ADVERTISEMENT

ರಸ್ತೆಗಿಳಿಯದ ಒಂದೇ ಒಂದು ಬಸ್‌

ಸಾರಿಗೆ ಬಂದ್‌ಗೆ ಭಾರಿ ಬೆಂಬಲ; ಕಿಡಿಗೇಡಿಗಳಿಂದ ಬಸ್ಸಿಗೆ ಕಲ್ಲು; ಖಾಸಗಿ ವಾಹನಗಳಿಂದ ವಸೂಲಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 12:48 IST
Last Updated 12 ಡಿಸೆಂಬರ್ 2020, 12:48 IST
ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ಮಂಗಳವಾರ ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಹೊಸಪೇಟೆ ಬಸ್‌ ನಿಲ್ದಾಣದಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿತ್ತು
ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ಮಂಗಳವಾರ ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಹೊಸಪೇಟೆ ಬಸ್‌ ನಿಲ್ದಾಣದಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿತ್ತು   

ಹೊಸಪೇಟೆ: ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ಸಂಸ್ಥೆ ಚಾಲಕರು, ನಿರ್ವಾಹಕರು ನಡೆಸುತ್ತಿರುವ ಮುಷ್ಕರಕ್ಕೆ ಶನಿವಾರ ಎರಡನೇ ದಿನ ಜಿಲ್ಲೆಯಾದ್ಯಂತ ಭಾರಿ ಬೆಂಬಲ ವ್ಯಕ್ತವಾಗಿದೆ.

ಮೊದಲ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಎರಡನೇ ದಿನ ಹೆಚ್ಚಿನ ಚಾಲಕರು, ನಿರ್ವಾಹಕರು ಕೆಲಸ ಬಹಿಷ್ಕರಿಸಿ ಮುಷ್ಕರದಲ್ಲಿ ಪಾಲ್ಗೊಂಡರು. ಇದರ ಪರಿಣಾಮ ಜಿಲ್ಲೆಯ ಯಾವ ಭಾಗದಲ್ಲೂ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ.

ಬೆಳಿಗ್ಗೆ ಹೊಸಪೇಟೆ ವಿಭಾಗಕ್ಕೆ ಸೇರಿದ ಬಸ್ಸಿಗೆ ಕೆಲ ಕಿಡಿಗೇಡಿಗಳು ಹಗರಿಬೊಮ್ಮನಹಳ್ಳಿಯಲ್ಲಿ ಕಲ್ಲು ತೂರಿದ್ದರಿಂದ ಅದರ ಹಿಂಭಾಗದ ಗಾಜು ಪುಡಿಯಾಗಿದೆ. ಈ ಕುರಿತು ಮುಷ್ಕರ ನಿರತರು ಅಲ್ಲಿನ ಪೊಲೀಸ್‌ ಠಾಣೆಗೆ ದೂರು ಕೊಟ್ಟಿದ್ದಾರೆ. ‘ಮುಷ್ಕರದ ದಿಕ್ಕು ತಪ್ಪಿಸಲು ಕೆಲವರು ಈ ರೀತಿಯ ಕೃತ್ಯ ಎಸಗಿದ್ದಾರೆ’ ಎಂದು ಆರೋಪಿಸಿದ್ದಾರೆ. ಬಳಿಕ ಅಲ್ಲಿ ಬಸ್‌ ಸಂಚಾರ ಸ್ಥಗಿತಗೊಂಡಿತು.

ADVERTISEMENT

ಬಳ್ಳಾರಿ, ಹೊಸಪೇಟೆ, ಸಂಡೂರು, ಸಿರುಗುಪ್ಪ, ಕಂಪ್ಲಿ, ಕುರುಗೋಡು, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೊಟ್ಟೂರು, ಹರಪನಹಳ್ಳಿಯಲ್ಲೂ ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು.
ಬಳ್ಳಾರಿಯ ಬಸ್‌ ಡಿಪೊ ಬಳಿ ಮುಷ್ಕರ ನಿರತರು ಆಹಾರ ತಯಾರಿಸಿ, ಅಲ್ಲಿಯೇ ಊಟ ಮಾಡಿ ಗಮನ ಸೆಳೆದರು. ಮುಷ್ಕರದಿಂದ ಕೆಎಸ್ಆರ್‌ಟಿಸಿ ಯೂನಿಯನ್‌ನವರು ದೂರ ಉಳಿದರೂ ಸಹ ಆ ಸಂಘಟನೆಯ ಅನೇಕರು ಮಂಗಳವಾರ ಮುಷ್ಕರ ಬೆಂಬಲಿಸಿ ಪಾಲ್ಗೊಂಡರು.

