ADVERTISEMENT

ಹಳೆಯ ಹಾಡುಗಳಲ್ಲಿ ದಾರಿ ತೋರುವ ಸಾಹಿತ್ಯ....

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 15:39 IST
Last Updated 22 ಅಕ್ಟೋಬರ್ 2022, 15:39 IST
ಆಫಾ ಎಂ ವೀವರ್‌ ಅಮೆರಿಕದ ಕವಿ ತಮ್ಮ ನೈಸರ್ಗಿಕ ಊರುಗೋಲನ್ನು ಹಿಡಿದಿರುವುದನ್ನು ಗಮನಿಸಿದ ಶಾಸಕ ಜಿ. ಸೋಮಶೇಖರ್ ರೆಡ್ಡಿ ಅದನ್ನು ತೋರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು
ಆಫಾ ಎಂ ವೀವರ್‌ ಅಮೆರಿಕದ ಕವಿ ತಮ್ಮ ನೈಸರ್ಗಿಕ ಊರುಗೋಲನ್ನು ಹಿಡಿದಿರುವುದನ್ನು ಗಮನಿಸಿದ ಶಾಸಕ ಜಿ. ಸೋಮಶೇಖರ್ ರೆಡ್ಡಿ ಅದನ್ನು ತೋರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು   

ಬಳ್ಳಾರಿ: ವಿಶ್ವದ ಮೂಲೆ ಮೂಲೆಗಳಿಂದ ಬಂದ ಕವಿಗಳ ಪಾದಗಳಿಗೆ ನನ್ನ ನಮಸ್ಕಾರಗಳು ಎನ್ನುತ್ತ ಶಾಸಕ ಜಿ. ಸೋಮಶೇಖರ್‌ ರೆಡ್ಡಿ ಅವರು ಎರಡನೇ ದಿನದ ಸಮಾರೋಪದಲ್ಲಿ ಮಾತು ಆರಂಭಿಸಿದರು.

ಬಳ್ಳಾರಿಯಲ್ಲಿ ನಡೆಯುತ್ತಿರುವ ಪ್ರಜಾವಾಣಿ, ಡೆಕ್ಕನ್‌ಹೆರಾಲ್ಡ್‌ ಬಳಗದ ಸಹಭಾಗಿತ್ವದಲ್ಲಿ ಆಯೋಜಿತವಾಗಿರುವ ಸಂಗಂ ಕವಿಸಮ್ಮೇಳನದ ಕೊನೆಯ ಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಏನೆಂದು ನಾ ಹಾಡಲಿ ಮತ್ತು ಹಾಲನ್ನೇ ಕುಡಿದ ಜನರು, ವಿಷವನ್ನೇ ಕಕ್ಕುತಲಿಹರು ಹಾಡಿನ ಸಾಲುಗಳನ್ನು ನೆನಪಿಸಿಕೊಂಡ ಅವರು, ಇಂದಿನ ಸಾಹಿತ್ಯ ಮನಕ್ಕೆ ಇಳಿಯುವುದೇ ಇಲ್ಲ. ಅಬ್ಬರದ ಸಂಗೀತ, ಮೌಲ್ಯಗಳಿರದ ಸಾಹಿತ್ಯ, ನನ್ನ ಮದುವೆ ಮಾಡಿಕೊ, ಪ್ರೀತಿಸು ಎನ್ನುವ ಹಾಡುಗಳು ದಾರಿ ತಪ್ಪಿಸುತ್ತಿವೆ. ಹಳೆಯ ಹಾಡುಗಳಲ್ಲಿ ದಾರಿ ತೋರುವ ಸಾಹಿತ್ಯ ಇದ್ದವು ಎಂದು ಶ್ಲಾಘಿಸಿದರು.
ಅಮೆರಿಕದ ಸಾಹಿತಿಗಳು ಪ್ರಕೃತಿಗೆ ಸಂಬಂಧಿಸಿದ, ಬಾಂಧವ್ಯಕ್ಕೆ ಸಂಬಂಧಿಸಿದ ಕವಿತೆಗಳನ್ನು ಓದಿದ್ದನ್ನು ಗಮನಿಸಿದೆ. ಬಳ್ಳಾರಿ ಇಂಥ ಐತಿಹಾಸಿಕ ಸಮ್ಮೇಳನಕ್ಕೆ ಸಾಕ್ಷಿಯಾಗಿದ್ದು ಸಂತೋಷವಾಗಿದೆ ಎಂದರು,

