ಸಂಡೂರು: ತಾಲ್ಲೂಕಿನ ತೋರಣಗಲ್ಲು ಹೋಬಳಿಯ ಮಾಳಾಪುರ ಗ್ರಾಮದಲ್ಲಿ ಜಮೀನಿನ ವಿಚಾರಕ್ಕೆ ಗಲಾಟೆ ನಡೆದು ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮಾಳಾಪುರ ನಿವಾಸಿ ದೊಡ್ಡಕಾಶಣ್ಣ(46) ಮೃತ ವ್ಯಕ್ತಿ.
ದೂರುದಾರ ಸಣ್ಣಕಾಶಣ್ಣ, ಹೊನ್ನುರಸ್ವಾಮಿ, ರಾಮುಲು ಎಂಬುವವರು ಮಾಳಾಪುರ ಗ್ರಾಮದ ಶ್ಯಾವಿ ಗಂಗಾಧರ ಎಂಬುವವರ ಜಮೀನನ್ನು ಖರೀದಿಸಿ ಜಂಟಿಯಾಗಿ ನೋಂದಾವಣೆ ಮಾಡಿಸಿ ಪಹಣಿಗಾಗಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಪಕ್ಕದ ಜಮೀನಿನ ಮಾಲೀಕ ಹನುಮೇಶ್ ಪಹಣಿಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಈ ವಿಷಯವಾಗಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದರಿಂದ ರಾಜಿಗಾಗಿ ಗ್ರಾಮದ ಅಗಸೆಯಲ್ಲಿ ಪಂಚಾಯಿತಿ ಮಾಡಿದ್ದಾರೆ. ಹನುಮೇಶ್ ಸಹಚರರು ಪಂಚಾಯಿತಿ ಮಾಡುವುದು ಬೇಡವೆಂದು ಹೊರ ನಡೆದು ದೂರುದಾರ ಸಣ್ಣಕಾಶಣ್ಣ ಅವರ ಗುಂಪಿನೊಂದಿಗೆ ಗಲಾಟೆ ನಡೆಸುವ ಸಮಯದಲ್ಲಿ ದೊಡ್ಡಕಾಶಣ್ಣ ಅವರಿಗೆ ಕಲ್ಲಿನಿಂದ ಎದೆ, ಮೈಗೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗಲಾಟೆ ಬಳಿಕ ಮನೆಗೆ ತೆರಳಿದ ದೊಡ್ಡಕಾಶಣ್ಣ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಬಳ್ಳಾರಿಯ ವಿಮ್ಸ್‌ಗೆ ಕರೆದೊಯ್ಯಲಾಯಿತು. ಆದರೆ, ಅವರು ಮಾರ್ಗ ಮಧ್ಯದಲ್ಲೇ ಮೃತಪಟ್ಟಿರುವುದಾಗಿ ವಿಮ್ಸ್ ವೈದ್ಯರು ತಿಳಿಸಿದ್ದಾರೆ.
ತನ್ನ ಅಣ್ಣನ ಸಾವಿಗೆ ಹೊನ್ನುರಸ್ವಾಮಿ, ಹನುಮೇಶ್, ವೀರೇಶ್ ಅವರೇ ಕಾರಣ ಎಂದು ಸೋದರ ಸಣ್ಣಕಾಶಣ್ಣ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.