ಹೂವಿನಹಡಗಲಿ: ಇಲ್ಲಿ ಆಸ್ತಿ ಹೊಂದಿ ವಿದೇಶದಲ್ಲಿ ನೆಲೆಸಿರುವವರ ಹೆಸರಿನಲ್ಲಿ ನಕಲಿ ದಾಖಲಿ ಸೃಷ್ಟಿಸಿ ತಾಲ್ಲೂಕಿನ ಕೊಯಿಲಾರಗಟ್ಟಿ ಗ್ರಾಮದ 68.17 ಎಕರೆ ಜಮೀನನ್ನು ನೋಂದಣಿ ಮಾಡಿಸಿ, ಮೂಲ ಪಟ್ಟಾದಾರರಿಗೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ.
ಆರೋಪಿಗಳಾದ ಬಳ್ಳಾರಿಯ ಕೆ. ಮೋಹನ್, ಬಾದನಹಟ್ಟಿಯ ಟಿ.ರಂಜಿತ್ ಕುಮಾರ್, ಸಿರುಗುಪ್ಪದ ರಾವಿ ತಿರುಮಲೇಶ, ಬಳ್ಳಾರಿಯ ಎಸ್.ವಿಜಯಕುಮಾರ್ ಹಾಗೂ ಹೂವಿನಹಡಗಲಿ ತಾಲ್ಲೂಕು ರಾಜವಾಳದ ಜಾಸ್ತಿ ಶ್ರೀನಿವಾಸರೆಡ್ಡಿ, ಪಟ್ಟಣವಾಸಿ ಲಲಿತಕುಮಾರ್ ಜೈನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ.
ಪ್ರಕರಣ ವಿವರ: ಸದ್ಯ ದುಬೈನಲ್ಲಿರುವ ಬೆಂಗಳೂರು ಮೂಲದ ಥಾಮಸ್ ವಿಜಯನ್, ಅಮೆರಿಕದಲ್ಲಿರುವ ರಾಜನ್ ಥಾಮಸ್ ಸಹೋದರರು ಈ ಹಿಂದೆ ತಾಲ್ಲೂಕಿನ ಕೊಯಿಲಾರಗಟ್ಟಿಯಲ್ಲಿ 97 ಎಕರೆ ಜಮೀನು ಖರೀದಿಸಿ, ಅದರ ಮಾಲೀಕತ್ವ ಹೊಂದಿದ್ದರು. ಇವರ ಹೆಸರಿನಲ್ಲಿ ಚುನಾವಣಾ ಗುರುತಿನ ಚೀಟಿ ಮತ್ತು ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ಪತ್ರದ ನಕಲಿ ದಾಖಲೆಗಳನ್ನು ಸೃಷ್ಟಿಸಿ, ₹ 2 ಕೋಟಿ ಮೌಲ್ಯದ 68.17 ಎಕರೆ ಜಮೀನನ್ನು ಆರೋಪಿಗಳು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ನಂತರ ನಕಲಿ ಜಿಪಿಎ ಪತ್ರ ಆಧಾರದಲ್ಲಿ ಇತರರಿಗೂ ಜಮೀನು ಮಾರಾಟ ಮಾಡಿ ವಂಚಿಸಿದ್ದಾರೆ.
ವಿದೇಶದಲ್ಲಿರುವ ಥಾಮಸ್ ಸಹೋದರರ ವ್ಯವಸ್ಥಾಪಕ ಬೆಂಗಳೂರಿನ ಬಿಜು ಚಾಕೋ ಎಂಬುವವರು ಕಳೆದ ಮೇ ತಿಂಗಳಲ್ಲಿ ತಮ್ಮ ಮಾಲೀಕರ ಜಮೀನು ವೀಕ್ಷಣೆಗಾಗಿ ಕೊಯಿಲಾರಗಟ್ಟಿ ಗ್ರಾಮಕ್ಕೆ ಬಂದಾಗ ವಂಚನೆ ನಡೆದಿರುವುದು ಗೊತ್ತಾಗಿದೆ. ನಂತರ ಅವರು ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ತನಿಖೆ ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.