ADVERTISEMENT

ವಿದ್ಯಾರ್ಥಿನಿ ಆತ್ಮಹತ್ಯೆಯಲ್ಲ, ಯೋಜಿತ ಕೊಲೆ: ಆರೋಪ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 12:35 IST
Last Updated 22 ಏಪ್ರಿಲ್ 2019, 12:35 IST

ಹೊಸಪೇಟೆ: ‘ರಾಯಚೂರಿನ ವಿದ್ಯಾರ್ಥಿನಿ ಅವರದು ಆತ್ಮಹತ್ಯೆಯಲ್ಲ, ಅದೊಂದು ಯೋಜಿತ ಕೊಲೆ’ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌.ಎಫ್‌.ಐ.) ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ ಆರೋಪಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ವಿದ್ಯಾರ್ಥಿನಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದುವೇಳೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅವರ ದೇಹದ ಮೇಲೆ ಆ್ಯಸಿಡ್‌ ಹಾಕಿ ಅದನ್ನು ಸುಟ್ಟು ಹಾಕಲು ಪ್ರಯತ್ನಿಸಿರುವುದೇಕೇ ಎಂಬ ಪ್ರಶ್ನೆ ಮೂಡುತ್ತದೆ’ ಎಂದು ಸಂದೇಹ ವ್ಯಕ್ತಪಡಿಸಿದರು.

‘ಈಗಾಗಲೇ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನ ದೊಡ್ಡಪ್ಪ ಪೊಲೀಸ್‌ ಇನ್‌ಸ್ಪೆಕ್ಟರ್‌ ಆಗಿದ್ದಾರೆ. ಅವರನ್ನು ಹೊರಗಿಟ್ಟು ತನಿಖೆ ನಡೆಸಬೇಕು. ಇಲ್ಲವಾದಲ್ಲಿ ತನಿಖೆ ದಾರಿ ತಪ್ಪುವ ಸಾಧ್ಯತೆ ಇದೆ. ಕೆಲವು ಪ್ರಭಾವಿ ವ್ಯಕ್ತಿಗಳ ಕೈವಾಡ ಇರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಯಾರ ಒತ್ತಡಕ್ಕೂ ಒಳಗಾಗದೆ ಪೊಲೀಸರು ತನಿಖೆ ನಡೆಸಿ, ಮೃತಳ ಕುಟುಂಬದವರಿಗೆ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

‘ವಿದ್ಯಾರ್ಥಿನಿಕೊಲೆಯಿಂದ ವಿದ್ಯಾರ್ಥಿನಿಯರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಕೆಲ ತಿಂಗಳಿಂದ ಒಂದರ ನಂತರ ಒಂದು ಈ ರೀತಿಯ ಘಟನೆಗಳು ನಡೆಯುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿ. ಕೆಲವೆಡೆ ಶಾಲಾ–ಕಾಲೇಜಿಗೆ ಹೋಗಲು ವಿದ್ಯಾರ್ಥಿನಿಯರು ಹಿಂಜರಿಯುತ್ತಿದ್ದಾರೆ. ಆಳುವ ಸರ್ಕಾರ ವಿದ್ಯಾರ್ಥಿನಿಯರಿಗೆ ಭದ್ರತೆ ಖಾತ್ರಿ ಪಡಿಸುವ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಇಂತಹ ಘಟನೆಗಳು ನಡೆದಾಗ ಕಾಳಜಿ ತೋರಿಸುತ್ತದೆ’ ಎಂದು ಟೀಕಿಸಿದರು.

‘ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ವರ್ಮಾ ಸಮಿತಿ ಕೆಲವು ಮಹತ್ವದ ಶಿಫಾರಸುಗಳನ್ನು ಮಾಡಿದೆ. ಹೀಗಾಗಿ ಸಮಿತಿಯ ಶಿಫಾರಸನ್ನು ಯಥಾವತ್ತಾಗಿ ಅಂಗೀಕರಿಸಿ, ಜಾರಿಗೆ ತರಬೇಕು. ಸಮಾಜದ ದೃಷ್ಟಿಕೋನ ಕೂಡ ಬದಲಾಗಬೇಕು. ಮಹಿಳೆಯರನ್ನು ಗೌರವದಿಂದ ಕಾಣುವಂತಹ ಮನೋಭಾವ ಪುರುಷರಲ್ಲಿ ಬರಬೇಕು’ ಎಂದು ಹೇಳಿದರು.

‘ಸಿನಿಮಾ, ಧಾರವಾಹಿ ಮತ್ತು ಜಾಹೀರಾತುಗಳಲ್ಲಿ ಮಹಿಳೆಯರನ್ನು ಬಹಳ ಅಶ್ಲೀಲ, ಭೋಗದ ವಸ್ತು ಎಂಬಂತೆ ತೋರಿಸಲಾಗುತ್ತಿದೆ. ಇದು ಯುವಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಅದಕ್ಕೆ ಕಡಿವಾಣ ಬೀಳುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಫೆಡರೇಷನ್‌ ವಿಶ್ವವಿದ್ಯಾಲಯಗಳ ಸಂಚಾಲಕ ಮುನಿರಾಜ, ಜಿಲ್ಲಾ ಅಧ್ಯಕ್ಷ ದೊಡ್ಡಬಸವರಾಜ, ತಾಲ್ಲೂಕು ಅಧ್ಯಕ್ಷ ಶರಣು ಕುಮಾರ, ಕಾರ್ಯದರ್ಶಿ ಶಿವಕುಮಾರ, ಜಯಸೂರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.