ADVERTISEMENT

ರಾಶಿಯಲ್ಲೇ ಮೊಳಕೆಯೊಡೆದ ಮೆಕ್ಕೆಜೋಳ

ಮಳೆಗೆ ಸಿಲುಕಿ ಅಪಾರ ಫಸಲು ನಷ್ಟ: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 7:17 IST
Last Updated 26 ಅಕ್ಟೋಬರ್ 2025, 7:17 IST
ಹೂವಿನಹಡಗಲಿ ಎಪಿಎಂಸಿ ಪ್ರಾಂಗಣದಲ್ಲಿ ರೈತರು ಮೆಕ್ಕೆಜೋಳ ಒಣಗಿಸುತ್ತಿದ್ದಾರೆ
ಹೂವಿನಹಡಗಲಿ ಎಪಿಎಂಸಿ ಪ್ರಾಂಗಣದಲ್ಲಿ ರೈತರು ಮೆಕ್ಕೆಜೋಳ ಒಣಗಿಸುತ್ತಿದ್ದಾರೆ   

ಹೂವಿನಹಡಗಲಿ: ತಾಲ್ಲೂಕಿನಲ್ಲಿ ವಾರದಿಂದ ಮಳೆ ಸುರಿಯುತ್ತಲೇ ಇದೆ. ಒಕ್ಕಣೆ ಮಾಡಿರುವ ಮೆಕ್ಕೆಜೋಳ ಮಳೆಗೆ ತೊಯ್ದು ರಾಶಿಗಳಲ್ಲೇ ಮೊಳಕೆಯೊಡೆದಿದ್ದು, ಅಪಾರ ಪ್ರಮಾಣದ ಫಸಲು ಹಾನಿಗೀಡಾಗಿದೆ.

ಒಕ್ಕಣೆ ಮಾಡಿದ ಮೆಕ್ಕೆಜೋಳವನ್ನು ನೇರವಾಗಿ ಮಾರುಕಟ್ಟೆಗೆ ಕೊಂಡೊಯ್ದರೆ ವ್ಯಾಪಾರಿಗಳು ಮಾಯಿಶ್ಚರೈಸರ್ ನೆಪ ಹೇಳಿ ಖರೀದಿಸುವುದಿಲ್ಲ. ಹಳ್ಳಿಗಳಲ್ಲಿ ಒಕ್ಕಣೆ ಕಣಗಳು ಇಲ್ಲದಿರುವುದರಿಂದ ಧಾನ್ಯ ಒಣಗಿಸಲು ರೈತರು ರಾಜ್ಯ ಹೆದ್ದಾರಿ, ಮುಖ್ಯ ರಸ್ತೆಗಳನ್ನೇ ಅವಲಂಬಿಸಿದ್ದಾರೆ. ಕೆಲ ದಿನಗಳಿಂದ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿರುವುದರಿಂದ ರಾಶಿಗಳು ಮಳೆಗೆ ಸಿಲುಕಿ ಬೆಳೆ ಹಾಳಾಗಿದೆ.

ತಾಲ್ಲೂಕಿನಲ್ಲಿ ಮೆಕ್ಕೆಜೋಳ ಪ್ರಧಾನ ಬೆಳೆ. ಮುಂಗಾರಿನಲ್ಲಿ ಬಿತ್ತನೆಯಾಗಿರುವ ಒಟ್ಟು 56 ಸಾವಿರ ಹೆಕ್ಟೇರ್ ನಲ್ಲಿ 48 ಸಾವಿರ ಹೆ. ಮೆಕ್ಕೆಜೋಳ ಕ್ಷೇತ್ರವಿದೆ. ಎಲ್ಲೆಡೆ ಒಕ್ಕಣೆ ಮುಗಿಸಿರುವ ರೈತರು ಹರಸಾಹಸಪಟ್ಟು ರಾಶಿಗಳನ್ನು ಸಂರಕ್ಷಣೆ ಮಾಡಿಕೊಂಡರೂ ಫಸಲು ಮಳೆಗೆ ತೊಯ್ದು, ಮುಗ್ಗಸು ಹಿಡಿದು ದುರ್ನಾತ ಬೀರುತ್ತಿವೆ.

