ADVERTISEMENT

ಮೈಲಾರ ಗ್ರಾಮದ ಪಶು ಆಸ್ಪತ್ರೆಯಲ್ಲಿ ಔಷಧಿ ಕೊರತೆ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 2:29 IST
Last Updated 24 ಡಿಸೆಂಬರ್ 2025, 2:29 IST
ಹೂವಿನಹಡಗಲಿ ತಾಲ್ಲೂಕು ಮೈಲಾರ ಪಶು ಆಸ್ಪತ್ರೆ ಮುಂದೆ ಕುರಿಗಾಹಿಗಳು ಪ್ರತಿಭಟಿಸಿದರು
ಹೂವಿನಹಡಗಲಿ ತಾಲ್ಲೂಕು ಮೈಲಾರ ಪಶು ಆಸ್ಪತ್ರೆ ಮುಂದೆ ಕುರಿಗಾಹಿಗಳು ಪ್ರತಿಭಟಿಸಿದರು   

ಹೂವಿನಹಡಗಲಿ: ತಾಲ್ಲೂಕಿನ ಮೈಲಾರ ಗ್ರಾಮದ ಪಶು ಚಿಕಿತ್ಸಾಲಯದಲ್ಲಿ ಜಾನುವಾರುಗಳಿಗೆ ಯಾವುದೇ ಔಷಧಿ ದೊರೆಯುತ್ತಿಲ್ಲ. ಎಲ್ಲವನ್ನು ಹೊರಗಡೆಯಿಂದ ಖರೀದಿಸಿ ತಂದು ಚಿಕಿತ್ಸೆ ಪಡೆಯುವಂತಾಗಿದೆ ಎಂದು ಕುರಿಗಾಹಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಕುರಿಗಾಹಿಗಳು ಮಂಗಳವಾರ ಆಸ್ಪತ್ರೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ‘ವರ್ಷದಿಂದ ಕುರಿಗಳಿಗೆ ಯಾವುದೇ ಲಸಿಕೆ ನೀಡಿಲ್ಲ. ಜಂತು ನಿವಾರಣೆ ಔಷಧಿ ನೀಡಿಲ್ಲ. ಔಷಧಿಗಳನ್ನು ಹೊರಗಡೆಯಿಂದ ತರಲು ಹೇಳುತ್ತೀರಿ. ಇಲ್ಲಿ ಪಶು ಆಸ್ಪತ್ರೆ ಇದ್ದೂ ಇಲ್ಲದಂತಾಗಿದೆ. ಮೃತ ಕುರಿ, ಮೇಕೆಗಳಿಗೂ ಪರಿಹಾರ ನೀಡಿಲ್ಲ’ ಎಂದು ರಮೇಶ ಮಾಲ್ದಾರ್ ಕಿಡಿಕಾರಿದರು.

ಪಶು ವೈದ್ಯ ಡಾ. ಸುನೀಲ್ ರಾಠೋಡ್ ಪ್ರತಿಕ್ರಿಯಿಸಿ, ನಾಲ್ಕು ವರ್ಷದಿಂದ ಔಷಧಿ ಬೇಡಿಕೆ ಸಲ್ಲಿಸಿದರೂ ಪೂರೈಕೆಯಾಗಿಲ್ಲ. ಹಾಗಾಗಿ ಈ ಬಾರಿ ಬೇಡಿಕೆ ಸಲ್ಲಿಸಿಲ್ಲ ಎಂದರು. ಆಗ ಕುರಿಗಾಹಿಗಳು, ಪಶು ವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ. ನಾರಾಯಣ ಬಣಕಾರ ಅವರಿಗೆ ಕರೆ ಮಾಡಿದಾಗ, ‘ಎಲ್ಲ ಚಿಕಿತ್ಸಾಲಯಗಳಿಗೂ ಜಾನುವಾರು ಸಂಖ್ಯೆ ಆಧರಿಸಿ ಲಸಿಕೆ, ಔಷಧಿ ಪೂರೈಕೆಯಾಗಿದೆ’ ಎಂದಿದ್ದಾರೆ.

ADVERTISEMENT

ಇಲ್ಲಿಗೆ ಕಳಿಸಿದ ಔಷಧಿ ಎಲ್ಲಿ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕುರಿಗಾಹಿಗಳು, ಸಮರ್ಪಕ ಔಷಧಿ, ಲಸಿಕೆ ದಾಸ್ತಾನು ಮಾಡದಿದ್ದರೆ ಆಸ್ಪತ್ರೆಗೆ ಬೀಗ ಹಾಕಿ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಕೆ.ನಿಂಗಪ್ಪ, ಎಂ.ನಿಂಗಪ್ಪ, ಎಂ.ಮಂಜಪ್ಪ, ಎ.ಸುರೇಶ, ಈಟಿ ಚಂದ್ರಪ್ಪ, ಪಿ.ಯಲ್ಲಪ್ಪ ಪರಮೇಶಣ್ಣ, ಪಕ್ಕೀರಪ್ಪ ಶಿವಲಿಂಗಪ್ಪ, ಕೋಟೆಪ್ಪ, ರಮೇಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.