ADVERTISEMENT

ಬಳ್ಳಾರಿ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 15:51 IST
Last Updated 5 ಆಗಸ್ಟ್ 2022, 15:51 IST
   

ಬಳ್ಳಾರಿ: ಐತಿಹಾಸಿಕ ಬಳ್ಳಾರಿ ಗುಡ್ಡದ ಮೇಲೆ ಶುಕ್ರವಾರ ಸಂಜೆ ಚಿರತೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಸಂಜೆಯ ಮಬ್ಬು ಬೆಳಕಿನಲ್ಲಿ ಚಿರತೆ ಕುಳಿತಿರುವುದನ್ನು ಅನೇಕರು ಗಮನಿಸಿದ್ದಾರೆ. ಕೆಲವರು ದೂರದಿಂದ ಚಿತ್ರೀಕರಿಸಿರುವ ವಿಡಿಯೋದಲ್ಲಿ ಇದು ಚಿಕ್ಕದಾಗಿ ಕಾಣುತ್ತಿದೆ.

ಗುಡ್ಡದ ಮೇಲೆ ಚಿರತೆ ಪ್ರತ್ಯಕ್ಷವಾಗಿರುವುದನ್ನು ಡಿಎಫ್‌ಒ ಸಂದೀಪ್‌ ಸೂರ್ಯವಂಶಿ ಖಚಿತಪಡಿಸಿದ್ದಾರೆ. ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆರ್‌ಎಫ್‌ಒ ಮಂಜುನಾಥ್‌ ಅವರ ನೇತೃತ್ವದ ಅರಣ್ಯ ಅಧಿಕಾರಿಗಳ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ ಎಂದು ಅವರು ತಿಳಿಸಿದರು.

ಚಿರತೆ ಸೆರೆಗೆ ಬೋನ್‌ ಇಡಲಾಗಿದೆ. ಅದರ ಚಲನವಲನದ ಮೇಲೆ ನಿಗಾ ಇಡಲು ’ನೈಟ್‌ ಕ್ಯಾಮೆರ‘ಗಳನ್ನು ತರಿಸಲಾಗಿದೆ. ಶನಿವಾರ ’ಡ್ರೋಣ್‌ ಕ್ಯಾಮೆರ‘ದ ಮೂಲಕ ಚಿರತೆ ಇರುವ ಸ್ಥಳ ಪತ್ತೆ ಮಾಡಿ ಅರವಳಿಕೆ ಇಂಜಕ್ಷನ್‌ ಹಾಕಿ ಸೆರೆ ಹಿಡಿಯಲಾಗುವುದು ಎಂದು ಸೂರ್ಯವಂಶಿ ವಿವರಿಸಿದರು.

ADVERTISEMENT

ಕಾರ್ಯಾಚರಣೆಗೆ ಜಿಲ್ಲಾ ಪೊಲೀಸರ ನೆರವು ಪಡೆಯಲಾಗುತ್ತಿದೆ. ಎಸ್‌.ಪಿ ಸೈದುಲು ಅಡಾವತ್‌ ಅವರಿಗೂ ಮಾತನಾಡಲಾಗಿದೆ. ರಾತ್ರಿ ಮನೆಯಿಂದ ಹೊರಗೆ ಬರದಂತೆ ಸ್ಥಳೀಯರಿಗೆ ಹೇಳಲಾಗುತ್ತಿದೆ ಎಂದರು.

ಜನ ಹೆಚ್ಚು ಜಮಾಯಿಸಿ ಗದ್ದಲ ಮಾಡಿದರೆ ಚಿರತೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ.. ಬಳ್ಳಾರಿ ಸುತ್ತಮುತ್ತ ಗುಡ್ಡಗಳು ಹೆಚ್ಚಿದ್ದು, ಅದು ಎಲ್ಲಿಂದಲಾದರೂ ಬಂದಿರಬಹುದು ಎಂದೂ ಡಿಎಫ್‌ಒ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.