ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ರೈತರ ಜೀವನಾಡಿ ಮಾಲವಿ ಜಲಾಶಯದಿಂದ 1 ಟಿಎಂಸಿ ಅಡಿಯಷ್ಟು ನೀರು ಪೋಲಾಗಿ ಹಗರಿಗೆ ಹರಿದು ಹೋಗಿರುವುದಕ್ಕೆ ಕ್ಷೇತ್ರದ ಶಾಸಕ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ನೇರ ಹೊಣೆಯಾಗಿದ್ದಾರೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ರೈತ ಮುಖಂಡರೊಂದಿಗೆ ತೆರಳಿ ಮನವಿ ಪತ್ರ ಸಲ್ಲಿಸಿ ಬಳಿಕ ಮಾತನಾಡಿದರು.
ಜಲಾಶಯದ ಜಲಾನಯನ ಪ್ರದೇಶವಾದ ಜಗಳೂರು ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿ ಕೆರೆಗಳು ಭರ್ತಿಯಾಗಿದ್ದರಿಂದ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬಂದಿತ್ತು. ಆದರೆ ನೀರು ಕಣ್ಣಿಗೆ ಕಂಡರೂ ಕೈಗೆ ಸಿಗದ ಪರಿಸ್ಥಿತಿ ಎದುರಾಗಲು ಶಾಸಕ ನೇಮರಾಜನಾಯ್ಕ ಮತ್ತು ಜಲಾಶಯದ ಅಧಿಕಾರಿಗಳು ಕಾರಣರಾಗಿದ್ದಾರೆ, ಅವರು ತಮ್ಮ ಜವಾಬ್ದಾರಿ ಮರೆತ್ತಿದ್ದಾರೆ. ಇದರಿಂದಾಗಿ ತಾಲ್ಲೂಕಿನ ನಾಗರೀಕರಲ್ಲಿ ಆತಂಕ ಸೃಷ್ಟಿಯಾಗಿದೆ ಎಂದರು.
ಜಲಾಶಯದಲ್ಲಿ ನೀರು ಉಳಿದಿದ್ದರೆ ಕೃಷಿ ಚಟುವಟಿಕೆ ಆರಂಭಗೊಂಡು ಮತ್ತು ಹತ್ತಾರು ಗ್ರಾಮಗಳ ಜನರಿಗೆ ಕುಡಿಯುವ ನೀರಿಗೆ ಉಪಯೋಗವಾಗುತ್ತಿತ್ತು. ಸಾವಿರಾರು ಕೊಳವೆ ಬಾವಿಗಳಲ್ಲಿ ಅಂತರ್ಜಲ ಪ್ರಮಾಣ ಹೆಚ್ಚಾಗುತ್ತಿತ್ತು. ಆದರೆ, ₹4ಕೋಟಿ ರೂಪಾಯಿ ಮೊತ್ತದ ಕಾಮಗಾರಿಯ ಕ್ರಸ್ಟ್ ಗೇಟ್ ದುರಸ್ತಿ ಕಾರ್ಯ ವಿಳಂಬವಾಗಿರುವುದೇ ನೀರು ಪೋಲಾಗಲು ಮುಖ್ಯ ಕಾರಣವಾಗಿದೆ. ಈ ಕುರಿತು ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಶಾಸಕರು ಸಾರ್ವಜನಿಕರ ಮುಂದೆ ಸಮಜಾಯಿಷಿ ನೀಡಬೇಕು ಎಂದು ಆಗ್ರಹಿಸಿದರು.
ಟೆಂಡರ್ ಪ್ರಕ್ರಿಯೆ ಮುಗಿದು ಏಳೆಂಟು ತಿಂಗಳಾದರೂ ಉದ್ಧೇಶಪೂರ್ವಕವಾಗಿ ಕಾಮಗಾರಿಯನ್ನು ವಿಳಂಬ ಮಾಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಲಿಖಿತ ಉತ್ತರ ನೀಡಬೇಕು, ಸಾರ್ವಜನಿಕರ ಸಭೆಯಲ್ಲಿ ಬಹಿರಂಗವಾಗಿ ತಹಶೀಲ್ದಾರ್ ಅವರು ಪ್ರಕಟಿಸಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಜಿ.ಮಂಜುನಾಥ, ಜೆ.ಯೋಗಾನಂದ, ಸಕ್ರಗೌಡ, ಹುಲುಗಪ್ಪ, ಟಿ.ರವಿಕುಮಾರ್ ಇದ್ದರು. ಉಪ ತಹಶೀಲ್ದಾರ್ ಶಿವಕುಮಾರಗೌಡ ಅವರಿಗೆ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.