ADVERTISEMENT

ಸೆ. 22ರಂದು ಮಲಯಾಳಿ ಓಣಂ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 12:16 IST
Last Updated 20 ಸೆಪ್ಟೆಂಬರ್ 2019, 12:16 IST
ಎಂ.ಕೆ. ಮಥಾಯಿ
ಎಂ.ಕೆ. ಮಥಾಯಿ   

ಹೊಸಪೇಟೆ: ’ಮಲಯಾಳಿಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಓಣಂ ಸೆ. 22ರಂದು ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಸಂಭ್ರಮದಿಂದ ಆಚರಿಸಲು ತೀರ್ಮಾನಿಸಲಾಗಿದೆ‘ ಎಂದು ಕೈರಾಲಿ ಕಲ್ಚರಲ್‌ ಅಸೋಸಿಯೇಷನ್‌ ಅಧ್ಯಕ್ಷ ಎಂ.ಕೆ. ಮಥಾಯಿ ತಿಳಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ಕೇರಳದಲ್ಲಿ ಓಣಂ ಹಬ್ಬವನ್ನು ಜಾತಿ, ಮತ, ಭೇದವೆನ್ನದೇ ಎಲ್ಲರೂ ಕೂಡಿಕೊಂಡು ಆಚರಿಸುತ್ತಾರೆ. ಆ ಸಂಪ್ರದಾಯವನ್ನು ಅನೇಕ ವರ್ಷಗಳಿಂದ ನಗರದಲ್ಲಿ ನೆಲೆಸಿರುವ ಮಲಯಾಳಿಗಳು ಮುಂದುವರೆಸಿಕೊಂಡು ಬಂದಿದ್ದಾರೆ‘ ಎಂದು ಮಾಹಿತಿ ನೀಡಿದರು.

’ನಗರದಲ್ಲಿ 340ಕ್ಕೂ ಹೆಚ್ಚು ಮಲಯಾಳಿ ಕುಟುಂಬಗಳಿವೆ. ಓಣಂ ಹಬ್ಬದಲ್ಲಿ ಎಲ್ಲ ಕುಟುಂಬದವರು ಭಾಗವಹಿಸುತ್ತಾರೆ. 22ರಂದು ಬೆಳಿಗ್ಗೆ 9ಕ್ಕೆ ದೇವರ ಪೂಜೆ, ಧಾರ್ಮಿಕ ವಿಧಿ ವಿಧಾನಗಳೊಮದಿಗೆ ಕಾರ್ಯಕ್ರಮ ಆರಂಭಗೊಳ್ಳುತ್ತದೆ‘ ಎಂದರು.

ADVERTISEMENT

’ನಂತರ ನಡೆಯಲಿರುವ ಸಮಾರಂಭಕ್ಕೆ ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಅಧ್ಯಕ್ಷ ಜಿ. ನಾಗಮೋಹನ್‌, ಅನರ್ಹ ಶಾಸಕ ಆನಂದ್‌ ಸಿಂಗ್‌, ಜೆ.ಎಸ್‌.ಡಬ್ಲ್ಯೂ ಸ್ಟೀಲ್ಸ್‌ನ ಅಧ್ಯಕ್ಷ ರಾಜಶೇಖರ್‌ ಪಟ್ಟಣಶೆಟ್ಟಿ, ಜೆ.ಡಿ.ಎಸ್‌. ಮುಖಂಡ ದೀಪಕ್‌ ಕುಮಾರ್‌ ಸಿಂಗ್‌, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಎನ್‌. ಗುರುಪ್ರಸಾದ್‌, ಐ.ಪಿ.ಎಸ್‌. ಅಧಿಕಾರಿ ಸಿಮಿ ಮರಿಯಮ್‌ ಜಾರ್ಜ್‌ ಪಾಲ್ಗೊಳ್ಳುವರು‘ ಎಂದು ವಿವರಿಸಿದರು.

’ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಡಾ. ಮೃತ್ಯುಂಜಯ ಆರ್‌. ವಸ್ತ್ರದ, ಡಾ. ಬಿ.ಮಂಜುನಾಥ್‌ ಅವರನ್ನು ಸತ್ಕರಿಸಲಾಗುವುದು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ‘ ಎಂದು ತಿಳಿಸಿದರು.

’ಸೆ. 21ರ ಸಂಜೆ 4ಕ್ಕೆ ಕೇರಂ, ಚೆಸ್‌, ಮ್ಯೂಸಿಕಲ್‌ ಚೇರ್‌, ಬಾಲ್‌ ಪಾಸಿಂಗ್‌, ಕಪ್ಪೆ ಓಟ ಸೇರಿದಂತೆ ಇತರೆ ಕ್ರೀಡೆಗಳು ನಡೆಯಲಿವೆ. ಹಿಂದಿನ ವರ್ಷ ಕೇರಳ ಹಾಗೂ ಕರ್ನಾಟಕದಲ್ಲಿ ಪ್ರವಾಹ ಬಂದದ್ದರಿಂದ ಓಣಂ ಆಚರಿಸಲಿಲ್ಲ. ₹2 ಲಕ್ಷ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲಾಗಿತ್ತು. ಈ ವರ್ಷ ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ‘ ಎಂದು ಹೇಳಿದರು.

ಅಸೋಸಿಯೇಷನ್ ಉಪಾಧ್ಯಕ್ಷ ಸಿಲ್ವಿ ಜಾರ್ಜ್‌, ಪ್ರಧಾನ ಕಾರ್ಯದರ್ಶಿ ಸುಂದರನ್‌, ಕೆ. ಮನೋಹರನ್‌ ಪಿಳ್ಳೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.