯಾರ್ಥಿನಿಯರಿಗೆ 4 ಶೌಚಾಲಯ

ಕನಿಷ್ಠ ಮೂಲಸೌಕರ್ಯವಿಲ್ಲದ ಶಾಲೆ

ಸಿ.ಶಿವಾನಂದ
Published 6 ಸೆಪ್ಟೆಂಬರ್ 2018, 11:59 IST
Last Updated 6 ಸೆಪ್ಟೆಂಬರ್ 2018, 11:59 IST
ಶಾಲಾ ತರಗತಿ ಕೊಠಡಿಯಲ್ಲಿ ಊಟ ಮಾಡುತ್ತಿರುವ ವಿದ್ಯಾರ್ಥಿಗಳು
ಶಾಲಾ ತರಗತಿ ಕೊಠಡಿಯಲ್ಲಿ ಊಟ ಮಾಡುತ್ತಿರುವ ವಿದ್ಯಾರ್ಥಿಗಳು   

ಹಗರಿಬೊಮ್ಮನಹಳ್ಳಿ: ಈ ವಸತಿ ಶಾಲೆಯಲ್ಲಿ ಪಾಠ, ಊಟ, ವಾಸ್ತವ್ಯ ಎಲ್ಲವೂ ಒಂದೇ ಕಡೆ ನಡೆಯುತ್ತದೆ. ಗಂಡು ಮಕ್ಕಳಿಗೆ ಬಯಲೇ ಶೌಚಾಲಯ. 125 ವಿದ್ಯಾರ್ಥಿನಿಯರಿಗೆ ನಾಲ್ಕು ಶೌಚಾಲಯಗಳಿದ್ದು, ಬೆಳಿಗ್ಗೆ ಎದ್ದರೆ ಸಾಲುಗಟ್ಟಿ ನಿಲ್ಲಬೇಕು.

ಇದು ತಾಲ್ಲೂಕಿನ ವಲ್ಲಭಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಚಿತ್ರಣ.

ಬಾಲಕರಿಗೆ ಶೌಚಾಲಯವಿಲ್ಲದ ಕಾರಣ ಅವರು ಬಯಲನ್ನೇ ಆಶ್ರಯಿಸಿದ್ದಾರೆ. ಮುಳ್ಳು, ಕಂಟಿ ನಡುವೆ ಹೋಗಿ ಮಲ, ಮೂತ್ರ ವಿಸರ್ಜನೆ ಮಾಡುತ್ತಾರೆ. ರಾತ್ರಿ ವೇಳೆ ಮೂತ್ರ ವಿಸರ್ಜನೆಗೆ ಹೊರಗೆ ಹೋಗಬೇಕಾಗುತ್ತದೆ ಎಂಬ ಕಾರಣಕ್ಕೆ ಅನೇಕ ವಿದ್ಯಾರ್ಥಿಗಳು ನೀರು ಕುಡಿಯಲು ಹಿಂದೇಟು ಹಾಕುತ್ತಾರೆ.

ADVERTISEMENT

ಒಟ್ಟು 250 ವಿದ್ಯಾರ್ಥಿಗಳಿಗೆ ಎಂಟು ಕೊಠಡಿಗಳಿವೆ. ಬೆಳಿಗ್ಗೆ ಅದರಲ್ಲೇ ಉಪಾಹಾರ ನಡೆದರೆ, ನಂತರ ಪಾಠ ನಡೆಯುತ್ತದೆ. ಮತ್ತೆ ಮಧ್ಯಾಹ್ನ ಊಟ, ಸಂಜೆಯ ಓದು, ರಾತ್ರಿ ಊಟ ಹಾಗೂ ವಾಸ್ತವ್ಯ, ಎಲ್ಲ ಆ ಕೊಠಡಿಗಳಲ್ಲೇ ನಡೆಯುತ್ತದೆ.

125 ಬಾಲಕಿಯರಿಗೆ ನಾಲ್ಕು ಶೌಚಾಲಯ, ಅಷ್ಟೇ ಸ್ನಾನಗೃಹಗಳಿವೆ. ನಿತ್ಯ ನಾಲ್ಕು ಗಂಟೆಗೆ ಎದ್ದು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಗ್ರಾಮದ ಡಾ.ಬಿ.ಆರ್‌. ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಶಾಲೆಯ ಕಚೇರಿ ನಡೆಯುತ್ತಿದ್ದರೆ, ಮಹಿಳಾ ಭವನದಲ್ಲಿ ಏಳನೇ ತರಗತಿಯ ಪಾಠ ನಡೆಯುತ್ತದೆ.

ಮಕ್ಕಳು ಆಟವಾಡಬೇಕೆಂದರೆ ಸಮೀಪದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮೈದಾನಕ್ಕೆ ಹೋಗಬೇಕು. ನಾಲ್ಕು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಶಾಲೆ ನಡೆಸಲಾಗುತ್ತಿದೆ. ಶಾಲೆಯಲ್ಲಿ ವ್ಯಾಸಂಗ ಮಾಡುವವರು ಬಹುತೇಕ ಗ್ರಾಮೀಣ ಪ್ರದೇಶದ ಬಡವರ ಮಕ್ಕಳೇ ಆಗಿದ್ದಾರೆ. ಮೂಲಸೌಕರ್ಯವಿಲ್ಲದ ಕಾರಣ ವಿದ್ಯಾರ್ಥಿಗಳ ಓದಿಗೆ ಹಿನ್ನಡೆಯಾಗುತ್ತಿದೆ.

2010ರಲ್ಲಿ ತಾಲ್ಲೂಕಿನ ಅಂಬಳಿಯಲ್ಲಿ ವಸತಿ ಶಾಲೆ ಆರಂಭಗೊಂಡಿತು. ಆದರೆ, ಅಲ್ಲಿ ಮೂಲಸೌಕರ್ಯ ಇರದ ಕಾರಣ 2014ರಲ್ಲಿ ಅದನ್ನು ವಲ್ಲಭಾಪುರಕ್ಕೆ ಸ್ಥಳಾಂತರಿಸಲಾಯಿತು. ಊರು, ಕಟ್ಟಡ ಬದಲಾದರೂ ವಿದ್ಯಾರ್ಥಿಗಳಿಗೆ ಸೌಕರ್ಯಗಳು ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.