
ಬಳ್ಳಾರಿ: ಜಿಲ್ಲೆಯಲ್ಲಿ ಭೂ-ಒಡೆತನ ಯೋಜನೆಯಡಿ ವಿತರಣೆ ಮಾಡಿದ ಭೂಮಿಯನ್ನು ಫಲಾನುಭವಿಗಳು ಸದುಪಯೋಗಪಡಿಕೊಳ್ಳುತ್ತಿದ್ದಾರೋ ಇಲ್ಲವೋ ಎಂಬುದರ ವಾಸ್ತವಂಶ ತಿಳಿಯಲು ಅಧಿಕಾರಿಗಳ ಸಮತಿ ರಚನೆ ಮಾಡಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಇತ್ತೀಚೆಗೆ ಆದೇಶಿಸಿದ್ದಾರೆ.
ಜಿಲ್ಲೆಯಲ್ಲಿ ಯೋಜನೆಯ ಅನುಷ್ಠಾನ ಸೂಕ್ತ ರೀತಿ ಆಗಿಲ್ಲ, ಪ್ರಕ್ರಿಯೆಗಳಲ್ಲಿ ಅಕ್ರಮ ನುಸುಳಿದೆ, ಫಲಾನುಭವಿಗಳ ಆಯ್ಕೆ ಸರಿಯಾಗಿ ಆಗಿಲ್ಲ, ಭೂಮಿ ಸದುಪಯೋಗವಾಗಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಇನ್ನೊಂದೆಡೆ, ಭೂ ಒಡೆತನ ಯೋಜನೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರೂ ಕೆಡಿಪಿ ಸಭೆಯೊಂದರಲ್ಲಿ ವಿಷಯ ಪ್ರಸ್ತಾಪ ಮಾಡಿದ್ದರು. ವಿಶಾಲ ಉದ್ದೇಶದ ಯೋಜನೆಯನ್ನು ಕೇವಲ ಒಂದು ತಾಲೂಕು, ಪ್ರದೇಶಕ್ಕೆ ಸೀಮಿತಗೊಳಿಸಿ ಜಾರಿಗೊಳಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದಲ್ಲದರ ಹಿನ್ನೆಲೆಯಲ್ಲಿ, ಫಲಾನುಭವಿಗಳಿಗೆ ಹಂಚಿಕೆಯಾಗಿರುವ ಭೂಮಿಯ ಸ್ಥಿತಿಗತಿ ತಿಳಿಯಲು ಜಿಲ್ಲಾಧಿಕಾರಿ ಮುಂದಾಗಿದ್ದಾರೆ.
ಏನಿದೆ ಆದೇಶದಲ್ಲಿ: ‘ಕರ್ನಾಟಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮದ ವತಿಯಿಂದ ಬಳ್ಳಾರಿ ಜಿಲ್ಲೆಯಲ್ಲಿ ಜಾರಿಗೆ ತಂದಿರುವ ‘ಭೂ-ಒಡೆತನ’ ಯೋಜನೆಯ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯಲ್ಲಿ ಆಯ್ಕೆ ಮಾಡಲಾದ ಭೂರಹಿತ ಮಹಿಳಾ ಪಲಾಪೇಕ್ಷಿಗಳಿಗೆ ಭೂಮಿಯನ್ನು ವಿತರಣೆ ಮಾಡಿರುವ ಬಗ್ಗೆ ಹಾಗೂ ವಿತರಣೆ ಮಾಡಿದ ಭೂಮಿಯನ್ನು ಯಾವ ಉದ್ದೇಶಕ್ಕಾಗಿ ವಿತರಣೆ ಮಾಡಲಾಗಿದೆಯೋ ಆದೇ ಉದ್ದೇಶಕ್ಕಾಗಿ ಬಳಸುತ್ತಿರುವ ಬಗ್ಗೆ ಹಾಗೂ ಭೂಮಿಯಲ್ಲಿ ಬೆಳೆಯುತ್ತಿರುವ ಬೆಳೆಯ ಕುರಿತು ವಾಸ್ತವಂಶ ಪರಿಶೀಲಿಸಿ, ಜಿ.ಪಿ.ಎಸ್. ಛಾಯಚಿತ್ರಗಳೊಂದಿಗೆ ನೈಜತಾ ವರದಿಯನ್ನು ಸಲ್ಲಿಸಲು ತಂಡವನ್ನು ರಚಿಸಿ ಆದೇಶಿಸಲಾಗಿದೆ’ ಎಂದು ಉಲ್ಲೇಖಿಸಲಾಗಿದೆ.
