ADVERTISEMENT

ತುಂಗಭದ್ರಾ ಜಲಾಶಯಕ್ಕೆ ಜನಸಾಗರ

ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತ; ದಿನವಿಡೀ ಜನಜಾತ್ರೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 19:30 IST
Last Updated 15 ಆಗಸ್ಟ್ 2019, 19:30 IST
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದ ಎಲ್ಲ ಕ್ರಸ್ಟ್‌ಗೇಟ್‌ಗಳಿಗೆ ಗುರುವಾರ ರಾತ್ರಿ ತ್ರಿವರ್ಣ ಧ್ವಜ ಹೋಲುವ ವಿದ್ಯುದ್ದೀಪಗಳಿಂದ ಅಲಂಕರಿಸಿ, ನೀರು ಹರಿಸಲಾಯಿತು
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದ ಎಲ್ಲ ಕ್ರಸ್ಟ್‌ಗೇಟ್‌ಗಳಿಗೆ ಗುರುವಾರ ರಾತ್ರಿ ತ್ರಿವರ್ಣ ಧ್ವಜ ಹೋಲುವ ವಿದ್ಯುದ್ದೀಪಗಳಿಂದ ಅಲಂಕರಿಸಿ, ನೀರು ಹರಿಸಲಾಯಿತು   

ಹೊಸಪೇಟೆ: ಮೈದುಂಬಿಕೊಂಡು ಹರಿಯುತ್ತಿರುವ ತುಂಗಭದ್ರೆಯ ಚೆಲುವು ಕಣ್ತುಂಬಿಕೊಳ್ಳಲು ನಗರ ಹೊರವಲಯದ ಜಲಾಶಯಕ್ಕೆ ಗುರುವಾರ ಜನಸಾಗರವೇ ಹರಿದು ಬಂದಿತ್ತು.

ಸ್ವಾತಂತ್ರ್ಯೋತ್ಸವದ ನಿಮಿತ್ತ ಅಣೆಕಟ್ಟೆಯ ಎಲ್ಲ ಕ್ರಸ್ಟ್‌ಗೇಟ್‌ಗಳು, ಉದ್ಯಾನ, ಸುತ್ತಮುತ್ತಲಿನ ಪರಿಸರಕ್ಕೆ ವಿದ್ಯುದ್ದೀಪಾಲಂಕಾರ ಮಾಡಲಾಗಿತ್ತು. ಎಲ್ಲ ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗಿತ್ತು. ಇಡೀ ಜಲಾಶಯ ಮದುವಣಗಿತ್ತಿಯಂತೆ ಕಂಗೊಳಿಸುತ್ತಿತ್ತು. ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಲು ಜಿಲ್ಲೆ ಸೇರಿದಂತೆ ನೆರೆಯ ಕೊಪ್ಪಳ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಗದಗ, ಹುಬ್ಬಳ್ಳಿ, ಆಂಧ್ರ ಪ್ರದೇಶದ ಕಡಪ, ಕರ್ನೂಲು, ಅನಂತಪುರದಿಂದ ಜನ ಬಂದಿದ್ದರು.

ಅಣೆಕಟ್ಟೆಯ ವಾಹನ ನಿಲುಗಡೆ ಸ್ಥಳ ಮಧ್ಯಾಹ್ನದ ಹೊತ್ತಿಗೆ ವಾಹನಗಳಿಂದ ಭರ್ತಿಯಾಗಿತ್ತು. ನಗರದ ಟಿ.ಬಿ. ಡ್ಯಾಂ ಕಾಲೇಜು, ಅದಕ್ಕೆ ಹೊಂದಿಕೊಂಡಿರುವ ರಸ್ತೆ, ರಾಷ್ಟ್ರೀಯ ಹೆದ್ದಾರಿ 50ರ ಎರಡೂ ಬದಿಯಲ್ಲಿ ವಾಹನಗಳನ್ನು ಜನ ಸಾಲಾಗಿ ನಿಲ್ಲಿಸಿ, ಅಣೆಕಟ್ಟೆಯ ಒಳಗೆ ಹೋಗಿದ್ದರು. ರಾತ್ರಿ ಒಂಬತ್ತು ಗಂಟೆಯ ವರೆಗೆ ಜನ ಬಂದು ಹೋಗುವುದು ಹಾಗೆಯೇ ಮುಂದುವರೆದಿತ್ತು.

