ಸಿಡಿಲು (ಸಾಂದರ್ಭಿಕ ಚಿತ್ರ )
ಬಳ್ಳಾರಿ: ಮುಂಗಾರು ಪೂರ್ವ ಮಳೆಯ ಜತೆಗೆ, ಗುಡುಗು–ಸಿಡಿಲೂ ಅಬ್ಬರಿಸುತ್ತಿದೆ. ರಾಜ್ಯದಲ್ಲಿ ಸಿಡಿಲಿಗೆ ಕಳೆದ 5 ವರ್ಷಗಳಲ್ಲಿ ಒಟ್ಟು 454 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, 2022ರಲ್ಲಿ ಅತಿ ಹೆಚ್ಚು 113 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಬಹುತೇಕ ಮಂದಿ ಕುರಿಗಾಹಿಗಳು, ಕೃಷಿಕರು ಮತ್ತು ಕೂಲಿಕಾರ್ಮಿಕರು. ಮಳೆ ಸುರಿಯುವಾಗ ಮರಗಳಡಿ ನಿಂತಾಗ, ಕುರಿಗಳನ್ನು ಮೇಯಿಸುವಾಗ ಮತ್ತು ಕೃಷಿ ಕೆಲಸದಲ್ಲಿ ತೊಡಗಿದ್ದ ವೇಳೆ ಸಿಡಿಲು ಬಡಿದಿದೆ.
ರಾಜ್ಯದಾದ್ಯಂತ ಗುಡುಗು, ಸಿಡಿಲು ಸಹಿತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಿಡಿಲಿಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಅದನ್ನು ಪಾಲಿಸಲು ಕೋರಿದೆ.
ಸಿಡಿಲಿನಿಂದ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರವು 48 ಗಂಟೆ ಅವಧಿಯಲ್ಲಿ ₹5 ಲಕ್ಷ ಪರಿಹಾರ ನೀಡುತ್ತದೆ. ಸಿಡಿಲಿನಿಂದ ಮೃತಪಟ್ಟವರ ಮರಣೋತ್ತರ ವರದಿ, ಸ್ಥಳ ಮಹಜರ್, ಕಂದಾಯ ಇಲಾಖೆಯ ಕೆಳ ಹಂತದ ಅಧಿಕಾರಿಗಳ ವರದಿ ಆಧರಿಸಿ ಜಿಲ್ಲಾ ಉಪವಿಭಾಗಾಧಿಕಾರಿ ತ್ವರಿತಗತಿಯಲ್ಲಿ ಪರಿಹಾರಕ್ಕೆ ಆದೇಶಿಸುತ್ತಾರೆ’ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜಿಲ್ಲಾ ಹಂತದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಯಲು, ಎತ್ತರದ ಪ್ರದೇಶದ ಬದಲು ತಗ್ಗು ಪ್ರದೇಶಕ್ಕೆ ತೆರಳಬೇಕು.
ಬಯಲಲ್ಲಿದ್ದರೆ, ಮೊಣಕಾಲುಗಳ ನಡುವೆ ತಲೆ ಹುದುಗಿಸಿಕೊಳ್ಳಬೇಕು.
ಮರಗಳ ಕೆಳಗೆ ಯಾವುದೇ ಕಾರಣಕ್ಕೂ ನಿಲ್ಲಬಾರದು.
ಕುರಿಮಂದೆ, ಜಾನುವಾರು ಮಧ್ಯೆ ಕೂರಬೇಕು.
ಮಳೆ ವೇಳೆ ಕೆರೆ, ಕೊಳದಲ್ಲಿ ಈಜಬಾರದು.
ವಿದ್ಯುತ್ ಕಂಬ, ಟವರ್‌ಗಳ ಬಳಿ ನಿಲ್ಲಬಾರದು.
ವಿದ್ಯುತ್ ಉಪಕರಣಗಳ ಬಳಕೆಯಿಂದ ದೂರವಿರಬೇಕು.
(ಮಾಹಿತಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.