ತನಿಖಾ ಸಮಿತಿಯಲ್ಲಿ ಬಳ್ಳಾರಿ ಉಪವಿಭಾಗಾಧಿಕಾರಿ, ಬಳ್ಳಾರಿ, ಕಂಪ್ಲಿ, ಸಿರುಗುಪ್ಪ ತಾಲೂಕುಗಳ ತಹಶೀಲ್ದಾರರು, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ಆಹಾರ ಇಲಾಖೆ ಜಂಟಿ ನಿರ್ದೇಶಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರನ್ನು ಸದಸ್ಯರನ್ನಾಗಿಸಲಾಗಿದೆ.
ಪ್ರತಿಯೊಬ್ಬ ಅಧಿಕಾರಿಗೂ ನಿರ್ದಿಷ್ಟ ಗ್ರಾಮದ, ನಿರ್ದಿಷ್ಟ ಭೂಮಿಯ ಸರ್ವೆ ಸಂಖ್ಯೆಗಳನ್ನು ನೀಡಲಾಗಿದ್ದು, ಅಧಿಕಾರಿಗಳು ಜಮೀನಿನ ಸ್ಥಿತಿಗತಿ ಅಧ್ಯಯನ ನಡೆಸಬೇಕಿದೆ. 10 ದಿನಗಳ ಒಳಗಾಗಿ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ತನಿಖೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಸಂಬಂಧಿಸಿದ ಭೂಮಿಯ ದಾಖಲೆಗಳನ್ನು ಈಗಾಗಲೇ ತರಿಸಿಕೊಂಡು, ಪರಿಶೀಲನೆ ನಡೆಸಿದ್ದಾರೆ. ಕೆಲವರು ಜಾಗದ ಪರಿಶೀಲನೆಯನ್ನೂ ಮುಗಿಸಿದ್ದಾರೆ ಎಂದು ಗೊತ್ತಾಗಿದೆ.
ಕರ್ನಾಟಕ ಪರಿಶಿಷ್ಟ ಜಾತಿ/ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮದ 'ಭೂ-ಒಡೆತನ' ಯೋಜನೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಭೂ-ರಹಿತ ಕೃಷಿ ಮಹಿಳಾ ಕಾರ್ಮಿಕರಿಗೆ ಭೂಮಿ ಖರೀದಿಸಲು ಸಹಾಯ ಮಾಡುವ ಯೋಜನೆ ಇದಾಗಿದೆ. ಅರ್ಜಿದಾರರು ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದವರಾಗಿರಬೇಕು, ಭೂಮಿ ಇಲ್ಲದವರಾಗಿರಬೇಕು.
ಭೂ ಒಡೆತನ ಯೋಜನೆಯಲ್ಲಾಗಿರುವ ಅಕ್ರಮಗಳ ಬಗ್ಗೆ ದೂರುಗಳು ಬಂದಿವೆ. ಇದರ ನೈಜತೆ ಪರಿಶೀಲಿಸುವ ಸಲುವಾಗಿಯೇ ತನಿಖಾ ತಂಡ ರಚನೆ ಮಾಡಲಾಗಿದೆ. ಭೂಮಿ ನಿಗದಿತ ಉದ್ದೇಶಕ್ಕೆ ಬಳಕೆಯಾಗುತ್ತಿಲ್ಲವಾದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ.ನಾಗೇಂದ್ರ ಪ್ರಸಾದ್ ಕೆ. ಜಿಲ್ಲಾಧಿಕಾರಿ ಬಳ್ಳಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.