ADVERTISEMENT

ಜನ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ವಾಹನಗಳು ಸಾಲುಗಟ್ಟಿ, ನಿಧಾನವಾಗಿ ಸಂಚರಿಸುತ್ತಿದ್ದವು. ಅಲ್ಲಲ್ಲಿ ಸಣ್ಣಪುಟ್ಟ ಅಪಘಾತಗಳು ಸಂಭವಿಸಿದವು. ಹೀಗಿದ್ದರೂ ಸಂಚಾರ ಪೊಲೀಸರು ಅಲ್ಲಿ ಕಂಡು ಬರಲಿಲ್ಲ. ಅಪಾಯ ಲೆಕ್ಕಿಸದೆ ಜನ ಓಡಾಡುತ್ತಿದ್ದರು. ಸಂಚಾರ ಪೊಲೀಸರು ನಗರದ ಸಾಯಿಬಾಬಾ ವೃತ್ತ, ಟಿ.ಬಿ. ಡ್ಯಾಂ ವೃತ್ತಕ್ಕೆ ಸೀಮಿತರಾಗಿದ್ದರು.

ಜಲಾಶಯದಲ್ಲಿ ಶೇ 70ಕ್ಕಿಂತ ಹೆಚ್ಚು ನೀರು ಸಂಗ್ರಹವಾದರೆ ಆಗಸ್ಟ್‌ 15ರಂದು ಎಲ್ಲ ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗುತ್ತದೆ. ವಿದ್ಯುದ್ದೀಪಾಲಂಕಾರ ಮಾಡಲಾಗುತ್ತದೆ. ಈ ವರ್ಷವಂತೂ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿದ್ದರಿಂದ ವಾರದಿಂದ ನದಿಗೆ ನೀರು ಹರಿಸಲಾಗುತ್ತಿದೆ. ಗುರುವಾರ ಅಪಾರ ಪ್ರಮಾಣದಲ್ಲಿ ಜನ ಬರುವ ನಿರೀಕ್ಷೆಯಿದ್ದರೂ ಟಿ.ಬಿ. ಡ್ಯಾಂ ಮಂಡಳಿಯಾಗಲಿ, ಸ್ಥಳೀಯ ಆಡಳಿತವಾಗಲಿ ಸೂಕ್ತ ಸಿದ್ಧತೆ ಮಾಡಿಕೊಂಡಿರುವುದು ಕಂಡು ಬರಲಿಲ್ಲ.

ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲೂ ದಿನವಿಡೀ ಜನಜಾತ್ರೆ ಕಂಡು ಬಂತು. ಸ್ಥಳೀಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇತ್ತೀಚೆಗೆ ನದಿಯಲ್ಲಿ ಪ್ರವಾಹ ಬಂದು, ವಿರೂಪಾಪುರ ಗಡ್ಡಿಯಲ್ಲಿ ಸಿಲುಕಿಕೊಂಡಿದ್ದ ಪ್ರವಾಸಿಗರನ್ನು ವಾಯುಪಡೆಯ ಹೆಲಿಕ್ಯಾಪ್ಟರ್‌ನಿಂದ ಸ್ಥಳಾಂತರಿಸಲಾಗಿತ್ತು. ಈ ವಿಷಯ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರಿಂದ ಅನೇಕ ಪ್ರವಾಸಿಗರು ಅವರ ನಿಗದಿತ ಪ್ರವಾಸ ಮೊಟಕುಗೊಳಿಸಿದ್ದಾರೆ. ಅನೇಕ ಹೋಟೆಲ್‌ಗಳಲ್ಲಿ ಆನ್‌ಲೈನ್‌ ಮೂಲಕ ಮುಂಚಿತವಾಗಿ ಕಾಯ್ದಿರಿಸಿದ್ದ ಹೋಟೆಲ್‌ ರೂಂಗಳನ್ನು ಪ್ರವಾಸಿಗರು ರದ್ದುಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.