ಸಾಂದರ್ಭಿಕ ಚಿತ್ರ
ಜಗಳೂರು/ಕೆಜಿಎಫ್/ಬಳ್ಳಾರಿ: ರಾಜ್ಯದ ವಿವಿಧೆಡೆ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಗುರುವಾರ ಕೆರೆ, ಕೃಷಿಹೊಂಡದಲ್ಲಿ ಈಜಲು ತೆರಳಿದ್ದ 9 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಜಗಳೂರು (ದಾವಣಗೆರೆ) ವರದಿ: ತಾಲ್ಲೂಕಿನ ಭರಮಸಮುದ್ರ ಗ್ರಾಮದ ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಗ್ರಾಮದ ಬಿ.ಅಜಯ್ (18 ), ಟಿ.ಕಾರ್ತಿಕ್ (19) ಸಾವಿಗೀಡಾದವರು. 2 ದಶಕಗಳಿಂದ ಬರಿದಾಗಿದ್ದ ಕೆರೆ ಈ ವರ್ಷ ಮಳೆಗೆ ತುಂಬಿತ್ತು. ಇಬ್ಬರೂ ಸ್ನೇಹಿತರೊಂದಿಗೆ ತೆರಳಿದ್ದರು. ಈಜಲು ಬಾರದ ಕಾರ್ತಿಕ್ ಮುಳುಗುತ್ತಿದ್ದನ್ನು ಕಂಡ ಅಜಯ್ ರಕ್ಷಣೆಗೆ ಧಾವಿಸಿದ್ದ. ಆದರೆ, ಇಬ್ಬರೂ ಆಳವಾದ ಗುಂಡಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಬುಧವಾರ ರಾತ್ರಿ ಗ್ರಾಮಕ್ಕೆ ಬಂದಿದ್ದ. ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಜಿಎಫ್ ವರದಿ: ತಾಲ್ಲೂಕಿನ ವಡ್ಡರಹಳ್ಳಿ ಕೆರೆಗೆ ಈಜಲು ಇಳಿದ ಇಬ್ಬರು ಬಾಲಕರು ಮತ್ತು ರಕ್ಷಿಸಲು ಹೋಗಿದ್ದ ಬಾಲಕನ ತಂದೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ವಡ್ಡರಹಳ್ಳಿಯ ರಮೇಶ್ (35), ಅವರ ಎಂಟು ವರ್ಷದ ಮಗ ಅಗಸ್ತ್ಯ ಮತ್ತು ಚರಣ್ (15) ಮೃತರು. ಚರಣ್ ಮತ್ತು ಅಗಸ್ತ್ಯನನ್ನು ಈಜಾಡಲು ಬಿಟ್ಟು ಕೆರೆಯ ಅಂಚಿನಲ್ಲಿ ಕುಳಿತು ರಮೇಶ್ ನೋಡುತ್ತಿದ್ದರು. ಮಕ್ಕಳು ಕೆಸರಿನಲ್ಲಿ ಸಿಲುಕಿ ಮುಳಗ ತೊಡಗಿದರು. ಅವರನ್ನು ರಕ್ಷಿಸಲು ರಮೇಶ್ ಕೆರೆ ಧುಮುಕಿದರು. ಆದರೆ, ಈಜಲು ಬಾರದ ಅವರೂ ಮೃತಪಟ್ಟರು. ಬೇತಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬಳ್ಳಾರಿ ವರದಿ: ಬಳ್ಳಾರಿ ತಾಲ್ಲೂಕಿನ ಶಿಡಿಗಿನಮೊಳ ಗ್ರಾಮದ ಹೊಲದ ಕೃಷಿ ಹೊಂಡದಲ್ಲಿ ಮುಳುಗಿ ಬಾಲಕರಾದ ರಾಜೇಶ್ (13) ಮತ್ತು ಶಿವಶಂಕರ್ (13) ಮೃತಪಟ್ಟಿದ್ದಾರೆ.
‘ನಾಲ್ವರು ಬಾಲಕರು ಈಜಲು ಕೃಷಿ ಹೊಂಡಕ್ಕೆ ಹೋಗಿದ್ದರು. ಒಬ್ಬ ನೀರಿಗಿಳಿದ ಕೂಡಲೇ ಮುಳುಗಿದರೆ, ಆತನ ರಕ್ಷಣೆಗೆ ಇನ್ನೊಬ್ಬ ಬಾಲಕ ನೀರಿಗಿಳಿದ. ಇಬ್ಬರೂ ಮುಳುಗಿದರು‘ ಎಂದು ಪರಮದೇವನಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಶಿವಪುರ ಗೊಲ್ಲರಹಟ್ಟಿಯ ಗೋಕಟ್ಟೆಯಲ್ಲಿ ಶಶಿಕುಮಾರ್ (15) ಮೃತಪಟ್ಟಿದ್ದಾನೆ ಎಂದು ಕೂಡ್ಲಿಗಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಶವ ಪತ್ತೆ: ಸ್ನೇಹಿತರ ಜೊತೆಗೆ ಹುಬ್ಬಳ್ಳಿಯ ಉಣಕಲ್ ಕೆರೆಗೆ ಬುಧವಾರ ಈಜಲು ಹೋಗಿದ್ದ ಬಾಲಕ ಬೆಂಗೇರಿ ಚೇತನ ಕನಕಣ್ಣವರ (17)ಶವ ಶವ ಗುರುವಾರ ಪತ್ತೆಯಾಗಿದೆ’ ಎಂದು ವಿದ್ಯಾನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.