ಖಾಸಗಿ ವಾಹನಗಳಿಂದ ವಸೂಲಿ:

ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗಿಳಿಯದ ಕಾರಣ ಖಾಸಗಿ ವಾಹನಗಳ ಮಾಲೀಕರು ಇದನ್ನೇ ಬಂಡವಾಳ ಮಾಡಿಕೊಂಡು ಪ್ರಯಾಣಿಕರಿಂದ ಶನಿವಾರ ಹೆಚ್ಚಿನ ಹಣ ವಸೂಲಿ ಮಾಡಿದರು.

ಹೊಸಪೇಟೆ–ಬಳ್ಳಾರಿ ನಡುವೆ ಸಂಚರಿಸಲು ಬಸ್ಸಿಗೆ ₹65 ಟಿಕೆಟ್‌ ಇದೆ. ಆದರೆ, ಖಾಸಗಿ ವಾಹನಗಳವರು ₹150ರಿಂದ ₹200 ಪಡೆದರು. ಸಿಟಿ ಬಸ್‌ಗಳು ಕೂಡ ಸಂಚರಿಸದ ಕಾರಣ ಆಟೊಗಳವರು ಪ್ರಯಾಣಿಕರಿಂದ ಹೆಚ್ಚಿನ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತು. ಈ ಕುರಿತು ಖುದ್ದು ‘ಪ್ರಜಾವಾಣಿ’ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಅದು ಸತ್ಯ ಎನ್ನುವುದು ಗಮನಕ್ಕೆ ಬಂತು.

‘ಸಾರಿಗೆ ಸಂಸ್ಥೆಯವರು ಅವರ ಹಕ್ಕುಗಳಿಗಾಗಿ ಮುಷ್ಕರ ನಡೆಸುತ್ತಿದ್ದಾರೆ. ಬಸ್‌ಗಳು ಸಂಚರಿಸುತ್ತಿಲ್ಲ. ಹಾಗಂತ ಖಾಸಗಿಯವರು ಮನಬಂದಂತೆ ಹಣ ವಸೂಲಿ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ. ಹತ್ತೋ, ಇಪ್ಪತ್ತೋ ಹೆಚ್ಚಿಗೆ ಪಡೆಯಲಿ. ಆದರೆ, ನೂರು, ಇನ್ನೂರು ಹೆಚ್ಚಾಗಿ ಪಡೆಯುತ್ತಿರುವುದು ಸರಿಯಲ್ಲ. ಬಡವರು, ಮಧ್ಯಮ ವರ್ಗದವರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಸ್ಥಳೀಯ ನಿವಾಸಿ ರಮೇಶ ಆಗ್ರಹಿಸಿದರು.

ನಿಲ್ದಾಣ ಬಿಕೊ:

ಸೋಮವಾರ ಬೆರಳೆಣಿಕೆಯಷ್ಟು ಬಸ್‌ಗಳು ಸಂಚರಿಸಿದ್ದರಿಂದ ಇಲ್ಲಿನ ಕೇಂದ್ರ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಕಾಣಿಸಿಕೊಂಡಿದ್ದರು. ತಡಹೊತ್ತಿನ ವರೆಗೆ ಬಸ್‌ಗಾಗಿ ಕಾದು ಕುಳಿತಿದ್ದರು. ಆದರೆ, ಮಂಗಳವಾರ ಬಹುತೇಕರು ಬಸ್‌ ನಿಲ್ದಾಣದತ್ತ ಸುಳಿಯಲಿಲ್ಲ. ಹೀಗಾಗಿ ಇಡೀ ನಿಲ್ದಾಣ ಬಿಕೋ ಎನ್ನುತ್ತಿತ್ತು.

ಕೆಲವರು ನಿಲ್ದಾಣದ ಕಡೆಗೆ ಬಂದರೂ ವಿಷಯ ತಿಳಿದು ಹಿಂತಿರುಗಿದರು. ಖಾಸಗಿ ಬಸ್‌ಗಳ ಮೂಲಕ ಅನ್ಯ ಕಡೆಗೆ ತೆರಳಿದರು. ಖಾಸಗಿಯವರು ಹೆಚ್ಚಿನ ಹಣ ಕೇಳುತ್ತಿದ್ದರಿಂದ ಹಲವರು ಮನೆ ಕಡೆಗೆ ಮುಖ ಮಾಡಿದರು. ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲಿಯೂ ಇದೇ ಸ್ಥಿತಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.