ADVERTISEMENT

ಪಟ್ಟಣ ಸುತ್ತಮುತ್ತ ಗ್ರಾಮಗಳ ರೈತರು ಸಾವಿರಾರು ಕ್ವಿಂಟಲ್ ನಷ್ಟು ಮೆಕ್ಕೆಜೋಳವನ್ನು ಎಪಿಎಂಸಿ ಪ್ರಾಂಗಣದಲ್ಲೇ ಒಣಗಿಸುತ್ತಿದ್ದಾರೆ. ಧಾನ್ಯ ಒಣಗಿಸುವ ಪ್ಲಾಟ್ ಫಾರಂಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ಮಳೆಯ ನೀರು ನುಗ್ಗಿ ಬರುತ್ತದೆ. ತಾಡಪಾಲುಗಳಿಂದ ಮುಚ್ಚಿದರೂ ರಾಶಿಗಳಿಗೆ ನೀರು ಹೊಕ್ಕಿದೆ. ಮದಲಗಟ್ಟಿ ರಸ್ತೆ, ಹಂಪಸಾಗರ ರಸ್ತೆ ಸೇರಿದಂತೆ ಬಹುತೇಕ ಗ್ರಾಮಗಳ ರಸ್ತೆಗಳಲ್ಲಿ ಮೆಕ್ಕೆಜೋಳದ ರಾಶಿಗಳು ಮಳೆಗೆ ತೊಯ್ದು ಅಪಾರ ಫಸಲು ಹಾಳಾಗಿದೆ.

ಮುಂಗಾರು ಪ್ರಾರಂಭದಿಂದಲೂ ಮಳೆ ಚೆನ್ನಾಗಿ ಸುರಿದಿದ್ದರಿಂದ ಹೊಲಗಳಲ್ಲಿ ಉತ್ತಮ ಬೆಳೆ ಕಂಡಿದ್ದ ರೈತರು, ಈ ವರ್ಷವಾದರೂ ಬೆಳೆ ಕೈ ಹಿಡಿಯುವ ಆಶಾವಾದದಲ್ಲಿದ್ದರು. ಇನ್ನೇನು ಒಕ್ಕಣೆ ಮುಗಿಸಿ ಮಾರುಕಟ್ಟೆಗೆ ಕಳಿಸಬೇಕೆನ್ನುವಷ್ಟರಲ್ಲಿ ಬಿಟ್ಟೂ ಬಿಡದೇ ಮಳೆ ಸುರಿದು, ಕೈಗೆ ಬಂದ ತುತ್ತು ಬಾಯಿಗೆ ಬಾರದ ಅನುಭವ ಆಗಿದೆ.

‘ಎಪಿಎಂಸಿ ಪ್ರಾಂಗಣದಲ್ಲೇ ಮೆಕ್ಕೆಜೋಳ ಒಣಗಿಸಿ ಮಾರಾಟ ಮಾಡಲು ಮುದೇನೂರಿನಿಂದ ಟ್ರ್ಯಾಕ್ಟರ್ ನಲ್ಲಿ ಫಸಲು ತಂದಿದ್ದೇವೆ. ತುಂಬಾ ಕಷ್ಟಪಟ್ಟು ಮಳೆಯಿಂದ ರಾಶಿಯನ್ನು ಸಂರಕ್ಷಿಸಿಕೊಂಡಿದ್ದರೂ ಮೆಕ್ಕೆಜೋಳ ಖರೀದಿಸಲು ಖರೀದಿದಾರರು ಬರುತ್ತಿಲ್ಲ’ ಎಂದು ಮುದೇನೂರಿನ ರೈತ ಬಳ್ಳಾರಿ ಪಿಂಜಾರ್ ಮಾಬುಸಾಬ್, ಪರ್ವೀನ್ ದಂಪತಿ ಅಳಲು ತೋಡಿಕೊಂಡರು.

