ಬಳ್ಳಾರಿ: 2024ರ ಸಂಗಂ ಸಾಹಿತ್ಯ ಪುರಸ್ಕಾರಕ್ಕೆ ಚೀಮನಹಳ್ಳಿ ರಮೇಶಬಾಬು ಅವರ ‘ಮಂಪರು’ ಕಾದಂಬರಿ ಭಾಜನವಾಗಿದೆ ಎಂದು ಲೇಖಕ ಜಿ.ಪಿ ಬಸವರಾಜ ಘೋಷಿಸಿದರು.
ನಗರದ ಜ್ಞಾನಾಮೃತ ಕಾಲೇಜಿನಲ್ಲಿ ಶನಿವಾರ ಸಂಗಂ ಸಾಹಿತ್ಯ ಪುರಸ್ಕಾರ ಪ್ರದಾನ ನಡೆಯಿತು. ಪುರಸ್ಕಾರಕ್ಕೆ 73 ಕಾದಂಬರಿಗಳು ಬಂದಿದ್ದವು. ಈ ಪೈಕಿ, ತುಂಬಾಡಿ ರಾಮಯ್ಯ ಅವರ ‘ಜಾಲ್ಗಿರಿ’, ಇಂದ್ರಕುಮಾರ್ ಎಚ್.ಬಿ. ಅವರ ‘ಎತ್ತರ’, ಬೆಳಗಾವಿಯ ಲತಾಗುತ್ತಿ ಅವರ ‘ಚದುರಂಗ’ ಹಾಗೂ ಗುರುಪ್ರಸಾದ್ ಕಾಗಿನೆಲೆ ಅವರ ‘ಸತ್ಕುಲ ಪ್ರಸೂತರು’ ಕಾದಂಬರಿಗಳು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದವು.
ತೀರ್ಪುಗಾರರಾಗಿದ್ದ ತಾರಿಣಿ ಶುಭದಾಯಿನಿ, ಸಿರಾಜ್ ಅಹಮದ್, ವೆಂಕಟಗಿರಿ ದಳವಾಯಿ ತಂಡವು ‘ಮಂಪರು’ ಕಾದಂಬರಿಯನ್ನು ಪುರಸ್ಕಾರಕ್ಕೆ ಅಂತಿಮಗೊಳಿಸಿತು. ಪುರಸ್ಕಾರವು ₹25 ಸಾವಿರ ನಗದು ಬಹುಮಾನ ಒಳಗೊಂಡಿದೆ. ವಿದೇಶದಲ್ಲಿದ್ದ ಗುರುಪ್ರಸಾದ್ ಅವರನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ಕಾದಂಬರಿಕಾರರೂ ಸಮಾರಂಭದಲ್ಲಿ ಹಾಜರಿದ್ದರು.
‘ಸಂಗಂ ಸಾಹಿತ್ಯ ಪುರಸ್ಕಾರವು ಸಮಾಜದಲ್ಲಿ ಬದಲಾವಣೆಗೆ ನಾಂದಿ ಹಾಡಿದೆ’ ಎಂದು ಜಿ.ಪಿ. ಬಸವರಾಜ ಅಭಿಪ್ರಾಯಪಟ್ಟರು.
ಪ್ರಶಸ್ತಿ ಪುರಸ್ಕೃತ ಚೀಮನಹಳ್ಳಿ ರಮೇಶಬಾಬು ಮಾತನಾಡಿ, ‘ಸಂಗಂ ಟ್ರಸ್ಟ್ ಸಾಹಿತ್ಯಿಕವಾಗಿ ಮೌಲ್ಯಯುತ ಕಾರ್ಯ ಮಾಡುತ್ತಿದೆ. ಪ್ರಶಸ್ತಿ ಪಡೆದಿದ್ದಕ್ಕೆ ಖುಷಿಯಾಗಿದೆ’ ಎಂದು ಸಂತಸ ಹಂಚಿಕೊಂಡರು.
ಆಯ್ಕೆ ಪ್ರಕ್ರಿಯೆ ಕುರಿತು ಸಂಗಂ ಟ್ರಸ್ಟ್ ನ ಕಾರ್ಯದರ್ಶಿ ಶಿವಲಿಂಗಪ್ಪ ಕೆ ಹಂದಿಹಾಳ್ ವಿವರಣೆ ನೀಡಿದರು. ಸಂಗಂ ಟ್ರಸ್ಟ್ ಗೌರವಾಧ್ಯಕ್ಷ ಅರವಿಂದ ಪಟೇಲ್, ಬಳ್ಳಾರಿ ಸಂಗಂ ಟ್ರಸ್ಟ್ ಅಧ್ಯಕ್ಷ ಡಾ. ವೈ.ಸಿ. ಯೋಗಾನಂದ ರೆಡ್ಡಿ, ಮರ್ಚೇಡ್ ಟ್ರಸ್ಟ್ ಅಧ್ಯಕ್ಷ ಎಂ.ಜಿ. ಗೌಡ, ಹಿರಿಯ ಲೆಕ್ಕಪರಿಶೋಧಕ ಪನ್ನರಾಜ್, ಅಖಂಡ ಬಳ್ಳಾರಿ ಜಿಲ್ಲಾ ಕ.ಸಾ.ಪ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಕವಿ ವೀರೇಂದ್ರ ರಾವಿಹಾಳ್ ಇದ್ದರು.
