
ಸಿರುಗುಪ್ಪ: ತಾಲ್ಲೂಕಿನ ವತ್ತುಮುರುವಣಿ ಗ್ರಾಮದ ಸಿ.ಎಚ್.ಮಹಾಕಾಳಿ ರಾಜು ಅವರಿಗೆ 2025-26 ನೇ ಸಾಲಿನ ಶ್ರೇಷ್ಠ ಮೀನು ಕೃಷಿಕ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ನ.21 ರಿಂದ 23 ರ ವರೆಗೆ ನಡೆದ ಮತ್ಸಮೇಳ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸಿ.ಎಚ್.ಮಹಾಕಾಳಿ ರಾಜು ಅವರು 2012-13ನೇ ಸಾಲಿನಿಂದ ಇಲ್ಲಿಯವರೆಗೆ ಸುಮಾರು 50 ಎಕರೆ ಸ್ವಂತ ಜಮೀನಿನಲ್ಲಿ ಮೀನು ಕೃಷಿ ಕೊಳಗಳನ್ನು ನಿರ್ಮಿಸಿಕೊಂಡು ಪ್ರತಿ ಎಕರೆ ವಿಸ್ತೀರ್ಣದ ಮೀನುಕೊಳದಲ್ಲಿ 4.5 ರಿಂದ 5.0 ಟನ್ ನಂತೆ ಒಟ್ಟು 225 ಟನ್ ಮೀನನ್ನು ಉತ್ಪಾದನೆ ಮಾಡುತ್ತಿದ್ದು, ಪ್ರತಿ ವರ್ಷ ಕನಿಷ್ಠ 1.0 ಕೋಟಿಯಷ್ಟು ನಿವ್ವಳ ಲಾಭ ಪಡೆಯುತ್ತಾ ಜಿಲ್ಲೆಯ ಯಶಸ್ವಿ ಮೀನು ಕೃಷಿಕ ಎಂದೆನಿಸಿಕೊಂಡಿದ್ದಾರೆ.
ಇವರು ಪ್ರಾರಂಭದಿಂದಲೂ ವೈಜ್ಞಾನಿಕ ರೀತಿಯಲ್ಲಿ ಮೀನು ಕೃಷಿಯನ್ನು ಮಾಡುತ್ತಿದ್ದು, ಮೀನುಗಾರಿಕೆ ಇಲಾಖೆ ಮತ್ತು ಮೀನು ಕೃಷಿ ತಜ್ಞರ ಮಾರ್ಗದರ್ಶನದಿಂದ ಪ್ರತಿವರ್ಷವೂ ಉತ್ತಮ ಮೀನು ಬೆಳೆಯನ್ನು ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಸಾಧನೆಯನ್ನು ಗುರುತಿಸಿದ ಮೀನುಗಾರಿಕೆ ಇಲಾಖೆಯು ನ.22 ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳಎಸ್.ವೈದ್ಯ ಅವರು ಪ್ರಶಸ್ತಿ ವಿತರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.