ADVERTISEMENT

ಯುವ ಸಾಹಿತಿಗಳಿಗೆ ವಿಶ್ವಸಾಹಿತ್ಯದ ದರ್ಶನ ಮಾಡಿಸಿದ ಅರಿವು ಮತ್ತು ಸಂಗಂ ಸಂಸ್ಥೆಯ ಶ್ರಮವನ್ನು ಶ್ಲಾಘಿಸಿದ ಅವರು ಸರ್ಕಾರದಿಂದ ಸಹಾಯ ದೊರೆಯುವಂತೆ ಪ್ರಯತ್ನಿಸುವ ಭರವಸೆಯನ್ನೂ ನೀಡಿದರು.ಆಫಾ ಎಂ ವೀವರ್‌ ಅಮೆರಿಕದ ಕವಿ ತಮ್ಮ ನೈಸರ್ಗಿಕ ಊರುಗೋಲನ್ನು ಹಿಡಿದಿರುವುದನ್ನು ಗಮನಿಸಿದ ಅವರು, ಈ ಕೋಲು ಚೆನ್ನಾಗಿದೆ. ನನಗೂ ಇದರ ಅಗತ್ಯವಿದೆ, ಸದ್ಯಕ್ಕಿಲ್ಲ ಅಷ್ಟೆ ಎಂದು ನಗೆಚಟಾಕಿ ಹಾರಿಸಿದರು.

ಸಿಎಂ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಆಗಲಿಲ್ಲ. ಅ. 28ರಂದು ಸಿಎಂ ಭೇಟಿ ಮಾಡಿದಾಗ ಉತ್ತಮ ಕಾರ್ಯಕ್ರಮ ಮಿಸ್‌ ಮಾಡಿಕೊಂಡಿದ್ದೀರಿ ಎಂದು ಅವರಿಗೆ ಹೇಳುತ್ತೇನೆ ಎಂದಾಗ ಸಭಿಕರಿಂದ ಚಪ್ಪಾಳೆಯ ಸುರಿಮಳೆ ಆಯಿತು.
ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್‌ ರಾಜೇಶ್ವರಿ ಸುಬ್ಬರಾಯುಡು ಅವರೂ ಕನ್ನಡದಲ್ಲಿ ಮಾತನಾಡಿ, ಎಲ್ಲರಿಗೂ ಶುಭಕೋರಿದರು. ಕರ್ನಾಟಕದ ಎಂಟು ಜನ ಸಾಹಿತಿಗಳ ಕೃತಿಗಳನ್ನು ಸಂಗಂ ವಿಶ್ವಕವಿ ಸಮ್ಮೇಳನದ ವೇದಿಕೆಯ ಮೇಲೆ ಬಿಡುಗಡೆಗೊಳಿಸಲಾಯಿತು.

ವೃಥಾ ಆರೋಪಗಳಿಗೆ ಮಾನನಷ್ಟ ಮೊಕದ್ದಮೆ ಹೂಡಿ

ಅರಿವು ಮತ್ತು ಸಂಗಂ ಸಂಸ್ಥೆಗಳು ಕಾರ್ಪೊರೇಟ್‌ ಕಂಪನಿಗಳಿಂದ ಕೋಟ್ಯಂತರ ರೂಪಾಯಿಗಳ ಪ್ರಾಯೋಜಕತ್ವ ಪಡೆದಿದೆ ಎಂದು ದೂರಲಾಗುತ್ತಿದೆ. ಎಲುಬಿಲ್ಲದ ನಾಲಗೆ ಹರಿಬಿಟ್ಟಿರುವವರ ವಿರುದ್ಧ ಕ್ರಮಕೈಗೊಳ್ಳಿ. ಕೋಟ್ಯಂತರ ರೂಪಾಯಿ ಪಡೆದ ಕುರಿತು ಸಾಬೀತು ಪಡಿಸಲಿ, ಇಲ್ಲವೇ ಮಾನನಷ್ಟ ಮೊಕದ್ದಮೆ ಎದುರಿಸಲಿ ಎಂದು ಎಚ್ಚರಿಸಿದರು.

ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಇಂಥ ಊರುಗಳಲ್ಲಿ ಏರ್ಪಾಟಾಗಬೇಕು. ಕೇಂದ್ರ ಸ್ಥಾನದಿಂದ ಆಚೆ ಬಂದಾಗಲೇ ನೆಲದ ಸೊಗಡು ಮತ್ತು ವಿಶ್ವದ ಸೊಗಡಿನ ನಡುವೆ ಸಂಬಂಧ ಏರ್ಪಡಿಸಬಹುದಾಗಿದೆ ಎಂಬ ಆಶಯ ವ್ಯಕ್ತಪಡಿಸಿದರು.
ಬಳ್ಳಾರಿಯ ಅರಿವು ಸಂಸ್ಥೆ ಸಂಗಂ ಜೊತೆಗೆ ಕೈಜೋಡಿಸಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದೆ. ಅದನ್ನು ಶ್ಲಾಘಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.