‘ದುಬಾರಿ ಬೀಜ, ಗೊಬ್ಬರ ತಂದು ಬೆಳೆ ಬೆಳೆದಿದ್ದೇವೆ. ಕಟಾವು, ಒಕ್ಕಣೆ ಖರ್ಚಿಗೆ ಸಾಲ ಮಾಡಿದ್ದೇವೆ. ರಸ್ತೆಯಲ್ಲಿ ಧಾನ್ಯ ಒಣಗಿಸಲು ಒಬ್ಬ ಕಾರ್ಮಿಕರಿಗೆ 500 ರೂ. ಕೂಲಿ, ಇತರೆ ಖರ್ಚುಗಳನ್ನು ನೋಡಿಕೊಳ್ಳಬೇಕಿದೆ. ಅವರಿಗೆ ಕೂಲಿ ಮೊತ್ತ ನೀಡಲು ಆಗದಂತಾಗಿದೆ’ ಎಂದು ಮದಲಗಟ್ಟಿ ರಸ್ತೆಯ ಭೂಸೇನಾ ನಿಗಮ ಕಚೇರಿ ಬಳಿ ಧಾನ್ಯ ಒಣಗಿಸುತ್ತಿರುವ ಚಿಂತಿ ಸತೀಶ ನೋವು ತೋಡಿಕೊಂಡರು.

ಖರೀದಿಗೆ ವರ್ತಕರು ಹಿಂದೇಟು:

ತಾಲ್ಲೂಕಿನಲ್ಲಿ ಅಪಾರ ಪ್ರಮಾಣದ ಮೆಕ್ಕೆಜೋಳ ಫಸಲು ಇದೆ. ಕಾಡುವ ಮಳೆಯ ನಡುವೆ ಕಾಪಾಡಿಕೊಂಡ ಬೆಳೆಯನ್ನು ಖರೀದಿಸಲು ವರ್ತಕರು ಮುಂದೆ ಬಾರದೇ ಇರುವುದರಿಂದ ರೈತರು ಚಿಂತೆಗೀಡಾಗಿದ್ದಾರೆ.

ವಾರದ ಹಿಂದೆ ಕ್ವಿಂಟಲ್ ಗೆ ₹ 2 ಸಾವಿರ, ₹ 1900 ಇದ್ದ ಧಾರಣೆ, ಈಗ ₹ 1800 ರಿಂದ ₹ 1600ಗಳಿಗೆ ಕುಸಿದಿದೆ. ಮಳೆಗೆ ತೊಯ್ದ ಫಸಲನ್ನು ಕೇಳುವವರೇ ಇಲ್ಲ. ಬೆಲೆ ಕುಸಿತ, ಮಳೆಯ ಸಂಕಷ್ಟದ ನಡುವೆ ಫಸಲು ಮಾರಾಟ ಸಾಧ್ಯವಾಗದೇ ರೈತರು ಕಂಗಾಲಾಗಿದ್ದಾರೆ.

ಖರೀದಿ ಕೇಂದ್ರ ತೆರೆಯಲು ಆಗ್ರಹ:

ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬೆಲೆ ಕುಸಿದಿರುವುದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ಕೂಡಲೇ ಖರೀದಿ ಕೇಂದ್ರ ತೆರೆದು, ₹ 2,400 ಬೆಂಬಲ ಬೆಲೆಯಲ್ಲಿ ಖರೀದಿಸಬೇಕು. ಮಳೆಗೆ ತೊಯ್ದು ಮೊಳಕೆ ಒಡೆದಿರುವ ಬೆಳೆಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಮುಖಂಡ ಎಲ್.ಸೋಮಿನಾಯ್ಕ ಆಗ್ರಹಿಸಿದ್ದಾರೆ.

ಹೂವಿನಹಡಗಲಿಯ ಮದಲಗಟ್ಟಿ ರಸ್ತೆಯಲ್ಲಿ ಮೆಕ್ಕೆಜೋಳ ರಾಶಿಗೆ ನೀರು ಹೊಕ್ಕು ಹಾಳಾಗಿದೆ
ಹೂವಿನಹಡಗಲಿಯ ಮದಲಗಟ್ಟಿ ರಸ್ತೆಯಲ್ಲಿ ಮೆಕ್ಕೆಜೋಳ ರಾಶಿಗೆ ನೀರು ಹೊಕ್ಕು ಹಾಳಾಗಿದೆ
ಹೂವಿನಹಡಗಲಿಯ ರೈತ ದೊಡ್ಡಮನಿ ಗುರುಬಸವರಾಜ ಅವರ ಮೆಕ್ಕೆಜೋಳದ ಫಸಲು ಮೊಳಕೆ ಒಡೆದಿದೆ