‘ಕೇಂದ್ರೀಕರಣ: ಮಿಲಿಟರಿ ವ್ಯವಸ್ಥೆಗೆ ನಾಂದಿ’
‘ಪ್ರಜಾಪ್ರಭುತ್ವದ ಯಶಸ್ಸಿಗೆ ಬರಹಾಗಾರ ಸ್ಪಂದಿಸಬೇಕು. ಕೇಂದ್ರೀಕರಣ ವ್ಯವಸ್ಥೆಯಿಂದ ವಿಕೇಂದ್ರೀಕರಣದೆಡೆಗೆ ಚಲಿಸಬೇಕು. ಕೇಂದ್ರೀಕರಣವು ಮಿಲಿಟರಿ ವ್ಯವಸ್ಥೆಗೆ ನಾಂದಿ ಹಾಡುತ್ತದೆ. ವಿವಿಧ ಭಾಷೆ ಸಾಂಸ್ಕೃತಿಕ ವೈವಿಧ್ಯತೆ ರಕ್ಷಣೆ ಅಗತ್ಯವಾಗಿದೆ’ ಎಂದು ಸಾಹಿತಿ ಜಿ.ಪಿ. ಬಸವರಾಜ ತಿಳಿಸಿದರು. ‘ಕನ್ನಡ ಸಾಹಿತ್ಯದ ಸ್ವರೂಪ ಹಾಗೂ ಸಂವೇದನೆ’ ಕುರಿತ ಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದರು. ‘ಒಂದೇ ಭಾರತ ಒಂದೇ ಧರ್ಮ ಒಂದೇ ಭಾಷೆ ಎನ್ನುವುದು ಹಿಟ್ಲರ್ ಸಂಸ್ಕೃತಿ. ಇದು ಭಾರತಕ್ಕೆ ತರವಲ್ಲ. ಇದರಿಂದ ಅನೇಕ ಭಾಷೆ ಸಂಸ್ಕೃತಿ ಸಮುದಾಯ ನಾಶವಾಗುತ್ತದೆ’ ಎಂದರು. ‘ಕೇಂದ್ರ ಸಾಹಿತ್ಯ ಅಕಾಡೆಮಿ ಶಾಖೆಗಳು ಎಲ್ಲಾ ರಾಜ್ಯಗಳಲ್ಲಿದ್ದರೆ ಸಾಹಿತ್ಯ ಮತ್ತು ಸಾಹಿತಿಗಳಿಗೆ ಬೆಂಬಲವಾಗಿ ನಿಲ್ಲಲು ಸಾಧ್ಯ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತದೆ. ಇದರಿಂದ ಸಾಹಿತ್ಯಕ್ಕೆ ಏನು ಲಾಭವಾಯಿತು? ಇದನ್ನು ಕೈಬಿಟ್ಟು ಪುಸ್ತಕ ಮೇಳ ಮಾಡಿ ಬರಹಗಾರರ ಪ್ರೋತ್ಸಾಹಿಸಬೇಕು’ ಎಂದು ಆಗ್ರಹಿಸಿದರು.
ಕವನ ವಾಚನವೂ ಈಗ ಅಪರಾಧ! ‘
ಸಮಕಾಲೀನ ಕನ್ನಡ ಕವಿತೆ ಮತ್ತು ನಾನು’ ಕವಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಾಹಿತ್ಯ ಪುರಸ್ಕೃತ ಕವಯತ್ರಿ ಶೃತಿ ಬಿ.ಆರ್. ‘ಕವನ ವಾಚನವೂ ಇಂದಿನ ದಿನಗಳಲ್ಲಿ ಅಪರಾಧವಾಗಿದೆ. ಸ್ತ್ರಿ ಸ್ವಾತಂತ್ರ್ಯ ಹರಣ ಎಲ್ಲಾ ಕಾಲಘಟದಲ್ಲಿ ಸಂಭವಿಸುತ್ತಲೇ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಮುಕ್ತ ಸಂವಾದ
ಸಮಾರಂಭದಲ್ಲಿ ನಾಲ್ಕು ಕವಿಗೋಷ್ಠಿಗಳು ನಡೆದವು. ಯುವ ಸಾಹಿತಿಗಳು ಸಂವಾದ ನಡೆಸಿದರು. ಚರ್ಚೆಯಲ್ಲಿ ಸ್ತ್ರೀವಾದ ಮುಸ್ಲಿಂ ಕಥೆಗಾರ್ತಿಯರ ಒತ್ತಡ ಮಾಸ್ತಿ ಕಾರಂತ ಲಂಕೇಶರಿಂದ ಹಿಡಿದು ಇಂದಿನ ಯುವ ಪೀಳಿಗೆ ಮೇಲೆ ಕಥಾ ಪರಂಪರೆ ಹೇಗೆ ಪ್ರಭಾವ ಬೀರಿದೆ ಎಂಬುದರ ಬಗ್ಗೆ ಮುಕ್ತ ಸಂವಾದ ನಡೆಯಿತು. ಕವಿ ವಿಶಾಲ್ ಮ್ಯಾಸರ ಅವರು ‘ಯುದ್ಧ ವಿರೋಧಿ ಕವಿತೆ’ಯೊಂದಿಗೆ ಕವಿಗೋಷ್ಠಿಗೆ ನಾಂದಿ ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.