ADVERTISEMENT

ಮತದಾರರ ಮನೆ ಬಾಗಿಲಿಗೆ ತಲುಪುತ್ತಿವೆ ಕರಪತ್ರಗಳು; ಮತದಾನಕ್ಕೆ ದೇಶಭಕ್ತಿಯ ಲೇಪನ!

ಕೆ.ನರಸಿಂಹ ಮೂರ್ತಿ
Published 18 ಮಾರ್ಚ್ 2019, 20:19 IST
Last Updated 18 ಮಾರ್ಚ್ 2019, 20:19 IST
ಕರಪತ್ರದ ಮುಖಪುಟ
ಕರಪತ್ರದ ಮುಖಪುಟ   

ಬಳ್ಳಾರಿ: ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಅಧಿಸೂಚನೆ ಪ್ರಕಟವಾಗುವ ಹೊತ್ತಿಗೆ, ಮತದಾನಕ್ಕೆ ದೇಶಭಕ್ತಿಯ ಲೇಪನ ಮಾಡಿರುವ ವಿವರಣೆಯುಳ್ಳ ಲಕ್ಷಾಂತರ ಕರಪತ್ರಗಳನ್ನು ಆರ್‌ಎಸ್‌ಎಸ್ ಕಾರ್ಯಕರ್ತರು ಮತದಾರರ ಮನೆಬಾಗಿಲಿಗೆ ತಲುಪಿಸುತ್ತಿದ್ದಾರೆ.

ಜೊತೆಗೆ, ‘ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ಮತ ಹಾಕಿ’ ಎಂಬ ಮನವಿಯನ್ನೂ ಮಾಡುತ್ತಿದ್ದಾರೆ. ಆದರೆ ಕರಪತ್ರದಲ್ಲಿ ಎಲ್ಲಿಯೂ ಆರ್‌ಎಸ್‌ಎಸ್ ಹೆಸರಾಗಲೀ ಬಿಜೆಪಿ ಚಿಹ್ನೆಯಾಗಲೀ ಇಲ್ಲ.

ಈ ಕುರಿತು ‘ಪ್ರಜಾವಾಣಿ’ಗೆ ಸೋಮವಾರ ಮಾಹಿತಿ ನೀಡಿದ ಸಂಘಟನೆಯ ಜಿಲ್ಲಾ ಪ್ರಚಾರ ಸಂಚಾಲಕ ನಾಗರಾಜ್‌, ‘ಮಾರ್ಚ್‌ 12ರಿಂದ ಆರಂಭವಾದ ಅಭಿಯಾನ 24ರವರೆಗೆ ರಾಜ್ಯದೆಲ್ಲೆಡೆ ನಡೆಯಲಿದೆ. ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ತಂಡಗಳನ್ನು ರಚಿಸಿದ್ದು, ಪಕ್ಷಾತೀತವಾಗಿ ಎಲ್ಲರಿಗೂ ಕರಪತ್ರ ಹಂಚಲಾಗುತ್ತಿದೆ. ಮೋದಿ ಮತ್ತೆ ಪ್ರಧಾನಿಯಾಗಲು ಸಹಕರಿಸಿ ಎಂಬ ಮನವಿಯನ್ನೂ ಮಾಡುತ್ತಿದ್ದೇವೆ’ ಎಂದರು.

ADVERTISEMENT

‘ಭಾರತ ಜಾಗೃತಿ ಅಭಿಯಾನ’ದ ಶೀರ್ಷಿಕೆಯುಳ್ಳ ನಾಲ್ಕು ಪುಟದ ಕರಪತ್ರದ ಮುಖಪುಟದಲ್ಲಿ ‘ಮತದಾನದಿಂದ ಅಭಿವ್ಯಕ್ತಗೊಳಿಸಿ ದೇಶಭಕ್ತಿಯನ್ನು’ ಎಂಬ ಘೋಷಣೆಯಿದೆ. ದೇಶಭಕ್ತ ಹೃದಯಗಳನ್ನು ಬೆಸೆಯುವ ಪ್ರಾಮಾಣಿಕ ಪ್ರಯತ್ನ, ಭಾರತೀಯ ಸಂಸ್ಕೃತಿ, ಸಮಾಜಗಳ ಸುರಕ್ಷೆಗಾಗಿ ಜನ ಜಾಗರಣ, ಮತದಾನದ ಮಹತ್ವ ಕುರಿತು ಯುವ ಮನಗಳೊಡನೆ ಸ್ನೇಹಭರಿತ ಸಂವಾದ’ ಎಂಬ ವಾಕ್ಯಗಳಿವೆ.

‘ಭಯೋತ್ಪಾದಕರು, ನಕ್ಸಲರು, ಲೂಟಿಕೋರರು ಚುನಾವಣೆಯನ್ನು ಒಂದಾಗಿ ಎದುರಿಸಲು ಹೊರಟಿದ್ದಾರೆ. ಮಠ–ಮಂದಿರಗಳು ಹಾಗೂ ಸಾಧು–ಸಂತರ ಕುರಿತಾಗಿ ನಮಗಿರುವ ಶ್ರದ್ಧೆ–ಭಕ್ತಿಗಳನ್ನೇ ನಾಶಗೊಳಿಸುವ ಹುನ್ನಾರ ನಡೆದಿದೆ. ಈ ಕುತಂತ್ರಗಳಿಗೆ ವೈಚಾರಿಕತೆಯ ಲೇಪವನ್ನು ಹಚ್ಚಿ ನಮ್ಮ ಹಾದಿ ತಪ್ಪಿಸುವ ಶಕ್ತಿಗಳು ನಮ್ಮ ನಡುವೆಯೇ ಸೇರಿಕೊಂಡಿವೆ. ಭಾರತೀಯ ಸಂಸ್ಕೃತಿಯ ರಕ್ಷಣೆ ಮತ್ತು ಪೋಷಣೆಗಾಗಿ ಸಮಾಜದ ಸಜ್ಜನಶಕ್ತಿಯು ಈ ಬಾರಿಯ ಚುನಾವಣೆಯಲ್ಲಿ ಒಗ್ಗೂಡಬೇಕಾದ್ದು ಅವಶ್ಯಕ’ ಎಂದು ಕರಪತ್ರದಲ್ಲಿದೆ.

‘ನಾವು ಚಲಾಯಿಸುವ ಒಂದು ಮತ ಎಂದರೆ, ನಕ್ಸಲ್‌ವಾದ, ಭಯೋತ್ಪಾದನೆಯನ್ನು ಕೊನೆಗಾಣಿಸುವ ಸಂಕಲ್ಪ. ಜಾತೀಯತೆ, ಕುಟುಂಬ ರಾಜಕಾರಣಕ್ಕ ಹೇಳುವ ವಿದಾಯ; ಅಕ್ರಮ ವಲಸೆ, ಭ್ರಷ್ಟಾಚಾರಗಳಿಗೆ ಪೂರ್ಣವಿರಾಮ; ಸೈನ್ಯವನ್ನು ಬಲಗೊಳಿಸುವ ಕರ್ತವ್ಯ, ಪ್ರಜಾಪ್ರಭುತ್ವಕ್ಕೆ ಸಲ್ಲಿಸಬೇಕಾದ ಗೌರವ’ ಎಂದು ದಪ್ಪ ಅಕ್ಷರಗಳಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.