ADVERTISEMENT

ವ್ಯವಸ್ಥೆಗೆ ವ್ಯಂಗ್ಯದ ಮೊನಚು: ಮನೋಜ್‌ ಬೊಗಟಿ ಕವಿತೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 9:04 IST
Last Updated 21 ಅಕ್ಟೋಬರ್ 2022, 9:04 IST
ವಿಶ್ವಕವಿ ಸಮ್ಮೇಳನದಲ್ಲಿ ರೇಣುಕಾ ಯಲ್ಲಮ್ಮ ತಂಡದವರು ಜೋಗತಿ ನೃತ್ಯ ಪ್ರದರ್ಶಿಸಿದರು.
ವಿಶ್ವಕವಿ ಸಮ್ಮೇಳನದಲ್ಲಿ ರೇಣುಕಾ ಯಲ್ಲಮ್ಮ ತಂಡದವರು ಜೋಗತಿ ನೃತ್ಯ ಪ್ರದರ್ಶಿಸಿದರು.   

ಬಳ್ಳಾರಿ, ಡಾ. ಜೋಳದರಾಶಿ ದೊಡ್ಡಗೌಡನವರ ವೇದಿಕೆ: ಅಮೆರಿಕ ಹೆದರುತ್ತದೆ, ಶಾಲೆಯಲ್ಲವಿದು ಪಾಕಶಾಲೆ - ಕವಿತೆಗಳನ್ನು ಓದಿದ ಮನೋಜ್‌ ಬೊಗಟಿ ಅವರಿಗೆ ಆಗಾಗ ಕರತಾಡನಗಳು, ಮೆಚ್ಚುಗೆಯ ವಾಹ್‌ವಾಹ್‌ಗಳು,ಕೇಳುಗರಿಂದ ವ್ಯಕ್ತವಾದವು.

ತೀಕ್ಷ್ಣವ್ಯಂಗ್ಯಕ್ಕೆ, ವಿಷಾದಕ್ಕೆ ಮತ್ತು ಟೀಕೆಗೆಂದೇ ಭಾಷೆಯನ್ನು ದುಡಿಸಿಕೊಂಡ ಬೊಗಾಟಿ ಅವರು ದಾರ್ಜಲಿಂಗ್‌ನವರು. ಟ್ಯಾಗೋರಿನ ನಾಡಿನಿಂದ ಬಂದವನೆಂದು ಹೇಳಿಕೊಂಡ ಮನೋಜ್‌ ಅವರ ಕವಿತೆಗಳಿಗೆ ದೊರೆತ ಕರತಾಡನಗಳು ಸಾಹಿತ್ಯಾಸಕ್ತರ ಉತ್ಸಾಹಕ್ಕೆ ಹಿಡಿದ ಕೈಗನ್ನಡಿಯಂತಿತ್ತು.

‘ಅಮೆರಿಕ ಹೆದರುತ್ತದೆ’ ಇಲ್ಲಿಯ ಪಟಾಕಿಗಳ ಸದ್ದಿಗೆ, ಒಂದು ಹಿಡಿ ಕತ್ತಲೆಗೂ ಅಮೆರಿಕ ಬೆದರುತ್ತದೆ, ಸೈಬರ್‌ ಕೆಫೆಯಿಂದ ಯುವಕ ಹೊರಬಂದರೆ ಏನು ಬರೆದ ಎಂದು ಪ್ರಶ್ನಿಸುತ್ತದೆ, ಕಾವ್ಯವವನ್ನು ವಿವಸ್ತ್ರಗೊಳಿಸುತ್ತದೆ ಎಂದೆಲ್ಲ ಓದಿದಾಗ, ದೂರದ ಅಮೇರಿಕ ಭಾರತದಲ್ಲಿಯೂ ಮೈವೆತ್ತ ಅನುಭವ ಸಭಿಕರಿಗೆ.

ADVERTISEMENT

ಅವರದ್ದೇ ಇನ್ನೊಂದು ಕವಿತೆ ಪಾಠಶಾಲೆಯಲ್ಲ, ಪಾಕಶಾಲೆಯ ಕೆಲವು ಸಾಲುಗಳೂ ದುರಾಡಳಿತ ಮತ್ತು ವ್ಯವಸ್ಥೆಯೊಳಗಿನ ಅವಸ್ಥೆಗೆ ಕನ್ನಡಿ ಹಿಡಿಯುತ್ತಲೇ ತೀಕ್ಷಣವಾದ ವ್ಯಂಗ್ಯವನ್ನಿತ್ತರು. ಭೂಮಿ ಹೇಗಿದೆಯೆಂದರೆ ಮೊಟ್ಟೆಯಾಕಾರದಲ್ಲಿದೆ ಎನ್ನುತ್ತಾರೆ. ಮಕ್ಕಳಿಗದು ಮೊಟ್ಟೆಯ ದಿನ. ಅಕ್ಷರಗಳೆಲ್ಲವೂ ಆಹಾರಕ್ಕಾಗಿ ಸರದಿಯಲ್ಲಿ ನಿಂತಿರುವಾಗಲೇ, ಹಸಿವೆಂಬ ಮೊಗ್ಗು ಅರಳಿ, ಹೂವಾಗಿ, ಹೂವಿನ ಬೀಜಗಳಾಗಲೇ ಪ್ರಸಾರವಾಗುತ್ತಿರುವೆ. ಆಹಾರಕ್ಕೆ ವಿಷ ಬೆರೆಸಲಾಗಿದೆ.. ಆದರೂ ಮೃತವಾದ ಅಕ್ಷರಗಳಲ್ಲಿ ಕೆಲವಾದರೂ ಚಿರಂಜೀವಿಗಳಾದರೆ, ಕೆಲವು ವಾಕ್ಯ ರಚನೆಯಾಗುತ್ತದೆ ಎಂಬ ಆಶಯದೊಂದಿಗೆ ಕವಿತೆ ಮುಗಿದಾಗ, ಆಶಾಭಾವನೆಯ ಎಳೆ ಎಲ್ಲರನ್ನೂ ಹಿಡಿದಿಟ್ಟಿತು.

ಹೋಳಿ ಬಣ್ಣದ ಹಬ್ಬವಲ್ಲ ಮಾರುಕಟ್ಟೆಯ ಸಂತೆಯಾಗಿದೆ ಎಂದು ಹೇಳಿದಾಗ ವರ್ಣಗಳೆಲ್ಲ ವಿವರ್ಣಗೊಳಿಸುತ್ತಲೇ ನಮ್ಮೊಳಗಿನ ಮುಖವಾಡವನ್ನು ಕಳಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.